ಕೊರೊನಾ, ನೈಟ್ ಕರ್ಫ್ಯೂ ತಂದ ಕಂಟಕ- ಕತ್ತಲಿನತ್ತ ರಂಗ ಕಲಾವಿದರ ಬದುಕು

ವಿಜಯಪುರ: ಅವರ ಬಹುತೇಕ ಕಾಯಕ ವೃತ್ತಿ ಆರಂಭವಾಗುವುದೇ ಮುಸ್ಸಂಜೆ ಮತ್ತು ರಾತ್ರಿಯ ವೇಳೆ.  ಆದರೆ, ಜನರ ಬಾಳಲ್ಲಿ ಆಟವಾಡುತ್ತಿರುವ ಕೊರೊನಾ ಇವರ ಬಾಳಿನಲ್ಲಿ ಅಂಧಕಾರ ಉಂಟು ಮಾಡುತ್ತಿದೆ.  ಕಳೆದ ಎರಡು ವರ್ಷಗಳಿಂದ ಸಂಕಷ್ಟದಲ್ಲಿದ್ದ ರಂಗಭೂಮಿ ಕಲಾವಿದರ ಬದುಕು ಇತ್ತೀಗಷ್ಟೇ ಸುಧಾರಿಸುವ ಲಕ್ಷಣಗಳು ಕಾಣಿಸಿಕೊಂಡಿದ್ದವು.  ಆದರೆ, ಕೊರೊನಾ ಒಮಿಕ್ರಾನ್ ಆತಂಕ ಈಗ ಮತ್ತೆ ಅವರ ಬದುಕನ್ನು ಬರ್ಬಾರ್ ಮಾಡುವತ್ತ ಸಾಗಿದೆ.

ಕೊರೊನಾ ಲಾಕಡೌನ್ ಸಡಿಲಗೊಂಡಿದ್ದರಿಂದ ರಂಗಭೂಮಿ ಕಲಾವಿದರು ಮತ್ತೆ ಬಣ್ಣ ಹಚ್ಚಿಕೊಂಡು ವೀಕ್ಷಕರಿಗೆ ಮನೋರಂಜನೆ ನೀಡುತ್ತಿದ್ದರು.  ಇನ್ನೇನು ತಮ್ಮ ವೃತ್ತಿ ಜೀವನ ಮತ್ತೆ ಹಳಿಗೆ ಬರುತ್ತಿದೆ ಎಂದುಕೊಳ್ಳುವಷ್ಟರಲ್ಲಿಯೇ ಈಗ ರಾತ್ರಿ ಕರ್ಫ್ಯೂ ಇವರ ಬಾಳಿಗೆ ಮತ್ತೆ ಅಂಧಕಾರ ತಂದೊಡ್ಡುತ್ತಿದೆ.

ಕೋವಿಡ್ ಹೊಡೆತಕ್ಕೆ ರಂಗಭೂಮಿ ಕಲಾವಿದರು ಅಕ್ಷರಶಃ ನಲುಗಿ ಹೋಗಿದ್ದಾರೆ.  ಕೊರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಬಂದ್ ಆಗಿದ್ದ ನಾಟಕ ಕಂಪನಿಗಳು ಕೆಲವು ತಿಂಗಳಿಂದ ಆರಂಭವಾಗಿದ್ದವು. ಆದರೆ ಇದೀಗ ಮತ್ತೆ ಕೋವಿಡ್, ಓಮಿಕ್ರಾನ್ ಆತಂಕ ಇಡೀ ರಂಗಭೂಮಿ ಕಲಾವಿದರನ್ನು ಕಣ್ಣಿರಲ್ಲಿ ಕೈ ತೊಳೆಯುವಂತೆ ಮಾಡಿದೆ.  ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ನಾಟಕಗಳು ರಾತ್ರಿ ವೇಳೆಯಲ್ಲಿ ಪ್ರದರ್ಶನವಾಗುತ್ತವೆ.  ಪ್ರೇಕ್ಷಕರೂ ಕೂಡ ಮುಸ್ಸಂಜೆ ಮತ್ತು ರಾತ್ರಿ ವೇಳೆ ತಮ್ಮ ಕೆಲಸ ಮುಗಿಸಿಕೊಂಡು ಮನೋರಂಜನೆಗಾಗಿ ನಾಟಕ ಥೇಟರ್ ಗಳತ್ತ ಬರುತ್ತಾರೆ.  ಆದರೆ, ಈಗ ನೈಟ್ ಕರ್ಫೂ ರಂಗಭೂಮಿ ಕಲಾವಿದರ ಬಾಳಲ್ಲಿ ಕತ್ತಲೆ ಮೂಡಿಸಿದೆ.

ವಿಜಯಪುರ ನಗರದ ಹೊರಭಾಗದಲ್ಲಿ ಬಾಗಲಕೋಟೆ ರಸ್ತೆಯಲ್ಲಿ ಹಲವು ನಾಟಕ ಕಂಪನಿಗಳು ಟೆಂಟ್ ಹಾಕಿ ಪ್ರದರ್ಶನ ನಡೆಸುತ್ತಿವೆ.  ಕಳೆದ ಒಂದು ತಿಂಗಳಿಂದ ನಾನಾ ಜಿಲ್ಲೆಯ ನಾಟಕ ಕಂಪನಿಗಳು ನಗರಕ್ಕೆ ಆಗಮಿಸಿ ಟೆಂಟ್ ಹಾಕಿವೆ.  ಹೊಸ ವರ್ಷಾಚರಣೆ ಹಾಗೂ ವಿಜಯಪುರ ಸುಪ್ರಸಿದ್ಧ ಸಿದ್ದೇಶ್ವರ ಜಾತ್ರೆ ವೇಳೆ ಉತ್ತಮ ಆದಾಯ ಪಡೆಯಬಹುದು ಎಂದು ಆಶಾಭಾವನೆ ರಂಗಭೂಮಿ ಕಲಾವಿದರಲ್ಲಿತ್ತು.  ಆದರೆ, ಕೊರೊನಾ 3ನೇ ಅಲೆಯ ಆತಂಕ ಕಲಾವಿದನ್ನು ನಡು ನೀರಿನಲ್ಲಿ ನಿಲ್ಲಿಸಿದಂತಾಗಿದೆ.  ನೈಟ್ ಕರ್ಫೂ ಕಾರಣದಿಂದ ಈಗ ರಾತ್ರಿ ಪ್ರದರ್ಶನ ಬಂದ್ ಮಾಡಲಾಗಿದೆ.  ದಿನಕ್ಕೆ ಕೇವಲ ಎರಡು ಶೋಗಳು ಮಾತ್ರ ನಡೆಯುತ್ತವೆ.  ಇದರ ಜೊತೆಯಲ್ಲಿಯೇ ವಿಜಯಪುರ ಪ್ರತಿಷ್ಠಿತ ಶ್ರೀ ಸಿದ್ಧರಾಮೇಶ್ವರ ಜಾತ್ರೆ ಕೂಡ ರದ್ದಾಗಿದೆ.  ಹೀಗಾಗಿ ಒಂದೆಡೆ ಕೊರೊನಾ ಆತಂಕ ಮತ್ತೋಂದೆಡೆ ಶ್ರೀ ಸಿದ್ಧರಾಮೇಶ್ವರ ಜಾತ್ರೆ ರದ್ದು ಮೇಲಾಗಿ ನೈಟ್ ಕರ್ಫ್ಯೂ ಈಗ ನಾಟಕ ಟೆಂಟ್ ಗಳತ್ತ ಆಗಮಿಸುವ ಪ್ರೇಕ್ಷಕರ ಸಂಖ್ಯೆಯನ್ನು ಕಡಿಮೆ ಗೊಳಿಸಿದೆ.

 

ಸಮಾನ್ಯವಾಗಿ ಒಂದು ನಾಟಕ ಕಂಪನಿಯಲ್ಲಿ 25 ರಿಂದ 30 ಜನ ಕಲಾವಿದರ ಕೆಲಸ ಮಾಡುತ್ತಾರೆ.  ಮಹಿಳಾ ಕಲಾವಿದರಿಗೆ ದಿನಕ್ಕೆ ರೂ. 1000 ಮತ್ತು ಪುರುಷ ಕಲಾವಿರದಿರೆ ರೂ. 800 ಸಂಬಳ ನೀಡಲಾಗುತ್ತದೆ.  ಇದರ ಜೊತೆಗೆ ನಾಟಕ ಪ್ರದರ್ಶನಗಳಿಗೆ ಹಾಕಲಾಗಿರುವ ಟೆಂಟ್ ಜಾಗದ ಬಾಡಿಗೆ, ವಿದ್ಯುತ್ ಬಿಲ್ ಸೇರಿದಂತೆ ಇತರ ಖರ್ಚುಗಳು ಸೇರಿಸಿದೆರೆ ಪ್ರತಿದಿನ ಸುಮಾರು ರೂ. 15 ರಿಂದ ರೂ. 16 ಸಾವಿರ ಖರ್ಚಾಗುತ್ತದೆ.  ಆದರೆ, ಪ್ರೇಕ್ಷಕರ ಕೊರತೆಯಿಂದಾಗಿ ಪ್ರತಿದಿನ ರೂ. 5000 ಹಣ ಗಳಿಸುವುದೂ ಕೂಡ ಕಷ್ಟವಾಗಿದೆ.

ಪರಿಸ್ಥಿತಿ ಹೀಗಾದರೆ ರಂಗಭೂಮಿ ಉಳಿಯುವುದು ಹೇಗೆ ಎನ್ನುವ ಆತಂಕ ಎದುರಾಗಿದೆ.  ನೈಟ್ ಕರ್ಫ್ಯೂಗೂ ಮುಂಚೆ ಪ್ರತಿದಿನ ಸುಮಾರು 200 ಪ್ರೇಕ್ಷಕರು ತಮಗಿಷ್ಟವಾದ ನಾಟಕಗಳನ್ನು ವೀಕ್ಷಿಸಲು ಆಗಮಿಸುತ್ತಿದ್ದರು.  ಆದರೆ, ಈಗ ಪ್ರತಿದಿನ ಕೇವಲ 50 ರಿಂದ 60 ಜನ ಮಾತ್ರ ನಾಟಕ ನೋಡಲು ಬರುತ್ತಿದ್ದಾರೆ.  ಇದು ರಂಗಭೂಮಿಯನ್ನೇ ನಂಬಿರುವ ಕಲಾವಿದರ ಬಾಳಿಗೆ ಬರ ಸಿಡಿಲಿನಂತೆ ಬಂದೆರಗಿದೆ.  ನಾಟಕ ಕಂಪನಿಗಳ ಮಾಲಿಕರ ನಷ್ಟದಲ್ಲಿಯೇ ಶೋ ನಡೆಸುವಂತಾಗಿದೆ.

ಸರಕಾರ ಸಂಕಷ್ಟದಲ್ಲಿರುವ ತಮಗೆ ಸಹಾಯಕ್ಕೆ ಮುಂದಾಗಬೇಕು.  ತಮ್ಮ ಬಾಳಿಗೆ ಬೆಳಕಾಗಬೇಕು ಎಂದು ನಾಲತವಾಡ ಶ್ರೀ ವೀರೇಶ್ವರ ನಾಟ್ಯ ಸಂಘದ ಮಾಲಿಕ ಸಿದ್ದು ನಾಲತವಾಡ ಮತ್ತು ರಂಗ ಕಲಾವಿದೆ ಅನೀತಾ ಶಟ್ಟಿ ಮತ್ತು ಶಾಮ ದೇಶಮುಖ ಆಗ್ರಹಿಸಿದ್ದಾರೆ.

 

Leave a Reply

ಹೊಸ ಪೋಸ್ಟ್‌