ಜ್ಞಾನ ಜೋಳಿಗೆ ಮೂಲಕ ಸಂಗ್ರಹಿಸಿದ ಪುಸ್ತಕಗಳನ್ನು ಸರಕಾರಿ ಶಾಲೆಗೆ ನೀಡಿದ ಸಮಾಜ ಸೇವಕ ಸಂಗಮೇಶ ಬಬಲೇಶ್ವರ

ವಿಜಯಪುರ: ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ.  ಜಗತ್ತಿನಲ್ಲಿ ನಾವು ಪಡೆದ ಅಧಿಕಾರ, ಗಳಿಸಿದ ಆಸ್ತಿಯನ್ನು ಯಾರು ಬೇಕಾದರೂ ಕಿತ್ತುಕೊಳ್ಳಬಹುದು.  ಆದರೆ, ಪಡೆದ ಜ್ಞಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸಮಾಜ ಸೇವಕ ಮತ್ತು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಗೆ ಜ್ಞಾನ ಜೋಳಿಗೆಯ ಮೂಲಕ ಸಂಗ್ರಹಗೊಂಡ ಪುಸ್ತಕಗಳನ್ನು ನೀಡಿ ಅವರು ಮಾತನಾಡಿದರು.

ಹಣ ಮತ್ತು ಅಧಿಕಾರಕ್ಕಿಂತ ಜ್ಞಾನ ಮಿಗಿಲಾಗಿದೆ.  ಯಾರು ಸತತವಾಗಿ ಓದಿ ಕಠಿಣ ಪರಿಶ್ರಮ ಪಟ್ಟು ಮೇಲೆ ಬರುತ್ತಾರೋ ಅವರನ್ನು ಜಗತ್ತಿನ ಯಾವ ಶಕ್ತಿಯೂ ಅಲ್ಲಾಡಿಸಲಾರದು.  ಓ೦ದು ಪುಸ್ತಕ ನಮ್ಮ ಇಡೀ ಜೀವನವನ್ನು ಬದಲಿಸಬಲ್ಲದು.  ಪುಸ್ತಕವನ್ನು ತಲೆತಗ್ಗಿಸಿ ಓದಿದವರು ಜಗತ್ತಿನಲ್ಲಿ ತಲೆಯೆತ್ತಿ ನಿಲ್ಲಬಲ್ಲರು.  ತಾವು ಒಳ್ಳೆಯ ಓದುಗರಾಗಬೇಕು.  ನೀವು ಓದಿ ಮುಗಿಸಿದ ನಂತರ ಆ ಪುಸ್ತಕವನ್ನ ಇನ್ನೊಬ್ಬರಿಗೆ ಓದಲು ಕೊಡಿ,  ಅದರಿಂದ ಜ್ಞಾನವನ್ನು ಇನ್ನೊಬ್ಬರಿಗೆ ಹಂಚಿದ ಪುಣ್ಯ ನಿಮಗೆ ಲಭಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಂಗಮೇಶ ಬಬಲೇಶ್ವರ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಅವರು ಸಂಗ್ರಹಿಸಿದ ಪುಸ್ತಕಗಳನ್ನು ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಚಾರ್ಯರಾದ ಪುರೋಹಿತ್ ಅವರ ಮೂಲಕ ಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.  ಅಲ್ಲದೇ, ಇದೇ ಸಂದರ್ಭದಲ್ಲಿ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ತನ್ನ ಅಜ್ಜಿಯ ಆಶ್ರಯದಲ್ಲಿ ಓದುತ್ತಿರುವ ಮೀನಾಕ್ಷಿ ಗವಾರಿ ಎನ್ನುವ ವಿದ್ಯಾರ್ಥಿನಿಯನ್ನು ತಮ್ಮ ಟ್ರಸ್ಟ್ ವತಿಯಿಂದ ಶೈಕ್ಷಣಿಕವಾಗಿ ದತ್ತು ಪಡೆದ ಸಂಗಮೇಶ ಬಬಲೇಶ್ವರ, ಈ ವಿದ್ಯಾರ್ಥಿನಿಯ ಪದವಿ ತರಗತಿ ಮುಗಿಸುವವರೆಗಿನ ಅವಳ ಶೈಕ್ಷಣಿಕ ವೆಚ್ಚವನ್ನು ಸಂಪೂರ್ಣವಾಗಿ ಟ್ರಸ್ಟ್ ವತಿಯಿಂದ ಭರಿಸಲಾಗುವುದು ಎಂದು ಹೇಳಿದರು.

ಮಮದಾಪುರ ಗ್ರಾ. ಪಂ. ಅಧ್ಯಕ್ಷೆ ಸಿಂಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷ ಲಕ್ಷ್ಮಣ ತೇಲಿ, ಕೃಷಿ ಪ್ರಾಥಮಿಕ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಸವರಾಜ ಗಲಗಲಿ, ಪಿಕೆಪಿಎಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾಶಿವಯ್ಯ ಕಾಖಂಡಿಕಿಮಠ, ತಾ. ಪಂ. ಮಾಜಿ ಅಧ್ಯಕ್ಷರಾದ ಕೌಸರ ಅತ್ತಾರ, ಗ್ರಾ. ಪಂ. ಉಪಾಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ಗ್ರಾ. ಪಂ. ಸದಸ್ಯ ರಾಮಜಿ ಅವಟಿ, ರಾಮು ನಾಯಕ, ಲಕ್ಷ್ಮಣ ಭಜಂತ್ರಿ, ಹುಸೇನಸಾಬ ಕಿಜಿ, ಮಹಾಂತೇಶ ಕುರಿ, ಡಾ. ಜಂಬಗಿ, ಎಂ. ಎಸ್. ಪಟ್ಟಣಶೆಟ್ಟಿ, ಗ್ರಾಮದ ಹಿರಿಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌