ಪಂಜಾಬ ಘಟನೆ ಖಂಡಿಸಿ ವಿಜಯಪುರ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಪಂಜಿನ ಮೆರವಣಿಗೆ

ವಿಜಯಪುರ: ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒದಗಿಸಲಾಗಿದ್ದ ಭದ್ರತಾ ವೈಫಲ್ಯ ಖಂಡಿಸಿ ವಿಜಯಪುರದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತು.

ವಿಜಯಪುರ ನಗರದ ಶಿವಾಜಿ ಚೌಕಿನಲ್ಲಿ ಪಂಜಿನ ಮೆರವಣಿಗೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಪಂಜಾಬ ಸರಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಪಾಕಿಸ್ತಾನದ ಗಡಿಯಿಂದ ಕೇವಲ 10 ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿರುವುದು ವಿಷಾಧನೀಯ. ಪ್ರಧಾನಿ ನರೇಂದ್ರ ಮೋದಿ ಇಂಥ ಘಟನೆಯಲ್ಲಿ ಸಿಲುಕಿಸುವುದು ವಿಷಾಧನೀಯವಾಗಿದೆ. ಕೂಡಲೇ ಪಂಜಾಬ ಕಾಂಗ್ರೆಸ್ ಸರಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ನಿನ್ನೆಯ ಘಟನೆ ರಾಜಕೀಯ ಪ್ರೇರಿತ ಮತ್ತು ಕಾಂಗ್ರೆಸ್ ಸರಕಾರದ ವಿಷಪೂರಿತ ವ್ಯವಸ್ಥಿತ ಸಂಚಾಗಿದೆ. ಇದೊಂದು ದೊಡ್ಡ ಷಡ್ಯಂತ್ರ. ಇಂಥ ನೈತಿಕತೆಯಿಲ್ಲದೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಬರುವ ದಿನಗಳಲ್ಲಿ ದೇಶದಲ್ಲಿ ನಾಮಾವಶೇಷ ಆಗಲಿದೆ ಎಂದು ಹೇಳಿದರು.

ಬಿಜೆಪಿ ವಿಭಾಗ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ ಮಾತನಾಡಿ,
ಸಂಖ್ಯಾಬಲ ಕಳೆದುಕೊಂಡ ಕಾಂಗ್ರೆಸ್ ದಿಕ್ಕಿಲ್ಲದಂತಾಗಿ ಇಂಥ ಕೃತ್ಯ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಕೀಳುಮಟ್ಟದ ಕೃತ್ಯವಾಗಿದೆ. ಇಂಥ ಕೃತ್ಯ ಮಾಡುತ್ತಿರುವ ಕಾಂಗ್ರೆಸ್ ರಾಜಕಾರಣ ಮಾಡಲು ನೈತಿಕತೆ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ, ಮಳುಗೌಡ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌