ವಿಜಯಪುರ: ಕೊರೊನಾ ಅದರಲ್ಲೂ ಒಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ವಿಧಿಸಿದೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆ. 5 ಗಂಟೆಯವರೆಗೆ ಈ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಯಾವ ಚಟುವಟಿಕೆಗಳಿಗೆ ಅವಕಾಶವಿದೆ? ಯಾವ ಕೆಲಸಗಳಿಗೆ ಅನುಮತಿ ಎಲ್ಲ ಎಂಬುದರ ಕುರಿತು ರಾಜ್ಯ ಸರಕಾರ ನಿರ್ದಿಷ್ಠ ಮಾರ್ಗಸೂಚಿ ಹೊರಡಿಸಿದೆ.
ಈ ವೀಕೆಂಡ್ ಕರ್ಫ್ಯೂನಲ್ಲಿ ಬಸವ ನಾಡು ವಿಜಯಪುರದಲ್ಲಿ ಏನೆಲ್ಲ ಕಂಡಿಶನ್ ಹಾಕಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ತುರ್ತು, ಅತ್ಯಾವಶ್ಯಕ ಸೇವೆಗಳು ಮತ್ತು ಕೋವಿಡ್ ನಿಯಂತ್ರಣ ಮತ್ತು ಿರ್ವಹಣೆ ಕಾರ್ಯಗಳನ್ನು ಮಾಡುತ್ತಿರುವ ಎಲ್ಲ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳು ಹಾಗೂ ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಅವುಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅನಿರ್ಬಂಧಿತ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲ ಸಾರ್ವಜನಿಕ ಉದ್ಯಾನವನಗಳನ್ನು ಮಚ್ಚಲು ಸೂಚನೆ ನೀಡಲಾಗಿದೆ.
ಮಾಹಿತಿ ತಂತ್ರಜ್ಞಾನ ಉದ್ದಿಮೆಗಳನ್ನು ಒಳಗೊಂಡಂತೆ ಎಲ್ಲ ಉದ್ದಿಮೆಗಳ ಕಾರ್ಯಾಚರಣೆಗೆ ಕರ್ಫ್ಯೂವಿನಿಂದ ವಿನಾಯಿತಿ ನೀಡಲಾಗಿದೆ. ನೌಕರರು ಆಯಾ ಸಂಘ, ಸಂಸ್ಥೆಗಳು ನೀಡುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸಿ ಸಂಚರಿಸಲು ಅನುಮತಿ ನೀಡಲಾಗಿದೆ.
ತುರ್ತು ಚಿಕಿತ್ಸೆಗಾಗಿ ಸಂಚರಿಸಬೇಕಿರುವ ರೋಗಿಗಳು, ಅವರ ಪರಿಚಾರಕರು ಮತ್ತು ಲಸಿಕೆ ಹಾಕಿಸಿಕೊಳ್ಳಲು ಉದ್ದೇಶಿಸಿರುವ ವ್ಯಕ್ತಿಗಳಿಗೆ ಕನಿಷ್ಠ ರುಜುವಾತನ್ನು ಹಾಜರು ಪಡಿಸಿ ಸಂಚರಿಸಬಹುದಾಗಿದೆ.
ಆಹಾರ, ದಿನಸಿ, ಹಣ್ಣು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತುಗಳು, ಮಾಂಸ ಮತ್ತು ಮೀನು, ಪಶು ಆಹಾರದ ಅಂಗಡಿಗಳು, ಸಾರ್ವಜನಿಕ ನ್ಯಾಯಬೆಲೆ ಅಂಗಡಿಗಳು, ಬೀದಿ ಬದಿ ವ್ಯಾಪಾರುಗಳು ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಗೆ ಓಡಾಡುವುದನ್ನು ಕಡಿಮೆ ಮಾಡಲು ದಿನದ 24 ಗಂಟೆ ಅವಧಿಯಲ್ಲಿ ಸಾಮಗ್ರಿಗಳನ್ನು ಮನೆಮನೆಗಳಿಗೆ ವಿತರಿಸಲು ಹೋಂ ಡೆಲಿವರಿಗೆ ಅವಕಾಶ ನೀಡಲಾಗಿದ್ದು, ಈ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ.
ರೆಸ್ಟಾರಂಟ್ ಮತ್ತು ಹೋಟೇಲುಗಳಲ್ಲಿ ಆಹಾರವನ್ನು ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದೆ.
ರೈಲು ಮತ್ತು ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಈ ಪ್ರಯಾಣಿಕರಿಗೆ ಅನುಕೂಲವಾಗಲು ಸಾರ್ವಜನಿಕ ಸಾರಿಗೆ ವಾಹನಗಳು ಮತ್ತು ಖಾಸಗಿ ವಾಹನಗಳು ಹಾಗೂ ಟ್ಯಾಕ್ಸಿಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಈ ಪ್ರಯಾಣಿಕರು ಪ್ರಯಾಣಕ್ಕೆ ಅಗತ್ಯವಾಗಿರುವ ದಾಖಲೆ ಅಥವಾ ಟಿಕೆಟ್ ನೀಡಿ ಕೊರೊನಾ ಮಾರ್ಗಸೂಚಿಯನ್ನು ಪಾಲಿಸಿ ಪ್ರಯಾಣ ಮಾಡಬಹುದಾಗಿದೆ.
ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಹೊರಾಂಗಣದಲ್ಲಿ 200 ಮತ್ತು ಒಳಾಂಗಣದಲ್ಲಿ 100 ಜನರು ಮೀರದಂತೆ ಮದುವೆ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದೆ.