ಮಹಿಳಾ ವಿವಿ ಮುಚ್ಚಿದರೆ ಉಗ್ರ ಹೋರಾಟ- ನ್ಯಾಯವಾದಿ ಶ್ರೀನಾಥ ಪೂಜಾರಿ ಎಚ್ಚರಿಕೆ

ವಿಜಯಪುರ: ರಾಜ್ಯದ ಪ್ರಥಮ ಮತ್ತು ಏಕೈಕ ಮಹಿಳಾ ವಿಶ್ವವಿದ್ಯಾಲಯ ಎಂದೇ ಹೆಸರಾಗಿರುವ ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರಂಭಿಸಲಾಗಿರುವ ಅಕ್ಕ ಮಹಾದೇವಿ ಮಹಿಳಾ ವಿವಿಯನ್ನು ಮುಚ್ಚಲು ಸರಕಾರ ಹುನ್ನಾರ ನಡೆಸಿದೆ ಎಂದು ನ್ಯಾಯವಾದಿ ಶ್ರೀನಾಥ ಪೂಜಾರಿ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಲಾಗಿರುವ ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚಲು ಸರಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಹುನ್ನಾರ ನಡೆಸಿದೆ ಎಂದು ನ್ಯಾಯವಾದಿ ಶ್ರೀನಾಥ ಪೂಜಾರಿ ಆರೋಪಿಸಿದರು.

ಒಂದು ವೇಳ ಸರಕಾರ ಇಂಥ ಕ್ರಮಕ್ಕೆ ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

 

ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ. ನಂಜುಂಡಪ್ಪ ನೀಡಿದ ವರದಿಯ ಆಧಾರದ ಮೇಲೆ ಹಿಂದುಳಿದ ವಿಜಯಪುರ ಜಿಲ್ಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಮಹಿಳೆಯರ ಶಿಕ್ಷಣದ ಪ್ರಗತಿಗಾಗಿ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ. ಆದರೆ, ಸಂಪನ್ಮೂಲ ಕೊರತೆಯ ನೆಪಹೇಳಿ ಈ ವಿಶ್ವವಿದ್ಲಾಯವನ್ನು ಮುಚ್ಚುವ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದರು.

ಮಹಿಳೆಯರಿಗೆ ಮೀಸಲಾಗಿರುವ ಈ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯಿಂದ ಆದಾಯ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಕೋ ಎಜುಕೇಶನ ಅಂದರೆ ಇತರ ವಿಶ್ವವಿದ್ಯಾಲಯಗಳಂತೆ ಪುರುಷರಿಗೂ ಅವಕಾಶ ಕಲ್ಪಿಸುವ ವಿಶ್ವವಿದ್ಯಾಲಯವಾಗಿ ಬದಲಾಯಿಸುವ ಹುನ್ನಾರ ನಡೆದಿದೆ. ಈಗಾಗಲೇ ಈ ನಿಟ್ಟಿನಲ್ಲಿ ಒಂದು ಸುತ್ತಿನ ಪ್ರಯತ್ನ ಕೂಡ ಮುಗಿದಿದೆ. ಜನಪ್ರತಿನಿಧಿಗಳೊಂದಿಗೂ ಸರಕಾರ ಮಾತುಕತೆ ನಡೆಸಿದ್ದು, ಅವರ ಪ್ರತಿನಿಧಿಯೊಬ್ಬರು ಈಗಾಗಲೇ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಜೊತೆಗೆ ಮಾತುಕತೆ ಕೂಡ ನಡೆಸಿದ್ದಾರೆ. ಅಲ್ಲದೇ, ಸರಕಾರದ ಮಟ್ಟದಲ್ಲಿ ಈ ಕುರಿತು ನಡಾವಳಿ ಕೂಡ ಆಗಿವೆ ಎಂದು ಅವರು ಆರೋಪಿಸಿದರು.

ಈ ವಿಶ್ವವಿದ್ಯಾಲಯಕ್ಕೆ ಈಗ ಇರುವ ಮಹಿಳಾ ವಿಶ್ವವಿದ್ಯಾಲಯ ಹೆಸರಿನಲ್ಲಿ ಮಹಿಳಾ ಹೆಸರನ್ನು ಬದಲಾವಣೆ ಮಾಡುವ ಪ್ರಯತ್ನ ನಡೆದಿದೆ. ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚಲು ಬಿಡುವುದಿಲ್ಲ. ಈ ವಿಶ್ವವಿದ್ಯಾಲಯವನ್ನು ಸಬಲ ಮಾಡುವ ನಿಟ್ಟಿನಲ್ಲಿ ಮತ್ತು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಅದನ್ನು ಬಿಟ್ಟು ಈ ವಿವಿಯನ್ನು ಮುಚ್ಚುವ ವಿಚಾರ ಅತ್ಯಂತ ನಾಚಿಕೆಗೇಡಿನ ಸಂಗತಿ. ಇದು ಇಡೀ ನಾಡಿನ ಮಹಿಳೆಯರಿಗೆ ಮಾಡುವ ದ್ರೋಹವಾಗಿದೆ. ಹೆಣ್ಣು ಮಕ್ಕಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಇದಾಗಿದೆ. ಹೆಣ್ಣು ಮಕ್ಕಳಿಗೆ ಸೌಲಭ್ಯ ಒದಗಿಸಲು ಆಗದೆ ಸರಕಾರ ಈ ರೀತಿ ಷಡ್ಯಂತ್ರ ರೂಪಿಸುತ್ತಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕಲ್ಲು ಹಾಕುತ್ತಿದೆ ಎಂದು ಶ್ರೀನಾಥ ಪೂಜಾರಿ ಆರೋಪಿಸಿದರು.

ಬೇರೆ ವಿಶ್ವವಿದ್ಯಾಲಯದಲ್ಲಿ ಕಲಿತ ಹೆಣ್ಣು ಮಕ್ಕಳು ಮತ್ತು ಮಹಿಳಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಮಹಿಳಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುವ ಮಹಿಳೆಯರ ಪರಿಸ್ಥಿತಿ ಗಮನಿಸಿದಾಗ ಮಹಿಳಾ ವಿವಿಯಲ್ಲಿ ಕಲಿತ ಮಹಿಳೆಯರು ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಉದ್ಯೋಗ ಪಡೆದಿದ್ದಾರೆ. ಎಲ್ಲ ವಿವಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಮಹಿಳೆಯರು ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧರಿರುವುದಾಗಿ ಅವರು ತಿಳಿಸಿದರು.

ಈ ಭಾಗದ ರಾಜಕಾರಣಿಗಳೂ ಕೂಡ ಇದರಲ್ಲಿ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದ ಅವರು, ಈ ಮಹಿಳಾ ವಿಶ್ವವಿದ್ಯಾಲಯ ರಾಜ್ಯದ ಎಲ್ಲ ಮಹಿಳೆಯರ ಹಿತದೃಷ್ಠಿಯಿಂದ ಮುಂದುವರೆಯುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ಮಹಿಳೆಯರನ್ನು ಸಂಘಟಿಸಿ ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ. ಸರಕಾರ ಜೇನುಗೂಡಿನಂತಿರುವ ಈ ವಿಷಯಕ್ಕೆ ಕೈ ಹಾಕಬಾರದು. ಮಹಿಳೆಯರಿಗೆ ಶಿಕ್ಷಣ ನೀಡಬಾರದು ಎಂಬ ಮನುವಾದಿ ವ್ಯವಸ್ಥೆಯಿಂದ ಸರಕಾರ ಹೊರ ಬರಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ತಮ್ಮ ಜೊತೆ ಕೈ ಜೋಡಿಸಬೇಕು ಎಂದು ಅವರು ಆಗ್ರಹಿಸಿದರು.

ಮಹಿಳಾ ವಿಶ್ವವಿದ್ಯಾಲಯಕ್ಕೆ ಅಗತ್ಯವಾಗಿರುವ ಸಿಬ್ಬಂದಿ ನೇಮಕಾತಿ ಮಾಡಬೇಕು. ಅಲ್ಲಿ ಸಕಲ ಮೂಲಭೂತ ಸೌಕರ್ಯ ಒದಗಿಸಬೇಕು. ಅದನ್ನು ಬಿಟ್ಟು, ಆದಾಯ ಬರುತ್ತಿಲ್ಲ ಎಂದು ಮುಚ್ಚಲು ಚಿಂತನೆ ನಡೆಸಿರುವುದು ಅಕ್ಷಮ್ಯವಾಗಿದೆ. ಸರಕಾರ ಕಮರ್ಷಿಯಲ್ ಆಗಿ ಇದನ್ನು ಪರಿಗಣಿಸಬಾರದು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಸರಕಾರದ ಪ್ರತಿನಿಧಿಗಳು ಈಗ ಮಹಿಳೆಯ ಸಬಲೀಕರಣಕ್ಕೆ ಪೂರಕವಾಗಿರುವ ಈ ವಿಶ್ವವಿದ್ಯಾಲಯವನ್ನು ಮುಚ್ಚಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚಲು ತಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಶ್ರೀನಾಥ ಪೂಜಾರಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌