ವಿಜಯಪುರ: ಕೊರೊನಾ 3ನೇ ಅಲೆಯನ್ನು ಸಮರ್ಪಕ ನಿಯಂತ್ರಿಸಲು ಸಮರೋಪಾದಿಯಲ್ಲಿ ಸಕಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಕೋವಿಡ್ 3ನೇ ಅಲೆ ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗಳಲ್ಲಿ ಬೆಡ್ ದೊರೆಯುವಂತೆ ವ್ಯವಸ್ಥೆ ಮಾಡಿ ಇಟ್ಟುಕೊಳ್ಳಬೇಕು. ಬೆಡ್‍ಗಳಿಗಾಗಿ ರೋಗಿಗಳು ಅನಗತ್ಯವಾಗಿ ಪರದಾಡುವಂತೆ ಆಗಬಾರದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಪಿಎಮ್ ನಲ್ಲಿ ರಜಿಸ್ಟರ್ ಆದ ಬೆಡ್‍ಗಳ ಬಗ್ಗೆ ಗಮನ ಹರಿಸಿ, ಪೂರೈಸಲಾದ ಬೆಡ್‍ಗಳನ್ನು ಗುರುತಿಸಿ ಅವುಗಳ ಸಂಪೂರ್ಣ ಪಟ್ಟಿ ಮಾಡಿ ಇಟ್ಟುಕೊಳ್ಳಬೇಕು. ಇದರಿಂದ ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಅಲ್ಲದೇ, ರೋಗಿಗಳಿಗೂ ಅನಗತ್ಯ ಗೊಂದಲ ಉಂಟಾಗುವುದಿಲ್ಲ. ಬೆಡ್ ಮ್ಯಾನೇಜ್‍ಮೆಂಟ್‍ನಲ್ಲಿ ಯಾವುದೇ ಲೋಪ ಹಾಗೂ ಸಮಸ್ಯೆಗಳಾಗದಂತೆ ಕ್ರಮಕೈಗೊಳ್ಳಿ ಎಂದು ಅವರು ಸೂಚನೆ ನೀಡಿದರು.
ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಸೂಕ್ತ ನಿರ್ವಹಣೆಯೊಂದಿಗೆ ಆಕ್ಸಿಜನ್, ವೆಂಟಿಲೇಟರ್‍ಗಳಂತಹ ಅಗತ್ಯ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು. ತಾಲೂಕುವಾರು ಐಎಲ್‍ಐ, ಸಾರಿ ಸರ್ವೇ ಕಾರ್ಯ ಕೈಗೊಂಡು ಈ ಬಗ್ಗೆ ಕೋವಿಡ್ ಪೋರ್ಟಲ್‍ನಲ್ಲಿ ಅಪ್‍ಡೇಟ್ ಮಾಡಬೇಕು. ಸ್ವ್ಯಾಬ್ ಸಂಗ್ರಹಿಸುವಾಗಲೇ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಒಂದು ವೇಳೆ ವ್ಯಕ್ತಿಯಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದರೆ ಅಂಥವರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯ ಗಡಿಭಾಗಗಳ ಚೆಕ್‍ಪೋಸ್ಟ್‍ಗಳಲ್ಲಿ ಟೆಸ್ಟಿಂಗ್ ಕಾರ್ಯವನ್ನು ಅತ್ಯಂತ ಸಮರ್ಪಕವಾಗಿ ಕೈಗೊಳ್ಳಬೇಕು. ಪ್ರಯಾಣಿಕರ ಆರ್‍ಟಿಪಿಸಿಆರ್ ನೆಗೆಟಿವ್ ಟೆಸ್ಟ್ ವರದಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಅಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಚಹಾ ಅಂಗಡಿ, ಬೇಕರಿಗಳಂತಹ ಆಹಾರ, ದಿನಸಿ ಮಾರಾಟದ ಅಂಗಡಿಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾ ಆಗದಂತೆ ಎಚ್ಚರಿಕೆ ವಹಿಸಬೇಕು. ಪಾರ್ಸಲ್ ವ್ಯವಸ್ಥೆಗೆ ಅವಕಾಶ ಕಲ್ಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಇಂಡಿ ಉಪ ವಿಭಾಗಾಧಿಕಾರಿಗಳಾದ ರಾಹುಲ್ ಸಿಂಧೆ, ವಿಜಯಪುರ ಉಪ ವಿಬಾಗಾಧಿಕಾರಿ ಬಲರಾಮ ಲಮಾಣಿ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ, ಡಾ. ಮಹೇಶ ನಾಗರಬೆಟ್ಟ, ಡಬ್ಲ್ಯೂ ಎಚ್ ಒ ಪ್ರತಿನಿಧಿ ಡಾಯ. ಮುಕುಂದ ಗಲಗಲಿ ಸೇರಿದಂತೆ ನಾನಾ ತಾಲೂಕುಗಳ ತಹಸೀಲ್ದಾರರು, ಆರೋಗ್ಯ ಮತ್ತು ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.