ಕೋವಿಡ್ ಪರಿಣಾಮಕಾರಿ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಖಾಸಗಿ ಆಸ್ಪತ್ರೆಗಳ ಸಹಕಾರವೂ ಅಗತ್ಯ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಕೋವಿಡ 3ನೇ ಅಲೆ ಹಾಗೂ ಒಮಿಕ್ರಾನ್ ವೈರಸ್ ಹಾವಳಿ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಈಗಾಗಲೇ ಸಮರೋಪಾದಿಯಲ್ಲಿ ಸಕಲ ರೀತಿಯ ಸಿದ್ಧತೆ ಹಾಗೂ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.  ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕೂಡ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿದಾಗ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ಹೇಳಿದ್ದಾರೆ. 

ವಿಜಯಪುರ ಜಿ. ಪಂ. ಸಭಾಂಗಣದಲ್ಲಿ ಕೋವಿಡ್ 3ನೇ ಅಲೆ ನಿಯಂತ್ರಣ ಹಾಗೂ ಹಾಸಿಗೆಗಳ ವ್ಯವಸ್ಥೆಗಳ ಕುರಿತು ಸರಕಾರಕ್ಕೆ ಹಾಸಿಗೆಗಳ ಮಾಹಿತಿ ಸಲ್ಲಿಸಿರುವ ಜಿಲ್ಲಾ ತಜ್ಞರ ಸಮಿತಿಯ ಸದಸ್ಯರು, ಜಿಲ್ಲೆಯ ಎಲ್ಲ ಆಸ್ಪತ್ರೆಗಳ ಮುಖ್ಯಸ್ಥರುಗಳು, ವೈದ್ಯಾಧಿಕಾರಿಗಳು ಹಾಗೂ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರುಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಈ ಹಿಂದೆ ಸರಕಾರದಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗಾಗಿ ಶೇ.50 ರಷ್ಟು ಬೆಡ್ ಕಾಯ್ದಿರಿಸುವಂತೆ ಮಾಡಲಾದ ಆದೇಶದಲ್ಲಿ ಬದಲಾವಣೆ ಮಾಡಿ, ಮುಂಬರುವ ದಿನಗಳಲ್ಲಿ ಆಯಾ ಖಾಸಗಿ ಆಸ್ಪತ್ರೆಗಳ ಬೆಡ್ ಲಭ್ಯತೆಗಳಿಗೆ ಅನುಸಾರವಾಗಿ ಶೇ. 75 ರಷ್ಟು ಹಾಸಿಗೆಗಳನ್ನು ಕಾಯ್ದಿರಿಸುವಂತೆ ಕ್ರಮ ಕೈಗೊಳ್ಳಲು ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ.  ಈ ಬಗ್ಗೆ ಮುಂದಿನ ದಿನಗಳಲ್ಲಿ ತಮಗೆ ಅಗತ್ಯ, ಅಧಿಕೃತ ಮಾಹಿತಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಸರಕಾರದ ಆದೇಶದಂತೆ ಜನರಲ್, ಆಕ್ಸಿಜನ್, ಐಸಿಯು, ಪೆಡಿಯಾಟ್ರಿಕ್, ನಾನ್ ಪೆಡಿಯಾಟ್ರಿಕ್ ಬೆಡ್ ವ್ಯವಸ್ಥೆಗಳ ವಿಂಗಡಣೆಯ ಬಗ್ಗೆಯೂ ಮಾಹಿತಿ ನೀಡಲಾಗುವುದ.  ಖಾಸಗಿ ಆಸ್ಪತ್ರೆಗಳು ತಮ್ಮ ಸದ್ಯದ ಸ್ಥಿತಿಗತಿ ಹಾಗೂ ಕೋವಿಡ್ ರೋಗಿಗಳಿಗಾಗಿ ಆಕ್ಸಿಜನ್ ಪ್ಲಾಂಟ್ ಸೇರಿದಂತೆ ಈಗಾಗಲೇ ಮಾಡಿಕೊಳ್ಳಲಾದ ಅಗತ್ಯ ವ್ಯವಸ್ಥೆಗಳ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಸರಕಾರದ ಹಳೆಯ ಮತ್ತು ನೂತನ ಎರಡೂ ಕೋವಿಡ್ ತಂತ್ರಾಂಶಗಳಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳ ಮಾಹಿತಿ ಒದಗುವಂತೆ ನೋಡಿಕೊಳ್ಳಬೇಕು.  ಬೆಡ್‍ಗಳ ಲಭ್ಯತೆಗಳ ಆಧಾರದ ಮೇಲೆ ಮೇಲ್ವಿಚಾರಣೆಗಾಗಿ ಮುಂದಿನ ದಿನಗಳಲ್ಲಿ ಅಗತ್ಯಾನುಸಾರ ಶಿಫ್ಟ್ ಪ್ರಕಾರ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಇಬ್ಬರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗುವುದು.  ಸರಿಯಾದ ಡಾಟಾ ಎಂಟ್ರಿ ಕೂಡ ಸವಾಲಾಗಿದ್ದು, ಇದನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸುವುದು ಬಹಳ ಅವಶ್ಯಕವಾಗಿದೆ.  ಇದಕ್ಕಾಗಿ ಶಿಫ್ಟ್ ಪ್ರಕಾರ ಕಾರ್ಯ ನಿರ್ವಹಿಸಲು ಇಬ್ಬರು ಡಾಟಾ ಎಂಟ್ರಿ ಆಪರೇಟರ್‍ಗಳನ್ನು ನೇಮಿಸಿ, ಅಗತ್ಯವಿದ್ದಲ್ಲಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ಸೂಕ್ತ ತರಬೇತಿಯನ್ನೂ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ ಸೇರಿದಂತೆ ಆರೋಗ್ಯ ಇಲಾಖೆಯ ನಾನಾ ಅಧಿಕಾರಿಗಳು, ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರುಗಳು, ವೈದ್ಯಾಧಿಕಾರಿಗಳು, ವೈದ್ಯಕೀಯ ಕಾಲೇಜಿನ ಮುಖ್ಯಸ್ಥರುಗಳು ಹಾಗೂ ವೈದ್ಯರುಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌