ವಿಜಯಪುರ: ಪ್ರಕೃತಿ ಅಂದರೆನೇ ಹಾಗೆ. ಅದರ ಬಗ್ಗೆ ಎಷ್ಟು ಸಂಶೋಧನೆ ನಡೆಸಿದರೂ ಹೊಸದೊಂದು ಅಚ್ಚರಿ ಆಗುತ್ತಲೇ ಇರುತ್ತವೆ. ಮಾನವ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದು ಸಂಶೋಧನೆ ಮಾಡಿ ಅದಕ್ಕೊಂದು ಕಾರಣ ನೀಡಿದರೂ ನೋಡುಗರಿಗೆ ಇಂಥ ಘಟನೆಗಳು ವಾವ್ ಎಂದು ಅಚ್ಚರಿ ಮೂಡಸದೇ ಇರಲಾರವು.
ಸಾಮಾನ್ಯವಾಗಿ ರೈತರು ಬಿತ್ತನೆ ಮಾಡುವ ಬಿಜಗಳು ಮೊಳಕೆ ಒಡೆದು ಹೂವು ತೆನೆಗಳಾಗಿ, ನಂತರ ಕಾಳುಗಳಾದ ನಂತರ ಅವುಗಳನ್ನು ಸುಗ್ಗಿ ಮಾಡಲಾಗುತ್ತದೆ. ಇಂಥ ಬೆಳೆಗಳಲ್ಲಿ ಆಗಾಗ ವಿಸ್ಮಯಗಳು ಕಂಡು ಪರುತ್ತಲೇ ಇರುತ್ತವೆ. ಇಂಥದ್ದೆ ಒಂದು ವಿಶಿಷ್ಠ ವಿಸ್ಮಯವೊಂದು ಬಸವ ನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ಗಮನ ಸೆಳೆಯುತ್ತಿದೆ.
ಇಲ್ಲಿನ ರೈತ ನಾಗಪ್ಪ ಹಡಲಗೇರಿ ಎಂಬುವರು ತಮ್ಮ ತೋಟದಲ್ಲಿ ತೊಗರಿ ಬೆಳೆದಿದ್ದಾರೆ. ಈ ತೊಗರಿ ಬೆಳೆಯ ಮಧ್ಯೆ ಬೆಳೆದ ಸೂರ್ಯಕಾಂತಿ ಬೆಳೆಯೊಂದು ಈಗ ಆಕರ್ಷಣೆಯ ಕೇಂದ್ರವಾಗಿದೆ. ಸಾಮಾನ್ಯವಾಗಿ ಸೂರ್ಯಕಾಂತಿಯಲ್ಲಿ ಅಬ್ಬಬ್ಬಾ ಎಂದರೂ ಐದಾರು ತೆನೆಗಳು ಬೆಳೆಯುತ್ತವೆ. ಆದರೆ, ಇವರ ಹೊಲದಲ್ಲಿ ಬೆಳೆದ ಸೂರ್ಯಕಾಂತಿಯಲ್ಲಿ ಬರೊಬ್ಬರಿ 12 ತೆನೆಗಳು ಬೆಳೆದಿವೆ. ಅಲ್ಲದೇ, ಎಲ್ಲ ತೆನೆಗಳಲ್ಲಿಯೂ ಸೂರ್ಯಕಾಂತಿ ಕಾಳುಗಳೂ ಇವೆ.
ಈ ವಿಚಾರ ತಿಳಿದ ನಾಗಪ್ಪ ಹಡಗಲೇರಿ, ಸ್ಥಳೀಯ ಯುವಕರಾದ ಕಾಶೀನಾಥ ಬಿರಾದಾರ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಇದು ಒಬ್ಬರಿಂದ ಮತ್ತೋಬ್ಬರಿಗೆ ತಿಳಿದು ಎಲ್ಲರೂ ಅಚ್ಚರಿ ಮೂಡಿಸಿದ್ದಾರೆ.
ಇದಕ್ಕೆ ಹೇಳಿದ್ದು. ಪ್ರಕೃತಿಯ ಮುಂದೆ ಎಲ್ಲರೂ ಕುಬ್ಜರು. ಭೂತಾಯಿಯ ಮಡಿಲಲ್ಲಿ ಇನ್ನೂ ಏನೆಲ್ಲ ವಿಸ್ಮಯಗಳು, ಅಚ್ಚರಿಗಳು ಕಾದಿವೆಯೋ ಪ್ರಕೃತಿಗೆ ಮಾತ್ರ ಗೊತ್ತು.
ಈ ಕುರಿತು ಬಸವ ನಾಡಿಗೆ ಪ್ರತಿಕ್ರಿಯೆ ನೀಡಿರುವ ಬಿ ಎಸ್ ಸಿ ಅಗ್ರಿ ಪದವೀಧರರಾಗಿರುವ ಮತ್ತು ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ, ಸಸ್ಯಗಳಲ್ಲಿಯೂ ಗಂಡು ಮತ್ತು ಹೆಣ್ಣು ಸಸ್ಯಗಳು ಇರುತ್ತವೆ. ಇದು ಬಹುಷಃ ಗಂಡು ಸಸ್ಯವಿರಬೇಕು. ವೈಜ್ಞಾನಿಕವಾಗಿ ಬೀಜ ಸುಧಾರಣೆ ಸಂದರ್ಭದಲ್ಲಿ ಅದರಲ್ಲಿರುವ ಅಂಶಗಳು ಹೆಚ್ಚಿಗೆ ಬೆರೆತಿದ್ದರಿಂದ ಹೀಗಾಗುವ ಸಾಧ್ಯತೆಗಳು ಇರುತ್ತವೆ ಎಂದು ತಿಳಿಸಿದ್ದಾರೆ.