ಬಾಗಲಕೋಟೆ/ವಿಜಯಪುರ: ಮೇಕೆದಾಟು ಯೋಜನೆ ಅನುಷ್ಠಾನ ವಿಚಾರ ಕುರಿತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಏನೇನು ಮಾಡಿದೆ ಎನ್ನುವ ದಾಖಲೆ ನೀಡಿದ್ದೇನೆ. ಇವರ ಪಾದಯಾತ್ರೆ ಬಗ್ಗೆ ಮತ್ತೆ ಪೂರಕ ದಾಖಲಾತಿ ನೀಡುವೆ. ಮೇಕೆದಾಟು ಯೋಜನೆಯಲ್ಲಿ ಕಾಂಗ್ರೆಸ್ ಸರಕಾರ ಏನೇನು ಮಾಡಿದೆ ಎಂಬುದರ ಕುರಿತು ಇನ್ನೂ ದಾಖಲೆಗಳಿವೆ. ನನ್ನ ಬಳಿ ಇರುವ ದಾಖಲೆಗಳನ್ನ ಯಾವುದು ಎಂದು ಹೇಳಬೇಕು ಅನಿಸುತ್ತೆ ಅದನ್ನು ಅಂದು ಬಿಡುಗಡೆ ಮಾಡುವೆ ಎಂದು ತಿಳಿಸಿದ್ದಾರೆ.
ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಯೋಜನೆಗೆ ಸಿಎಂ ಅನುಮೋದನೆ ನೀಡಿದ್ದಾರೆ. ಆಗ ಕಾಂಗ್ರೆಸ್ ಸರಕಾರ ಯಾಕೆ ಆ ಯೋಜನೆ ಆರಂಭಿಸಲಿಲ್ಲ? ಅಂದಿನ ಕಾನೂನು ಸಚಿವ ಜಯಚಂದ್ರ ಹೇಳಿದ್ದಾರೆ ಯಾವುದೇ ಅಡತಡೆಗಳಿಲ್ಲ ಅಂತ. ಸರಕಾರ ಯೋಜನೆ ಕೈಗೆತ್ತಿಕೊಳ್ಳಬಹುದು ಎಂದು ಕಾನೂನು ಸಲಹೆಗಾರರು ಸಲಹೆ ನೀಡಿದ್ದಾರೆ. 2014ರ ನವೆಂಬರ್ 14 ರಿಂದ ಅದನ್ನು ಅನುಷ್ಠಾನಕ್ಕೆ ತರದೆ ಈಗ ಯಾಕೆ ಪಾದಯಾತ್ರೆ ಮಾಡುತ್ತಿದ್ದೀರಿ ಎಂದು ಕಾಂಗ್ರೆಸನ್ನು ಪ್ರಶ್ನಿಸಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿ ಯಾಕೆ ಈ ಯೋಜನೆಯನ್ನು ಜಾರಿ ಮಾಡಲಿಲ್ಲ ಎಂಬುದನ್ನು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಉತ್ತರಿಸಬೇಕು ಎಂದು ಹೇಳಿದ ಅವರು, ಕಾಂಗ್ರೆಸ್ ಪಾದಯಾತ್ರೆ ಬಿಟ್ಟು ಸರಕಾರದ ಜೊತೆ ಸಹಕರಿಸ‘ಬೇಕು. ಮೇಕೆದಾಟು ಯೋಜನೆ ಬಗ್ಗೆ ಬೆಂಗಳೂರಿನಲ್ಲಿ ದಾಖಲೆ ಬಿಡುಗಡೆ ಮಾದಿದ್ದೇನೆ. ಇಂದೂ ಕೂಡ ಒಂದು ವಿಷಯ ಹೇಳುತ್ತೇನೆ. ಪೂರ್ಣ ಹೇಳುವುದಿಲ್ಲ. ಅವರು ಏನೇನು ಮಾಡ್ತಾರೋ ಮಾಡಲಿ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಜುಗೌಡ ಪಾಟೀಲ ಆಗ್ರಹ
ಈ ಮಧ್ಯೆ, ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಜಲಸಂಪನ್ಮೂಲ ಖಾತೆ ಮಾಜಿ ಸಚಿವರು ಹಾಲಿ ಸಚಿವ ಹಾಗೂ ಧೀಮಂತ ನಾಯಕ ಗೋವಿಂದ ಕಾರಜೋಳ ಅವರ ಬಗ್ಗೆ ಹಗುರವಾಗಿ ಮಾತನಾಡಿ್ದದಾರೆ. ಇದು ಬಿಜೆಪಿ ಮತ್ತು ದಲಿತ ಸಮುದಾಯಕ್ಕೆ ನೋವುಂಟು ಮಾಡಿದೆ. ಅವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪಕ್ಷದಲ್ಲಿ ಟೀಕೆ, ಟಿಪ್ಪಣಿ ಸಹಜ, ಆದರೆ ಹಿರಿಯರಾದ ಕಾರಜೋಳ ಅವರನ್ನು ಏಕವಚನದಲ್ಲಿ ಪದ ಪ್ರಯೋಗ ಮಾಡಿರುವುದು ಸರಿಯಲ್ಲ. ಗೋವಿಂದ ಕಾರಜೋಳ ಅವರಂಥ ಧೀಮಂತ ನಾಯಕರ ವಿರುದ್ಧ ಬಳಸಿರುವ ಶಬ್ದಗಳು ಸರಿಯಿಲ್ಲ. ಐದು ವರ್ಷ ನೀರಾವರಿ ಸಚಿವರಾಗಿದ್ದ ಅವರು ಏಕೆ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೆರೆಗೆ ನೀರು ತುಂಬಿಸುವ ಯೋಜನೆ ಬಿಜೆಪಿ ಸರಕಾರದಲ್ಲಿ ಕೆ. ಎಸ್. ಈಶ್ವರಪ್ಪ ಜಲಸಂಪನ್ಮೂಲ ಸಚಿವರಾಗಿದ್ದಾಗ ಆರಂಭವಾದ ಯೋಜನೆಯಾಗಿದೆ. ಇದನ್ನು ತಮ್ಮ ತಮ್ಮ ಸಾಧನೆಯನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಜೋಗೂರ, ಶಿವರುದ್ರ ಬಾಗಲಕೋಟ, ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.