ಬಿ ಎಲ್ ಡಿ ಇ ಡೀಮ್ಡ್ ವಿವಿ, ಆಸ್ಪತ್ರೆಯ ವತಿಯಿಂದ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ ಆರಂಭಕ್ಕೆ ಯೋಜನೆ ರೂಪಿಸಲಾಗುತ್ತಿದೆ- ಉಪಕುಲಪತಿ ಡಾ. ಆರ್. ಎಸ್. ಮುಧೋಳ

ವಿಜಯಪುರ: ವಿಜಯಪುರ ನಗರ ಮತ್ತು ಸುತ್ತಲಿನ ಜಿಲ್ಲೆಗಳ ಕ್ಯಾನ್ಸರ್ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ದೃಷ್ಟಿಯಿಂದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ  ಬಿ. ಎಂ. ಪಾಟೀ ವೈದ್ಯಕೀಯ ಕಾಲೇಜು, ಆಸ್ಪತ್ರೆಯು ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸುವ ಯೋಜನೆ ರೂಪಿಸುತ್ತಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ. 

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಲಭ್ಯವಿಲ್ಲದ ಕಾರಣ ರೋಗಿಗಳು ಬೇರೆ ಜಿಲ್ಲೆ, ರಾಜ್ಯಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತಾಗಿದೆ. ಇದು ಬಡರೋಗಿಗಳಿಗೆ ಹೆಚ್ಚು ತೊಂದರೆ ಎದುರಿಸುವಂತಾಗಿದೆ.  ಈ ದೃಷ್ಠಿಯಿಂದ ಕ್ಯಾನ್ಸರ್ ಆಸ್ಪತ್ರೆ ಕೊರತೆ ನೀಗಿಸುವ ಉದ್ದೇಶದ ಹೊಂದಿದೆ.  ಕಳೆದ ಎರಡು ವರ್ಷಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಸಿದ್ಧಗೊಳ್ಳಲಿದ್ದು, ಅತ್ಯಾಧುನಿಕ ಕಿಮೋಥೆರಪಿ, ಸರ್ಜಿಕಲ್ ಘಟಕ ಮೊದಲಾದ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಬಿ ಎಲ್ ಡಿ ಇ ಆಸ್ಪತ್ರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ವರ್ಷ ನಡೆದ ನ್ಯಾಕ್ ಮೌಲ್ಯಮಾಪನದಲ್ಲಿ `ಎ’ ಗ್ರೇಡ್ ಹಾಗೂ ಎನ್‍ಐಆರ್‍ಎಫ್ ಪಟ್ಟಿಯಲ್ಲಿ 50ನೇ ಸ್ಥಾನ ಪಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಪ್ರಸ್ತುತ ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಸಂಖ್ಯೆನ್ನು 95 ರಿಂದ 149 ಸೀಟುಗಳಿಗೆ ಏರಿಕೆ ಮಾಡಿದ್ದು, ಎಂಬಿಬಿಎಸ್ ಸೀಟುಗಳನ್ನು 150 ರಿಂದ 200 ಸೀಟುಗಳಿಗೆ ಏರಿಕೆ ಮಾಡಲಾಗಿದೆ.   ಹೊಸದಾಗಿ ಡಿಎಂ ಕಾರ್ಡಿಯೋಲಾಜಿ ವಿಭಾಗ ಆರಂಭಿಸಲಾಗಿದೆ ಎಂದು ತಿಳಿಸಿದರು.

ಬಿ ಎಲ್ ಡಿ ಇ ವೈದ್ಯಕೀಯ ವಿಶ್ವವಿದ್ಯಾಲಯ ಕೇವಲ ವೈದ್ಯಕೀಯ ಸೇವೆ ಒದಗಿಸುವ ಜೊತೆಗೆ ಸಾಮಾಜಿಕ ಕಳಕಳಿಯಂದಿಗೆ ಕಾರ್ಯನಿರ್ವಹಿಸುತ್ತಿದೆ.  ಸಂಶೋಧನೆಯನ್ನು ಜನಪರ ಕಾರ್ಯಗಳಿಗೂ ಅನ್ವಯಿಸುವಂತೆ ಮಾಡುತ್ತಿದೆ.  ಈ ಹಿಂದೆ ಪಡಿತರದಲ್ಲಿ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು.  ಈ ಭಾಗದ ಜನರಿಗೆ ಅಕ್ಕಿ ಸೂಕ್ತವಲ್ಲ.   ಅಕ್ಕಿಯ ಜೊತೆಗೆ ಬಿಳಿಜೋಳ ನೀಡಿದರೆ ಹೆಚ್ಚು ಅನುಕೂಲ ಎಂದು ನಿಖರವಾದ ಅಂಕಿ-ಅಂಶಗಳನ್ನು ಸಂಗ್ರಹಿಸಿ  ಈ ಭಾಗದ ಜನರ ವಾತಾವರಣಕ್ಕೆ ತಕ್ಕಂತೆ ಬಿಳಿಜೋಳದ ಅವಶ್ಯಕತೆ ಇದೆ ಎಂದು ಸುದೀರ್ಘ ಸಂಶೋಧನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು.  ಸರಕಾರ ಈ ವರದಿಯನ್ನು ಪರಿಗಣಿಸಿ ಪಡಿತರದಲ್ಲಿ ಬಿಳಿಜೋಳ ನೀಡುವ ನಿರ್ಣಯ ಮಾಡಿದೆ ಎಂದು ಡಾ. ಆರ್. ಎಸ್. ಮುಧೋಳ ತಿಳಿಸಿದರು.

 

ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ಮಣಿಪಾಲ್ ಆಸ್ಪತ್ರೆಗೆ ಸರಿಸಮವಾಗಿ ಬಿ ಎಲ್ ಡಿ ಇ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ.  ಕೋವಿಡ್ ಸಮಯದಲ್ಲಿ ಸಾಮಾಜಿಕ ನಿಲುವಿನೊಂದಿಗೆ ಬೆಡ್ ದರವನ್ನು ಕಡಿತಗೊಳಿಸಲಾಗಿತ್ತು.  ಈ ಬಾರಿಯೂ ಮೂರನೇಯ ಅಲೆಗೆ 400 ಬೆಡ್ ಮೀಸಲಿರಿಸಲಾಗಿದೆ.  ಆದರೆ ಜನತೆ ಮುಂಜಾಗ್ರತಾ ಕ್ರಮ ಕೈಗೊಂಡು ರೋಗದಿಂದ ರಕ್ಷಿಸಿಕೊಳ್ಳಬೇಕು.   ಮಾಸ್ಕ್, ಸೈನಿಟೈಜರ್ ಬಳಕೆ, ಕನಿಷ್ಠ ಅಂತರವನ್ನು ಕಾಪಾಡಬೇಕು ಎಂದು ಹೇಳಿದರು.

ಖ್ಯಾತ ಚರ್ಮರೋಗ ತಜ್ಞ ಹಾಗೂ ಅಲೈಡ್ ಹೆಲ್ತ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಅರುಣ ಇನಾಮದಾರ ಮಾತನಾಡಿ, ಗರಿಷ್ಠ ಜ್ಞಾನದೊಂದಿಗೆ ವೈದ್ಯಕೀಯ ಪದವಿ ನೀಡುವುದು ನಮ್ಮ ಉದ್ದೇಶ, ಅಲೈಡ್ ಹೆಲ್ತ್ ಸೈನ್ಸ್ ಯುಗದಲ್ಲಿ ಬಿ ಎಲ್ ಡಿ ಇ ವಿಶ್ವವಿದ್ಯಾಲಯ ಈ ಅಲೈಡ್ ಹೆಲ್ತ್ ಸೈನ್ಸ್‍ಗೆ ಹೆಚ್ಚಿನ ಒತ್ತು ನೀಡಿದೆ.   ಈ ಬೋಧನೆಯಲ್ಲಿ 3ಡಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ರಿಜಿಸ್ಟಾರ್ ಡಾ. ಜೆ. ಜಿ. ಅಂಬೇಕರ, ಉಪಪ್ರಾಚಾರ್ಯ ಡಾ. ಎಸ್. ಬಿ. ಪಾಟೀಲ, ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌