2ಎ ಮೀಸಲಾತಿ ಹೋರಾಟಕ್ಕೆ ವರ್ಷ ತುಂಬುತ್ತಿರುವ ಹಿನ್ನೆಲೆ- ಜ. 14 ರಂದು ಕೂಡಲ ಸಂಗಮದಲ್ಲಿ ಜಾಗರಣೆ ಕಾರ್ಯಕ್ರಮ- ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ

ವಿಜಯಪುರ: ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಒಂದು ವರ್ಷ ಪೂರ್ಣವಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಜ. 14 ರಂದು ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಸಂಕ್ರಾಂತಿ ಹಬ್ಬದ ದಿನ ಪಂಚಮಸಾಲಿ ವರ್ಷಾಚರಣೆ ಮತ್ತು ಜಾಗರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ನಿತಂರವಾಗಿ ಹೋರಾಟ ನಡೆಯುತ್ತಿದೆ.  ಕರ್ನಾಟಕ ಮತ್ತು ಚಳವಳಿಗಳ ಇತಿಹಾಸದಲ್ಲಿ ಜನಾಂಗವೊಂದಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಇಷ್ಟೋಂದು ದೀರ್ಘವಾದ ಹೋರಾಟ ಇದೇ ಮೊದಲನೇ ಬಾರಿಯಾಗಿದೆ ಎಂದು ಹೇಳಿದರು.

ಈ ಹೋರಾಟವನ್ನು ಜೀವಂತವಾಗಿ ಇಡುವ ದೃಷ್ಠಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.  ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಆಹ್ವಾನ ನೀಡಿದ್ದೇವೆ.  ಈಗಾಗಲೇ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.  ಹಿಂದುಳಿದ ವರ್ಗದ ಆಯೋಗಕ್ಕೆ ವರದಿ ನೀಡುವಂತೆ ಈಗಾಗಲೇ ಸೂಚಿಸಿದ್ದಾರೆ.  ಅದರಂತೆ ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಸಮೀಕ್ಷೆ ಮುಗಿಸಿದೆ.  ಇನ್ನು ಕೆಲವೇ ದಿನಗಳಲ್ಲಿ ವಿಜಯಪುರಕ್ಕೆ ಬಂದು ಸಮೀಕ್ಷೆ ನಡೆಸಲಿದೆ ಎಂದು ಅವರು ತಿಳಿಸಿದರು.

ಸಾಧ್ಯವಾದರೆ ಸಂಕ್ರಾಂತಿ ಅಥವಾ ಯುಗಾದಿ ವೇಳೆಗೆ ಸಮಾಜಕ್ಕೆ ಒಳ್ಳೆಯ ಸಿಹಿ ಸುದ್ದಿ ಸಿಗುವ ನಂಬಿಕೆಯಿದೆ.  ಸಂಕ್ರಾಂತಿ ದಿನ ರಾಷ್ಟ್ರೀಯ ಬಸವ ಪ್ರಶಸ್ತಿ ಪ್ರಧಾನ ಸಮಾರಂಭವೂ ನಡೆಯಲಿದೆ.  ಈ ವೇದಿಕೆಯ ಮೂಲಕ ಮತ್ತೋಮ್ಮೆ 2ಎ ಮೀಸಲಾಗಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ ಶ್ರೀಗಳು ರಾಷ್ಟ್ರೀಯ ಬಸವ ಪ್ರಶಸ್ತಿ ವಿತರಣೆಗೆ ಈಗಾಗಲೇ ದಿನಾಂಕ ನಿಗದಿಯಾಗಬೇಕಿತ್ತು.  ಆದರೆ, ಮಹಾರಾಷ್ಟ್ರ ಮತ್ತೀತರ ರಾಜ್ಯಗಳಲ್ಲಿ ಕೊರೊನಾ ಒಮಿಕ್ರಾನ್ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲಿ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

ಸಂಕ್ರಾಂತಿ ದಿನದಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಸಂಪುಟದಲ್ಲಿರುವ ಸಚಿವ ಸಿ. ಸಿ. ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಸಮಾಜದ ಜನಪ್ರತಿನಿಧಿಗಳು ಮತ್ತು ಲಕ್ಷಾಂತರ ಜನತೆ ಪಾಲ್ಗೋಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡುವಂತೆ ಬಾಗಲಕೋಟೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.  ಅನೇಕ ಕಾರ್ಯಕ್ರಮಗಳು ಈಗಾಗಲೇ ನಡೆಯುತ್ತಿವೆ.  ಆದರೂ, ನಮಗೆ ಜನರ ಆರೋಗ್ಯ ಮುಖ್ಯ.  ಈ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲಿ ಸಭೆ ಕರೆದು ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

 

Leave a Reply

ಹೊಸ ಪೋಸ್ಟ್‌