ವಿಜಯಪುರ: ಮೇಕೆದಾಟು ಪಾದಯಾತ್ರೆ ವಿಚಾರದ ಕುರಿತು ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಾಹಿರಾತು ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆಗಳ ವಿರುದ್ಧ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದ್ದಾರೆ.
ದಿನಪತ್ರಿಕೆಗಳಲ್ಲಿ ಪಾದಯಾತ್ರೆ ಕುರಿತು ಪ್ರಕಟವಾಗಿರುವ ಜಾಹಿರಾತುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸರಣಿ ಟ್ವೀಟ್ ಮಾಡುವ ಮೂಲಕ ಪಾದಯಾತ್ರೆ ಟೀಕಿಸುತ್ತಿರುವವರಿಗೆ ಪ್ರತ್ಯುತ್ತರ ನೀಡಿದ್ದಾರೆ.
ರಾಜ್ಯದ ಹಿತಕ್ಕಾಗಿ ಕಾವೇರಿ-ಮೇಕೆದಾಟು ವಿಚಾರದಲ್ಲಿ ನಡೆದ ಕಾನೂನಾತ್ಮಕ ಹೋರಾಟದಲ್ಲಿ ನನ್ನ ಸ್ವಂತ ಆಸ್ತಿ ರೀತಿಯಲ್ಲಿ ಹಗಲು-ರಾತ್ರಿ ಹೋರಾಡಿದ್ದೇನೆ. ರಾಜ್ಯದ ನೆಲ-ಜಲದ ವಿಷಯ ಬಂದಾಗ ನಾವಾಗಲಿ, ನಾರಿಮನ್ ಅವರಾಗಲಿ, ಶ್ರೀ ದೇವೇಗೌಡ ಅವರೊಂದಿಗಾಗಲಿ ಪಕ್ಷಾತೀತವಾಗಿ ಹೋರಾಡಿರುವ ಸಾಕ್ಷ್ಯಗಳಿವೆ.
ಹೆಸರಾಂತ ಕಾವೇರಿ ಹೋರಾಟಗಾರ ಜಿ.ಮಾದೇಗೌಡರವರು ಕಾವೇರಿ ಜಲವಿವಾದದಲ್ಲಿ ನಾಡಿನ ಹಿತ ಕಾಪಾಡಿದ ನಮ್ಮ ಬದ್ಧತೆ ಕುರಿತು ನನ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ನೆಲ-ಜಲದ ವಿಷಯದಲ್ಲಿ ರಾಜಕೀಯ ಮಾಡಿ ಬೇನಾಮಿ ಜಾಹೀರಾತು ನೀಡಿದ್ದೀರಿ, @GovindKarjol ಗೋವಿಂದ
ಕಾರಜೋಳರವರೆ ನೀವು “ಯಾವ ಪುರುಷಾರ್ಥಕ್ಕಾಗಿ” ಎಂಬ ಪದ ಬಳಸಿದ್ದೀರಿ. ಈ ಪದ ಬಳಸಿ ರಾಜ್ಯದ ಜನರಿಗೆ, ಕಾವೇರಿ ಹೋರಾಟ ಮಾಡಿದ ಎಲ್ಲರಿಗೂ ಅಪಮಾನ ಮಾಡಿದ್ದೀರಿ.
ಅಂತರ ರಾಜ್ಯ ಕಾನೂನು ವಿವಾದವಿರುವ ಕಾವೇರಿ-ಮೇಕೆದಾಟು ಯೋಜನೆಯಂತಹ ಸೂಕ್ಷ್ಮ ವಿಷಯದಲ್ಲ್ಲಿ ನೀವು ನೀಡಿರುವಂತಹ ಬೇಜವಾಬ್ದಾರಿಯಿಂದ ಕೂಡಿದ ಬೇನಾಮಿ ಜಾಹೀರಾತಿನಿಂದ ರಾಜ್ಯದ ಹಿತಕ್ಕೆ ಧಕ್ಕೆಯಾದರೆ ಯಾರು ಹೊಣೆ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಲ ಅವರನ್ನು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ರಾಜಕೀಯ ದುರುದ್ದೇಶಕ್ಕಾಗಿ ಇಂತಹ ಕಾನೂನು ಬಾಹಿರ, ಬೇನಾಮಿ ಜಾಹೀರಾತು ನೀಡಿ, ರಾಜ್ಯದ ಕರಾಳ ಇತಿಹಾಸದಲ್ಲಿ ಹೊಸಹೊಂದು ಮೈಲಿಗಲ್ಲನ್ನು ಸೃಷ್ಠಿಸಿದ್ದೀರಿ.
ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಗೋವಿಂದ ಕಾರಜೋಳ ಅವರೇ, ನಳೀನಕುಮಾರ ಕಟೀ ಅವರೇ ನೀವು ಇದಕ್ಕೆ ರಾಜ್ಯದ ಜನರ ಕ್ಷಮೆಯಾಚಿಸುತ್ತೀರಾ? ಎಂದು ಪ್ರಶ್ನಿಸಿರುವ ಎಂ. ಬಿ. ಪಾಟೀಲ ಅವರು, ರಾಜ್ಯ ದ್ರೋಹದ ಬೇನಾಮಿ ಪ್ರಕಟಣೆ ಕುರಿತು ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಅಡ್ವೊಕೇಟ್ ಜನರಲ್ ರವರು ವಿಚಾರಣೆ ನಡೆಸಿ ನಿವೃತ್ತ ನ್ಯಾಯಮೂರ್ತಿಗಳಿಂದ ಪ್ರತ್ಯೇಕ ತನಿಖೆಗೆ ಆದೇಶಿಸಬೇಕು.
ರಾಜ್ಯದ ಹಿತಕ್ಕಾಗಿ ಪಕ್ಷಾತೀತ ಹೋರಾಟ ನಡೆಸಿದ ನಾವು, ಶ್ರೀ ಸಿದ್ದರಾಮಯ್ಯನವರು, ಶ್ರೀ ದೇವೇಗೌಡರು, ದಿ. ಅನಂತಕುಮಾರ್ ರವರು ಸೇರಿ ಪ್ರಗತಿಪರ ಇತಿಹಾಸ ಸೃಷ್ಟಿಸಿದರೆ ನೀವು ಬೇನಾಮಿ ಪ್ರಕಟಣೆಯಿಂದ ಕರಾಳ ಇತಿಹಾಸ ಸೃಷ್ಠಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.