ಮಕ್ಕಳಲ್ಲಿ ಹೆಚ್ಚುತ್ತಿರುವ ಕೊರೊನಾ: ಶಾಲೆಯಲ್ಲಿ ರೆಡ್ ಡೆ ಯನ್ನು ಜಾಗೃತಿ ರೂಪದಲ್ಲಿ ಆಚರಿಸಿದ ರವೀಂದ್ರನಾಥ ಠಾಗೋರ ಶಾಲೆಯ ಮಕ್ಕಳು

ವಿಜಯಪುರ: ಮಕ್ಕಳಲ್ಲಿ ಈಗ ಕೊರೊನಾ ಸೋಂಕು ಹೆಚ್ಚಾಗುತ್ತಿದೆ.  ಕೊರೊನಾ ಮತ್ತು ಅದರಲ್ಲೂ ಒಮಿಕ್ರಾನ್ ಸೋಂಕು ಈಗ ಶರವೇಗದಲ್ಲಿ ಹೆಚ್ಚಾಗುತ್ತಿದೆ.  ಕೋವಿಡ್- 19 3ನೇ ಅಲೆ ಈಗ ವ್ಯಾಪಕವಾಗಿ ಪರಿಣಾಮ ಬೀರುತ್ತಿದ್ದು, ಮಕ್ಕಳನ್ನೂ ಕೂಡ ಬಾಧಿಸುತ್ತಿದೆ.  ಈಗಾಗಲೇ ರಾಜ್ಯದಲ್ಲಿ ನೂರಾರು ಮಕ್ಕಳು ಕೊರೊನಾ ಸೋಂಕಿನಿಂದ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ ಸರಕಾರಿ ಮತ್ತು ಖಾಸಗಿ ಶಾಲೆಗಳ ಪೂರ್ವ ಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರ ಪದವಿ ವರೆಗೂ ತರಗತಿಗಳು ನಡೆಯುತ್ತಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ.  ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದಂತೂ ಎಲ್ಲರಲ್ಲೂ ಕೊರೊನಾ ಬಗ್ಗೆ ಆತಂಕ ಹೆಚ್ಚುವಂತೆ ಮಾಡಿದೆ.  ಈ ಹಿನ್ನೆಲೆಯಲ್ಲಿ ಈಗಾಗಲೇ ತರಗತಿಗಳು ನಡೆಯುತ್ತಿರುವ ಶಾಲೆಗಳಲ್ಲಿ ಕೊರೊನಾ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳೂ ನಡೆಯುತ್ತಿವೆ.

ಇಂಥದ್ದೆ ಒಂದು ವಿನೂತನ ಅಂದರೆ ಸ್ವಕಾರ್ಯದ ಜೊತೆಗೆ ಸ್ವಾಮಿ ಕಾರ್ಯ ಎಂಬಂತೆ ಶಾಲೆಯಲ್ಲಿ ಆಚರಣೆಯ ಜೊತೆಗೆ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮವೊಂದು ಬಸವ ನಾಡು ವಿಜಯಪುರ ನಗರದಲ್ಲಿ ನಡೆದಿದೆ.  ಕೊರೊನಾ ಹಾವಳಿ ಯಿಂದ ಶಾಲಾ ವಿದ್ಯಾರ್ಥಿಗಳು ಮನರಂಜನೆ, ಆಟಗಳಿಂದ ದೂರವಾಗುತ್ತಿದ್ದಾರೆ.  ಸದಾ ಅಭ್ಯಾಸದಲ್ಲಿ ತೊಡಗುವ ಪರಿಸ್ಥಿತಿ ಎದುರಾಗಿದ್ದು, ವಿದ್ಯಾರ್ಥಿಗಳಿಗೆ ಕೇವಲ ಪಾಠ ಎಂದರೆ ಬೇಸರ ತರಿಸಬಾರದು ಎಂಬ ದೃಷ್ಠಿಯಿಂದ ವಿಜಯಪುರ ನಗರದ ರವೀಂದ್ರನಾಥ ಠಾಗೋರ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಲ್ಲಿ ಮನರಂಜನೆ ಒದಗಿಸುವ ಕಾರ್ಯಕ್ರಮವೊಂದು ನಡೆದಿದ್ದು, ಗಮನ ಸೆಳೆದಿದೆ.

ರವೀಂದ್ರನಾಥ ಠಾಗೋರ ಪ್ರಾಥಮಿಕ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆ ಅಂಗವಾಗಿ ರೆಡ್ ಡೇ ಅಂಗವಾಗಿ ಆಚರಿಸಲಾಯಿತು.  ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ತಂತಮ್ಮ ಮನೆಯಿಂದ ಕೆಂಪು ವರ್ಣದ ವಸ್ತುವನ್ನು ತಂದಿದ್ದಾರೆ.  ಈ ಚಟುವಟಿಕೆಯ ಭಾಗವಾಗಿ ವಿದ್ಯಾರ್ಥಿಗಳು ಕೆಂಪು ವರ್ಣದ ಬಟ್ಟೆ ತೊಟ್ಟು, ಮಾಸ್ಕ್ ಧರಿಸಿ ಶಾಲೆಗೆ ಬರುವಾಗ ಕೆಂಪನೇಯ ಬಣ್ಣದ ತರಕಾರಿ, ಹಣ್ಣು, ಚಾಕಲೇಟ್, ಗೊಂಬೆಗಳು ಹಾಗೂ ಇತರೆ ವಸ್ತುಗಳನ್ನು ತಂದಿದ್ದರು.  ಅವುಗಳನ್ನು ಹಾಗೆಯೇ ಸಾಲಾಗಿ ಜೋಡಿಸಿ ಇಟ್ಟು ಶಾಲೆಯ ಶಿಕ್ಷಕರು ಮತ್ತು ಮುಖ್ಯಸ್ಥರ ಮನಗೆದಿದ್ದಾರೆ.  ಟೊಮೆಟೊ, ಸೇಬು ಹಣ್ಣು, ದಾಳಿಂಬೆ, ಸ್ಟ್ರ್ಯಾಬೇರಿ, ಗಜ್ಜರಿ, ಅಲ್ಲದೆ ಕೆಂಪಗೆ ಇರುವ ಚಾಕಲೆಟ್, ಜಾಮ್ ಪ್ಯಾಕೆಟ್, ಸ್ವಾಸ್, ಕೆಂಪು ಗುಲಾಬಿ ಹೂವು, ಬಲೂನುಗಳನ್ನು ತಂದು ಶಾಲೆಯ ಮುಖ್ಯದ್ವಾರದ ಬಳಿ ಅಲಂಕರಿಸಿದ್ದಾರೆ.  ಅಷ್ಟೇ ಅಲ್ಲದೆ ತಮ್ಮ ಶೈಕ್ಷಣಿಕ ಜೀವನವನ್ನು ಹಾಳುಗೆಡವಿರುವ ಮತ್ತು ಜಗತ್ತಿಗೆ ಕಿರಿಕಿರಿ ಉಂಟು ಮಾಡಿರುವ ಕೊರೊನಾ ಕುರಿತು ಜಾಗೃತಿ ಮೂಡಿಸಲು ಈ ರೆಡ್ ಡೆ ಸದುಪಯೋಗ ಪಡಿಸಿಕೊಂಡಿದ್ದಾರೆ ಎನ್ನುತ್ತಾರೆ ಇಲ್ಲಿನ ಶಿಕ್ಷಕಿ ಪಲ್ಲವಿ.

ಕೆಂಪು ಬಣ್ಮದ ಗೊಂಬೆಗೆ ಕೆಂಪು ಬಣ್ಮದ ಮಾಸ್ಕ ತೊಡಿಸಿ ಕೊರೊನಾದಿಂದ ರಕ್ಷಸಿಕೊಳ್ಳಿ ಎಂಬ ಸಂದೇಶ ನೀಡಿದ್ದಾರೆ.  ಈ ಗೊಂಬೆ ಎಲ್ಲರ ಆಕರ್ಷಣೆ ಕೇಂದ್ರವಾಗಿದ್ದು, ಗಮನ ಸೆಳೆದಿದೆ.  ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಕ್ರಿಯೇಟಿವಿಟಿಗೆ ಶಾಲೆಯ ಚೇರ್ಮನ್ ಶಿವಾಜಿ ಗಾಯಕವಾಡ ಮಾರು ಹೋಗಿದ್ದು, ಭೇಷ್ ಎಂದಿದ್ದಾರೆ.  .

ಕೊರೊನಾ ಸಂಕಷ್ಟ ಸಮಯದಲ್ಲಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯ ಮನೋರಂಜನೆ ಅನುಭವಿಸುವುದರ ಜೊತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದು ಈಗ ಜನಮನ ಸೂರೆಗೊಂಡಿದೆ.

 

Leave a Reply

ಹೊಸ ಪೋಸ್ಟ್‌