ಸಚಿವ ಗೋವಿಂದ ಕಾರಜೋಳ ದಲಿತ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ- ವಿಜಯಪುರ ಕಾಂಗ್ರೆಸ್ ಮುಖಂಡ ಆರೋಪ

ವಿಜಯಪುರ: ಮೇಕೆದಾಟು ಪಾದಯಾತ್ರೆ ವಿಚಾರ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಮಾಜಿ ಸಚಿವ ಎಂ. ಬಿ. ಪಾಟೀಲ ನಿವಾಸದ ಎದುರು ನಡೆದ ಪ್ರತಿಭಟನೆ ಹಾಗೂ ಆರೋಪಗಳ ಕುರಿತು ವಿಜಯಪುರ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಮೇಕೆದಾಟು ವಿಚಾರದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಮ್ಮ ಇತಿಮಿತಿ ಬಿಟ್ಟು. ಟೀಕೆಗಳನ್ನು ಸ್ವೀಕರಿಸದೆ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ.  ಇದನ್ನು ಖಂಡಿಸುವುದಾಗಿ ತಿಳಿಸಿದರು.

ಎಂ. ಬಿ. ಪಾಟೀಲ ಮನೆ ಎದುರು ಕಾರಜೋಳ ಅವರಿಂದ ಪ್ರೇರಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.  ಮುಧೋಳದಲ್ಲಿ ಎಂ. ಬಿ. ಪಾಟೀಲ ಅವರ ಪ್ರತಿಕೃತಿ ದಹನ ಮಾಡಿದ್ದಾರೆ.  ಇದು ಖಂಡನೀಯ.  ಯಾವುದೇ ವ್ಯಕ್ತಿಯಾಗಲಿ ಅಥವಾ ನಾಯಕರಾಗಲಿ ಒಂದೇ ಸಮಾಜವನ್ನು ಇಟ್ಟುಕೊಂಡು ರಾಜಕಾರಣದಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಸಚಿವ ಗೋವಿಂದ ಕಾರಜೋಳ ಅವರು ಅರ್ಥಮಾಡಿಕೊಳ್ಳಬೇಕು.  ರಾಜಕಾರಣಕ್ಕೆ ಪ್ರತಿಯೊಂದು ಜಾತಿ, ಸಮುದಾಯ, ಧರ್ಮ ಎಲ್ಲವೂ ಅವಶ್ಯಕವಾಗಿದೆ.  ಪ್ರತಿಯೊಬ್ಬರೊಂದಿಗೆ ನಾವು ವಿಶ್ವಾಸದಿಂದ ನಡೆದುಕೊಂಡಾಗ ಮಾತ್ರ ಸಾರ್ವಜನಿಕ ಜೀವನದಲ್ಲಿ ನಾವು ಇರಲು ಹೆಚ್ಚು ಅವಕಾಶವಿದೆ.  ಆದರೆ, ಹಲವಾರು ವರ್ಷಗಳಿಂದ ತಾವೊಬ್ಬ ಸಮರ್ಥ ರಾಜಕಾರಣಿ ಎಂದು ಬಿಂಬಿಸಿಕೊಂಡು ಬಂದಿರುವ ಕಾರಜೋಳ ಅವರು, ಇತ್ತೀಚೆಗೆ ದಲಿತ ಕಾರ್ಡ್ ಬಳಕೆ ಮಾಡಿ ರಾಜಕಾರಣ ಮಾಡುತ್ತಿರುವುದನ್ನು ಖಂಡಿಸುವುದಾಗಿ ಅವರು ತಿಳಿಸಿದರು.

ನಾನೂ ಕೂಡ ದಲಿತ ಸಮುದಾಯದಿಂದ ಬಂದಿದ್ದೇನೆ.  ದಲಿತ ಸಂಘಟನೆಯಿಂದ ಬಂದರೂ ರಾಜಕಾರಣಕ್ಕೆ ಬಂದ ಮೇಲೆ ಎಲ್ಲೂ ದಲಿತ ಸಂಘಟನೆಯನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಂಡಿಲ್ಲ.  ರಾಜಕಾರಣವನ್ನು ರಾಜಕೀಯ ದೃಷ್ಠಿಯಿಂದಲೇ ಎದುರಿಸಿದ್ದೇನೆ.  25 ವರ್ಷಗಳ ರಾಜಕಾರಣವನ್ನು ದಲಿತ ಅಥವಾ ಜಾತಿ ವಿಚಾರ ಇಟ್ಟುಕೊಂಡು ಬಳಕೆ ಮಾಡಿಕೊಂಡಿಲ್ಲ.  ಆದರೆ, ಕಾರಜೋಳ ಅವರು ದಲಿತ ಕಾರ್ಡ್ ಬಳಕೆ ಮಾಡುತ್ತಿದ್ದಾರೆ.  ಕಳೆದ ವಿಧಾನ ಪರಿಷತ ಚುನಾವಣೆಯಲ್ಲಿ ಮುಧೋಳದಲ್ಲಿ ಕೆಲವು ದಲಿತ ಯುವಕರನ್ನು ಪ್ರೇರೆಪಿಸಿ ಎಂ. ಬಿ. ಪಾಟೀಲ ವಿರುದ್ಧ ಹೇಳಿಕೆಗಳನ್ನು ಕೊಡಿಸಿದ್ದಾರೆ.  ದಲಿತ ಸಂಘಟನೆಗಳನ್ನು ಬಿಟ್ಟು ತಾವೇ ಖುದ್ದಾಗಿ ಹೇಳಿಕೆ ನೀಡಬಹುದಿತ್ತು.  ಇಂಥ ಪ್ರವೃತ್ತಿ ಒಳ್ಳೆಯದಲ್ಲ.  ಸುನೀಲಗೌಡ ಪಾಟೀಲ ಅವರನ್ನು ಸೋಲಿಸಲು ಯಾವೆಲ್ಲ ತಂತ್ರಗಳನ್ನು ಉಪಯೋಗಿಸಿದರೂ ಅವು ಪ್ರಯೋಜನವಾಗಲಿಲ್ಲ.  ಈ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಅಪಪ್ರಚಾರ ಮಾಡಲಾಯಿತು.  ಆದರೆ, ಆ ಕಾರ್ಯಕ್ರಮದಲ್ಲಿ ನಾವೆಲ್ಲ ಇದ್ದೇವು.  ಆದರೆ, ಸಿದ್ಧರಾಮಯ್ಯ ಅಂದು ಆ ರೀತಿ ಮಾತನಾಡಿರಲಿಲ್ಲ ಎಂದು ಅವರು ತಿಳಿಸಿದರು.

ಮೇಕೆದಾಟು ಯೋಜನೆಯನ್ನು ಸಿದ್ಧರಾಮಯ್ಯ ಸರಕಾರ ಅಧಿಕಾರಕ್ಕೆ ಬರುವವರೆಗೂ ಯಾವ ಸರಕಾರಗಳಾಗಲಿ ಚಕಾರ ಎತ್ತಿರಲಿಲ್ಲ.  ಆದರೆ, ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಅಂದಿನ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಅವರು ಈ ವಿಚಾರವನ್ನು ಕೈಗೆತ್ತಿಕೊಂಡು ಈ ಯೋಜನೆ ಪೂರ್ಣಗೊಳಿಸಲು ನಾರಿಮನ್ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಡಿಪಿಆರ್ ತಯಾರು ಮಾಡಿದ್ದಾರೆ.  ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.  ಆದರೆ, ಈಗ ಕಾರಜೋಳ ಅವರು ಮೇಕೆದಾಟು ವಿಚಾರದಲ್ಲಿ ಬೇನಾಮಿ ಹೆಸರಿನಲ್ಲಿ ದಿನಪತ್ರಿಕೆಗಳಲ್ಲಿ ಜಾಹಿರಾತು ಕೊಡಿಸಿದ್ದಾರೆ.  ಈ ರೀತಿ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ.  ಇದರಿಂದ ಕಾಂಗ್ರೆಸ್ಸಿಗೆ ಹಿನ್ನೆಡೆಯಾಗುತ್ತದೆ ಎಂಬುದು ಅವರ ತಪ್ಪು ತಿಳುವಳಿಕೆಯಾಗಿದೆ ಎಂದು ಪ್ರೊ. ರಾಜು ಆಲಗೂರ ಹೇಳಿದರು.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಮೂರು ದಿನಗಳಿಂದ ಪಾತಯಾತ್ರೆ ಮಾಡುತ್ತಿದೆ.  ಈ ಯೋಜನೆಗಾಗಿ ತಾವು ಮಾಡಿದ ಪ್ರಯತ್ನದ ಬಗ್ಗೆ ಮಾಜಿ ಸಚಿವ ಎಂ. ಬಿ. ಪಾಟೀಲ ಈಗಾಗಲೇ ಸಂಪೂರ್ಣ ಮಾಹಿತಿ ನೀಡಿ ದಾಖಲೆ ಕೂಡ ಬಿಡುಗಡೆ ಮಾಡಿದ್ದಾರೆ.  ಆದರೂ, ಸಚಿವ ಕಾರಜೋಳ ಈಗ ಮತ್ತೆ ಎಂ. ಬಿ. ಪಾಟೀಲ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.  ಅವರಿಗೆ ಸಂಸ್ಕೃತಿ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.  ಎಂ. ಬಿ. ಪಾಟೀಲ ಅವರು ಎಂದೂ ಸಚಿವರ ವಿರುದ್ಧ ನಾಲಾಯಕ ಎಂದು ಬಳಸಿಲ್ಲ.  ಆದರೆ, ಕಾರಜೋಳ ಸಚಿವರಾಗಲು ಅಸಮರ್ಥರಾಗಿದ್ದಾರೆ ಎಂದು ಟೀಕಿಸಿದ್ದಾರೆ.  ಪ್ರಜಾಪ್ರಭುತ್ವದಲ್ಲಿ ಇಂಥ ಟೀಕೆಗಳನ್ನು ಮಾಡುವುದು ತಪ್ಪಾ? ಸಂಸತ್ತಿನ ನಡಾವಳಿಗಳನ್ನು ತೆರೆದರೆ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರು ಮಾಜಿ ಪ್ರಧಾನಿ ಜವಾಹರಲಾಲ ನೆಹರು ವಿರುದ್ಧ ಏನೆಲ್ಲ ಟೀಕೆಗಳನ್ನು ಮಾಡಿದ್ದಾರೆ ಎಂಬುದನ್ನು ಗಮನಿಸಬೇಕು.  ಕಾರಜೋಳ ಸಚಿವರಾಗಲು ಅಸಮರ್ಥರಿದ್ದಾರೆ ಎಂದ ಮಾತ್ರಕ್ಕೆ ಅವರು ಜಾತಿ ಕಾರ್ಡ್ ಬಳಸುವ ದುಸ್ಥಿತಿಗೆ ತಲುಪಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಅವರು ಹೇಳಿದರು.

ಆಡಳಿತ ಪಕ್ಷಗಳ ಬಗ್ಗೆ ಟೀಕೆ ಮಾಡುವುದು ಪ್ರತಿಪಕ್ಷದ ಆದ್ಯ ಕರ್ತವ್ಯವಾಗಿದೆ.  ಎಂ. ಬಿ. ಪಾಟೀಲ ಜಲಂಸಪನ್ಮೂಲ ಸಚಿವರಾಗಿದ್ದಾಗ ಇದೇ ಕಾರಜೊಳ ಅವರ ಏನೆಲ್ಲ ಟೀಕೆ ಮಾಡಿದ್ದಾರೆ ಎಂಬುದನ್ನು ಮರೆತಂತಿದೆ.  ಸಚಿವರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಅಸಮರ್ಥ ಎನ್ನಲೇಬೇಕು.  ಇದೇ ಕಾರಜೋಳ ಅವರು ಈಗ ಎಂ. ಬಿ. ಪಾಟೀಲ ಅವರ ವಿರುದ್ಧ ಅವಹೇಳನವಾಗಿ ಮಾತನಾಡಿದ್ದಾರೆ.  ನಾವು ಎಂ. ಬಿ. ಪಾಟೀಲ ಅವರ ಜೊತೆಗೆ ಮೊದಲಿನಿಂದ ಇದ್ದೇವೆ.  ಆದರೆ, ಇದೇ ಕಾರಜೋಳ ಅವರು ಬಿ ಎಲ್ ಡಿ ಇ ಸಂಸ್ಥೆಯಿಂದ ಏನೆಲ್ಲ ಪಡೆದುಕೊಂಡಿದ್ದಾರೆ ಎಂಬುದು ಕಾರಜೋಳ ಮತ್ತು ಎಂ. ಬಿ. ಪಾಟೀಲ ಅವರಿಗೆ ಮಾತ್ರ ಗೊತ್ತು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ತಿಳಿಸಿದರು.

ಟೀಕೆ ಮಾಡುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಮಾಡಬೇಕು.  ಜಾತಿಯ ಆಸರೆ ಪಡೆದು ಸಾರ್ವಜನಿಕರೆಡೆಗೆ ಹೋದರೆ ನಮಗೆ !ಒಳಿತಾಗುವುದಿಲ್ಲ ಎಂದು ಪ್ರೊ. ರಾಜು ಆಲಗೂರ ಹೇಳಿದರು.

ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಸಚಿವ ಕಾರಜೋಳ ಅವರು ಎಂ. ಬಿ. ಪಾಟೀಲ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ.  ಇದನ್ನು ಖಂಡಿಸುತ್ತೇನೆ.  ಇದೇ ಎಂ. ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ಗೋವಿಂದ ಕಾರಜೋಳ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಹೊಸದಾಗಿ ಭೂಸ್ವಾಧೀನವಾಗುವ ಜಮೀನಿಗೆ ಪ್ರತಿ ಎಕರೆಗೆ ತಲಾ ರೂ. 40 ಲಕ್ಷ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.  ಈಗ ಕಾರಜೋಳ ಅವರು ಇಂಥ ಟೀಕೆಗಳನ್ನು ಮಾಡುವ ಬದಲು ಈಗ ನೀವೇ ಸಚಿವರಾಗಿದ್ದೀರಿ.  ನೀವು ಸಮರ್ಥ ನೀರಾವರಿ ಸಚಿವರಾಗಲು ಬಯಸಿದರೆ ಈ ಹಿಂದೆ ನೀವೇ ಬೇಡಿಕೆ ಇಟ್ಟಂತೆ ಪ್ರತಿ ಎಕರೆ ಜಮಿನಿಗೆ ರೂ. 40 ಲಕ್ಷ ಪರಿಹಾರ ಕೊಡಿ ಎಂದು ಆಗ್ರಹಿಸಿದರು.

ಬುರಣಾಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮವಾಗಿದ್ದರೂ ನಿಮ್ಮ ಮಕ್ಕಳು ಬಿಜೆಪಿ ಕಾರ್ಯಕ್ರಮ ಎಂಬಂತೆ ನಡೆದುಕೊಂಡಿದ್ದಾರೆ.  ನೀವೊಬ್ಬ ಹಿರಿಯ ರಾಜಕಾರಣಿಯಾಗಿ ನಿಮ್ಮ ಮಕ್ಕಳ ಆಟಾಟೋಪಕ್ಕೆ ಕಡಿವಾಣ ಹಾಕಬೇಕಿತ್ತು.  ನಿಮ್ಮ ಮಗನನ್ನು ವೇದಿಕೆಗೆ ಮೆರವಣಿಗೆ ಕರೆದುಕೊಂಡು ಬಿದ್ದು ಯಾಕೆ? ನೀವು ಸಮರ್ಥ ಸಚಿವ ಎನ್ನುವುದಾದರೆ ಜಾತ್ಯತೀತ ವ್ಯಕ್ತಿಯಾಗಿ ಟೀಕೆಗಳನ್ನು ಸಹಿಸಿಕೊಳ್ಳುವುದನ್ನು ಕಲಿಯಬೇಕು. ಆದರೆ, ಈಗ ನೀವು ಇತ್ತೀಚೆಗೆ ಆರ್ ಎಸ್ ಎಸ್ ಕೈಗೊಂಬೆಯಂತೆ ವರ್ತಿಸುತ್ತಿದ್ದೀರಿ.  ನೀವೊಬ್ಬರೆ ದಲಿತರಲ್ಲ.  ದಲಿತ ಕಾರ್ಡ್ ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಸೋಮನಾಥ ಕಳ್ಳಿಮನಿ ಹೇಳಿದರು.

ಕಾಂಗ್ರೆಸ್ ಮುಖಂಡ ಚಂದ್ರಶೇಖರ ಕೊಟಬಾಗಿ ಮಾತನಾಡಿ, ಎಂ. ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿ ರಾಜ್ಯ ಮತ್ತು ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ.  ರಾಜಕಾರಣದಲ್ಲಿ ಟೀಕೆ ಟಿಪ್ಪಣೆ ಸ್ವೀಕರಿಸಬೇಕು.  ಆದರೆ, ಕೆಲವು ದಲಿತ ಸಂಘಟನೆಗಳನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ.  ಜಲಸಂಪನ್ಮೂಲ‌ ಸಚಿವರಾಗಿ ಭೂಸ್ವಾಧಿನಕ್ಕೆ ಪರಿಹಾರ ಕೊಡಿಸಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಟಪಾಲ‌ ಎಂಜಿನಿಯರ್, ಸುರೇಶ ಘೊಣಸಗಿ, ಅಬ್ದುಲ ಹಮೀದ ಮುಶ್ರಿಫ್, ಅಡಿವೆಪ್ಪ ಸಾಲಗಲ, ನಾಗರಾಜ ಲಂಬು, ವಸಂತ ಹೊನಮೋಡೆ, ಪ್ರಫುಲ ಮಂಗಾನವರ, ಸಾಹೇಬಗೌಡ, ಸುನೀಲ ಉಕ್ಕಲಿ, ಭಕ್ಷಿ ಮಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌