ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಂ. 4.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಫೋನ್ ಕರೆ ಮಾಡಿ ಮಾತನಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮಗೆ ಕರೆ ಮಾಡಿದ ಪ್ರಧಾನಿಗೆ ಕೃತಜ್ಞತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು ಐದು ನಿಮಿಷಗಳ ಕಾಲ ನಡೆದ ಮಾತುಕತೆ ನಡೆಸಿದ್ದಾರೆ. ಸಿಎಂಗೆ ಕೊರೊನಾ ಸೋಂಕು ತಗುಲಿರುವುದು ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಅಲ್ಲದೇ, ಸೂಕ್ತ ಚಿಕಿತ್ಸೆ ಪಡೆಯಿರಿ ಎಂಬ ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಮಗೆ ಕೋವಿಡ್ ತಗಲಿರುವ ಬಗ್ಗೆ ವಿವರಣೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಜೊತೆಗೆ ಕುಟುಂಬದ ಇಬ್ಬರು ಸದಸ್ಯರಿಗೂ ಸೋಂಕು ತಗುಲಿದೆ ಎಂದು ತಿಳಿಸಿದಾಗ ಎಲ್ಲರೂ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆಯೂ ಪ್ರಧಾನಿಗಳಿಗೆ ಸಿಎಂ ಮಾಹಿತಿ ನೀಡಿದ್ದು, ಇದೀಗ ಬೆಂಗಳೂರಿನಲ್ಲಿ ವರ್ಚುವಲ್ ಆಗಿ ಸಭೆ ನಡೆಸುತ್ತಿದ್ದೇನೆ. ಜ. 13ರಂದು ಸಂಜೆ ತಾವು ಕರೆದಿರುವ ಕೋವಿಡ್ ವರ್ಚುಯಲ್ ಸಭೆಗೆ ಪೂರ್ವಭಾವಿ ರೂಪದಲ್ಲಿ ಈ ಸಭೆ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗಿದೆ. ತಜ್ಞರು ನೀಡುವ ಸಲಹೆಗಳನ್ನು ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯದಲ್ಲಿನ ಕೊರೊನಾ ಎದುರಿಸಲು ಕೈಗೊಳ್ಳಲಾದ ಕ್ರಮಗಳ ಕುರಿತು ಬಸವರಾಜ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.