ವಿಜಯಪುರ: ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ, ಅವರ ಕುಟುಂಬ ಸದಸ್ಯರು ಮತ್ತು ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸುವಂತೆ ಆಗ್ರಹಿಸಿ ನಾನಾ ಸಂಘಟನೆಗಳ ಮುಖಂಡರು ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ವಿಜಯಪುರದಲ್ಲಿ ಎಸ್ಪಿ ಕಚೇರಿಗೆ ತೆರಳಿದ ನಾನಾ ಸಂಘಟನೆಗಳ ಮುಖಂಡರು, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ದಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ನಾನಾ ಮುಖಂಡರು, ಎಂ.ಬಿ.ಪಾಟೀಲ ಅವರು ಜನನಾಯಕರಾಗಿದ್ದು, ನಮ್ಮ ಸಮಸ್ತ ಲಿಂಗಾಯತ ಸಮಾಜದ ರಾಷ್ಟ್ರೀಯ ನಾಯಕರಾಗಿದ್ದಾರೆ. ಅಲ್ಲದೇ ಮಾಜಿ ಜಲಸಂಪನ್ಮೂಲ ಸಚಿವರು ಮತ್ತು ಗೃಹ ಸಚಿವರು ಹಾಗೂ ಹಾಲಿ ಶಾಸಕರಾಗಿದ್ದಾರೆ. ಇವರ ಜನಪ್ರಿಯತೆಯನ್ನು ಸಹಿಸದೇ ದಿ. 09.01.2022 ಮತ್ತು 11.01.2022 ರಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ವಯಕ್ತಿಕ ಬೆಂಬಲಿಗರು ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ವಿಜಯಪುರದ ಮನೆಯ ಎದುರು ಸಚಿವರ ಕುಮ್ಮಕ್ಕಿನಿಂದ ಸುಳ್ಳು ಆರೋಪ ಮಾಡುತ್ತ ಬಹಿರಂಗವಾಗಿ ಅಸಂವಿಧಾನಿಕ ಶಬ್ದಗಳನ್ನು ಬಳಸುತ್ತಿದ್ದಾರೆ. ಅಲ್ಲದೇ, ಎಂ. ಬಿ. ಪಾಟೀಲ ಅವರ ತೇಜೋವಧೆ ನಡೆಸುತ್ತಿದ್ದಾರೆ. ಅವರ ಪ್ರತಿಕೃತಿ ಸಹಿತ ದಹನ ಮಾಡಿ ಪ್ರಚೋದನಕಾರಿಯಾಗಿ ವರ್ತಿಸಿದ್ದಾರೆ. ಈಗಾಗಲೇ ತಾವು ಈ ನಿಟ್ಟಿನಲ್ಲಿ ಭದ್ರತೆ ನೀಡಿರುವುದರಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ತಮ್ಮ ವೈಯಕ್ತಿಕ ಬೆಂಬಲಿಗರನ್ನು ಕಳುಹಿಸಿ ಪ್ರತಿಭಟನೆ ನಡೆಸುತ್ತಿರುವದರಿಂದ ನಮಗೆಲ್ಲ ಆತಂಕ ಉಂಟಾಗಿದೆ. ಎಂ. ಬಿ. ಪಾಟೀಲ ಅವರು ರಾಜ್ಯಾದ್ಯಂತ ಜನಪರ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಿರುತ್ತಾರೆ. ಅಲ್ಲದೇ, ಅವರ ಕುಟುಂಬ ಸದಸ್ಯರೂ ಕೂಡ ದಿನನಿತ್ಯದ ಕೆಲಸಗಳಿಗಾಗಿ ತಿರುಗಾಡುತ್ತಿರುತ್ತಾರೆ. ಹೀಗಾಗಿ ಪ್ರತಿಭಟನಾಕಾರರಿಂದ ಪದೇ ಪದೇ ಜೀವ ಬೆದರಿಕೆ ಇರುವುದರಿಂದ ಸರಕಾರ ಮತ್ತು ಪೊಲೀಸ್ ಇಲಾಖೆ ಎಂ. ಬಿ. ಪಾಟೀಲ ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ಭದ್ರತೆ ನೀಡಬೇಕು. ಅಲ್ಲದೇ, ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ಸೂಕ್ತ ಭದ್ರತೆ ಕೈಗೊಳ್ಳಬೇಕು ಎಂದು ವಿಜಯಪುರದ ನಾನಾ ನಾಗರಿಕ ಸಂಘಟನೆಗಳ ಕಾರ್ಯಕರ್ತರಾದ ನಾವು ಒಕ್ಕೋರಲಿನಿಂದ ಆಗ್ರಹಿಸುತ್ತೇವೆ.
ಪ್ರಜಾಸತ್ತೆಯಲ್ಲಿ ವಯಕ್ತಿಕ ನಿಂದನೆ ಅಥವಾ ತೇಜೊವಧೆಗೆ ಆಸ್ಪದವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಈ ರೀತಿಯ ವರ್ತನೆಯಿಂದ ಜಿಲ್ಲೆಯಲ್ಲಿ ಅಸಂತೋಷದ ವಾತಾವರಣ ಮನೆಮಾಡುತ್ತದೆ. ಹೀಗಾಗಬಾರದು ಎಂಬುದು ವಿಜಯಪುರ ನಾಗರಿಕರ ಇಚ್ಛೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆ ವಿಜಯಪುರ ಜಿಲ್ಲಾಧ್ಯಕ್ಷ ಜಿ. ಬಿ. ಸಾಲಕ್ಕಿ, ವಿಜಯಪುರ ಜಿಲ್ಲಾ ಸಣ್ಣ ಕೈಗಾರಿಕೆ ಉದ್ದಿಮೆದಾರರ ಸಂಘದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ರಾಷ್ಟ್ರೀಯ ಬಸವ ಸೇನೆ ಜಿಲ್ಲಾಧ್ಯಕ್ಷ ಡಾ. ರವಿ ಬಿರಾದಾರ, ಸಂತೋಷ ಬಾಲಗಾಂವಿ, ಸಿದ್ದಪ್ಪ ಬಿ. ಸಜ್ಜನ, ಎಸ್. ಡಿ. ಗುಡ್ಡೋಡಗಿ, ಜಯಣ್ಣ ಎಸ್. ತಾಳಿಕೋಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ ಮುಂತಾದವರು ಉಪಸ್ಥಿತರಿದ್ದರು.