ವಿಜಯಪುರ: ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕಲಂ 144ರ ಅಡಿ ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣ ನಿಡಗುಂದಿ ತಾಲೂಕಿನ ಆಮಲಟ್ಟಿ ಪ್ರವಾಸಿಗರಿಲ್ಲದೆ ಭಣಗುಡುತ್ತಿದೆ.
ಪೊಲೀಸರೂ ಕೂಡ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರಿಂದ ಸರಕಾರಿ ರಜೆ ದಿನ, ವಾರಾಂತ್ಯಕ್ಕೆ ಹೆಚ್ಚು ಪ್ರವಾಸಿಗರು ಬರುತ್ತಿದ್ದ ಆಲಮಟ್ಟಿಯಲ್ಲಿ ಪ್ರವಾಸಿಗರಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಂಕ್ರಮಣದ ಅಂಗವಾಗಿ ಸಹಸ್ರಾರು ಜನರು ಇಲ್ಲಿಗೆ ಆಗಮಿಸಿ ಕೃಷ್ಣಾ ನದಿಯಲ್ಲಿ ಪವಿತ್ರ ಸ್ನಾನವೂ ಮಾಡುವುದು ವಾಡಿಕೆಯಾಗಿದೆ. ಆದರೇ, ನಿಷೇಧಾಜ್ಞೆ ಮತ್ತು ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ಬಿಗೀ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಆಲಮಟ್ಟಿ ಜಲಾಷಯ ಪ್ರವೇಶಿಸುವ ಪೆಟ್ರೋಲ್ ಪಂಪ್ ಬಳಿ ಹಾಗೂ ಹನುಮಾನ ದೇವಸ್ಥಾನದ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಪ್ರವಾಸಿಗರ ಆಗಮನವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿತ್ತು. ಇದರಿಂದ ಪ್ರವಾಸಿಗರು ಹಾಗೂ ಪೊಲೀಸರ ನಡುವೆ ವಾಗ್ವಾದ ಪ್ರಸಂಗಗಳು ನಡೆದವು. ಉದ್ಯಾನ ಪ್ರವೇಶ ಮಾಡುವುದಿಲ್ಲ. ಆದರೆ, ರಸ್ತೆಯ ಮೇಲಾದರೂ ಸಂಚರಿಸಲು ಬಿಡಿ ಎಂದು ಸಾರ್ವಜನಿಕರು ಮಾಡಿಕೊಂಡ ಮನವಿಯನ್ನು ಪೊಲೀಸರು ತಿರಸ್ಕರಿಸಿದರು.
ಆಲಮಟ್ಟಿ ಬಳಿ ಕೃಷ್ಣಾ ನದಿಯಲ್ಲಿ ಸ್ನಾನ ಮಾಡುವುದನ್ನು ಕೂಡ ನಿಷೇಧಿಸಲಾಗಿದ್ದು, ಇದರಿಂದ ಜನರು ಸ್ನಾನಕ್ಕಾಗಿ ಕೃಷ್ಣಾ ನದಿಯ ಬೇರೆ ಬೇರೆ ನದಿ ತೀರಗಳನ್ನು ಹುಡುಕುತ್ತ ಹೋದ ದೃಷ್ಯಗಳು ಕಂಡು ಬಂದವು. ಅಲ್ಲದೇ, ಆಲಮಟ್ಟಿ ಅಣೆಕ್ಟಟೆಯ ಮುಂಭಾಗದಲ್ಲಿರುವ ರೇಲ್ವೆ ಸೇತುವೆ ಕೆಳಗೆ ತೆರಳಿದ ಜನರು ಅಲ್ಲಿಯೇ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ನದಿ ತೀರದಲ್ಲಿ ಭೋಜನ ಮಾಡಿದರು. ಸಿಪಿಐ ಸೋಮಶೇಖರ ಜುಟ್ಟಲ ನೇತೃತ್ವದಲ್ಲಿ ಪೊಲೀಸರು ಬಿಗೀ ಬಂದೋಬಸ್ತ್ ಮಾಡಿದ್ದರು.
ನಷ್ಟದಲ್ಲಿ ವ್ಯಾಪಾರಿಗಳು
ವಾರಾಂತ್ಯಕ್ಕೆ ಆಲಮಟ್ಟಿಯಲ್ಲಿರುವ ನಾನಾ ಉದ್ಯಾನಗಳಿಗೆ ಭೇಟಿ ನೀಡಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಇದರಿಂದ ಈ ಪ್ರದೇಶದಲ್ಲಿ ವ್ಯಾಪಾರಿಗಳಿಗೆ ಬಹಳ ದಿನಗಳ ನಂತರ ವ್ಯಾಪಾರ ನಿಧಾನವಾಗಿ ಹೆಚ್ಚಾಗುತ್ತಿತ್ತು. ಆದರೆ, ಈಗ ವೀಕೆಂಡ್ ಕರ್ಫ್ಯೂ ವಿಧಿಸಿದ್ದರಿಂದ ಈ ವ್ಯಾಪಾರಿಗಳಿಗೂ ಸಂಕಷ್ಟ ಎದುರಾಗಿದೆ.