ಬಸವ ನಾಡಿನಲ್ಲಿ ವೀಕೆಂಡ್ ಕರ್ಫ್ಯೂಗೆ ಜನರಿಂದ ಉತ್ತಮ ಸ್ಪಂದನೆ

ವಿಜಯಪುರ: ಕೊರೊನಾ ಒಮಿಕ್ರಾನ್ ಸೋಂಕು ದಿನೇ ದಿನೇ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿದ್ದು, ಸೋಂಕಿತರ ಸಂಖ್ಯೆಯೂ ಭಾರಿ ಸಂಖ್ಯೆಯಲ್ಲಿ ಏರುತ್ತಲೇ ಸಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸೋಂಕು ತಡೆಗಟ್ಟಲು ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂಗೆ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಬಹುತೇಕ ಏಳೆಂಟು ತಿಂಗಳ ಬಳಿಕ ಸೋಂಕಿತರ ಸಂಖ್ಯೆ ಶತಕ ದಾಟಿದೆ.  ಶುಕ್ರವಾರ 107 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.  ಅಲ್ಲದೇ, ಪಾಸಿಟಿವಿಟಿ ದರವೂ ದಿಢೀರನೆ ಹೆಚ್ಚಾಗುತ್ತಿದೆ.  ಈಗ ಜಿಲ್ಲೆಯಲ್ಲಿ ಶೇ. 5.41ರಷ್ಟು ಕೊರೊನಾ ಪಾಸಿಟಿವಿಟಿ ದರ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಜನರೂ ಕೂಡ ಕೊರೊನಾ ಸೋಂಕಿನಿಂದ ಅತಂಕದಲ್ಲಿದ್ದು, ರಾಜ್ಯ ಸರಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂಗೆ ಸ್ಪಂದಿಸುತ್ತಿದ್ದಾರೆ.  ಗುಮ್ಮಟ ನಗರಿ ವಿಜಯಪುರದಲ್ಲಿ ಬೆಳಿಗ್ಗೆಯಿಂದಲೇ ಪೊಲೀಸರು ರಸ್ತೆಗಿಳಿದಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ಜನರ ಓಡಾಟ ತಡೆಯಲು ಕಂಕಣಬದ್ಧರಾಗಿದ್ದಾರೆ.  ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಗಾಂಧಿಚೌಕ್ ಬಳಿ ಬಿಗೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪ್ರಮುಖ ಮಾರುಕಟ್ಟೆ ಪ್ರದೇಶವಾದ ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ, ಕೆ. ಸಿ. ಮಾರ್ಕೆಟ್.  ನೆಹರೂ ಮಾರ್ಕೆಟ್. ಸರಾಫ್ ಬಜಾರ, ತರಕಾರಿ ಮಾರುಕಟ್ಟೆ ಸೇರಿದಂತೆ ಎಲ್ಲ ಪ್ರಮುಖ ಮಾರುಕಟ್ಟೆಗಳು ಬಂದ್ ಆಗಿವೆ.  ದಿನ ನಿತ್ಯದ ಬಳಕೆಯ ವಸ್ತುಗಳಿಗೆ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ಔಷಧ ಅಂಗಡಿಗಳು, ಕಿರಾಣಿ ಅಂಗಡಿಗಳು ಮಾತ್ರ ಆಯಾ ಬಡಾವಣೆಗಳಲ್ಲಿ ತೆರೆದಿವೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಗುಮ್ಮಟ ನಗರಿಯಲ್ಲಿರುವ ಐತಿಹಾಸಿಕ ಪ್ರಾಚೀನ ಸ್ಮಾರಕಗಳನ್ನು ಬಂದ್ ಮಾಡಲಾಗಿದೆ.  ಇಲ್ಲಿನ ಐತಿಹಾಸಿಕ ಗೋಳಗುಮ್ಮಟ, ಬಾರಾಕಮಾನ, ಇಬ್ರಾಹಿಂ ರೋಜಾ, ಉಪ್ಪಲಿ ಬುರುಜ, ತಾಜಬಾವಡಿ, ಜುಮ್ಮಾ ಮಸೀದಿ ಸೇರಿದಂತೆ ಎಲ್ಲ ಸ್ಮಾರಕಗಳ ಗೇಟುಗಳನ್ನು ಮುಚ್ಚಲಾಗಿದೆ.  ಇದರಿಂದಾಗಿ ಈ ಸ್ಮಾರಕಗಳು ಪ್ರವಾಸಿಗರಿಲ್ಲದೆ ಭಣಗುಡುತ್ತಿವೆ.

ಮತ್ತೋಂದೆಡೆ, ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಜಯಪುರ ನಗರದ ಬಹುತೇಕ ಕಡೆಗಳಲ್ಲಿ ನಾಕಾಬಂದಿ ಮಾಡುತ್ತಿದ್ದು, ರಸ್ತೆಗಿಳಿಯುವ ಬೈಕ್ ಮತ್ತು ಕಾರುಗಳನ್ನು ತಡೆದು ವಾಪಸ್ ಕಳುಹಿಸುತ್ತಿದ್ದಾರೆ.  ಅಲ್ಲದೇ, ವಿನಾಕಾರಣ ರಸ್ತೆಗಿಳಿದವರಿಗೆ ದಂಡ ವಿಧಿಸಿ ಕೆಲವು ವಾಹನಗಳನ್ನೂ ಸೀಜ್ ಮಾಡುತ್ತಿದ್ದಾರೆ.

ಒಟ್ಟಾರೆ, ಒಂದೆಡೆ ಬಿಗೀ ಪೊಲೀಸ್ ಬಂದೋಬಸ್ತ್ ಮತ್ತು ಮತ್ತೋಂದೆಡೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆಯಿಂದಾಗಿ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

ನಾಲತವಾಡ ಪಟ್ಟಣದಲ್ಲಿಯೂ ಉತ್ತಮ ಪ್ರತಿಕ್ರಿಯೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿಯೂ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ವೀಕೆಂಡ್ ಕರ್ಫ್ಯೂಗೆ ನಾಲತವಾಡ ಪಟ್ಟಣದ ಜನತೆ ಸ್ಪಂದಿಸಿದ್ದಾರೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯ ಸಿಬ್ಬಂದಿ ನಾಲತವಾಡ ಪಟ್ಟಣದಲ್ಲಿ ಎಲ್ಲ ಕಡೆ ತಿರುಗಾಡಿ ಅಂಗಡಿ ಮುಂಗಟ್ಟುಗಳು ಮುಚ್ಚುವಂತೆ ಕ್ರಮ ಕೈಗೊಂಡಿದ್ದಾರೆ. ಅನಾವಶ್ಯಕವಾಗಿ ಬೈಕಿನಲ್ಲಿ ಓಡಾಡುತ್ತಿರುವವರಿಗೆ ಲಾಠಿ ರುಚಿ ತೋರಿಸಿದ್ದಾರೆ.  ಅಲ್ಲದೇ, ಮಾಸ್ಕ್ ಧರಿಸದವರಿಗೆ ಕಟ್ಟೆಚ್ಚರ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌