ವಿಜಯಪುರ: ಭೀಮಾ ನದಿಯಲ್ಲಿ ಮರಳುಗಾರಿಕೆಗೆ ಶೀಘ್ರದಲ್ಲಿ ಅವಕಾಶ ನೀಡಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಭೀಮಾ ನದಿಯಲ್ಲಿ ಮರಳುಗಾರಿಕೆಗೆ 2016-17 ರಿಂದ ನೀಡಲಾಗಿದ್ದ ತಡೆಯಾಜ್ಞೆಯನ್ನು 26.02.2021 ರಂದು ತೆರವುಗೊಳಿಸಿದೆ. ತಡೆಯಾಜ್ಞೆ ಇದ್ದ ಸಮಯದಲ್ಲಿ ಮರಳುಗಾರಿಕೆಗೆ ಬ್ಲಾಕುಗಳನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಸರಕಾರಕ್ಕೆ ಮಾಹಿತಿ ನೀಡಲಾಗಿತ್ತು. ಮರಳುಗಾರಿಕೆಗೆ ಇರುವ ಮಾರ್ಗಸೂಚಿ ಮತ್ತು ಸರಕಾರದ ಹೊಸ ಮರಳು ನೀತಿ-2020 ರಂತೆ ಕ್ರಮ ಕೈಗೊಳ್ಳಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೂಚನೆ ನೀಡಲಾಗಿತ್ತು.
ಅದರಂತೆ ಈಗ ಚಡಚಣ, ಇಂಡಿ ಮತ್ತು ಆಲಮೇಲ ತಾಲೂಕಿನಲ್ಲಿ ಒಟ್ಟು ಐದು ಕಡೆ ಮರಳುಗಾರಿಕೆಗೆ ಸೂಕ್ತ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲದೇ, 11.01.2022 ರಂದು ನಡೆದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಹೂಳಿನೊಂದಿಗೆ ಇರುವ ಮರಳನ್ನು ತೆಗೆಯಲು ಅಧಿಸೂಚನೆ ಹೊರಡಿಸಿ ಹಟ್ಟಿ ಚಿನ್ನದ ಗಣಿ ಕಂಪನಿಗೆ ಈ ವಿಚಾರವನ್ನು ಹಸ್ತಾಂತರಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಇದರಿಂದಾಗಿ ಶೀಘ್ರದಲ್ಲಿ ಮರಳಿನ ಸಮಸ್ಯೆ ನೀಗಲಿದೆ ಎಂದು ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಚಡಚಣ ತಾಲೂಕಿನ ಎರಡು ಕಡೆ, ಇಂಡಿ ತಾಲೂಕಿನ ನಾಲ್ಕು ಕಡೆ ಮತ್ತು ಆಲಮೇಲ ತಾಲೂಕಿನ ಎರಡು ಕಡೆಗಳಲ್ಲಿ ಒಟ್ಟು 797 ಎಕರೆ ಪ್ರದೇಶದಲ್ಲಿ 27 ಲಕ್ಷ 41 ಸಾವಿರದ 312 ಮೆಟ್ರಿಕ್ ಟನ್ ಮರಳು ಇರುವುದನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಡಚಣ ತಾಲೂಕಿನಲ್ಲಿ ಭೀಮಾ ನದಿ ಪಾತ್ರದಲ್ಲಿ ಬರುವ ಉಮರಾಣಿ ಮತ್ತು ಸಖ ಗ್ರಾಮಗಳ ಮಧ್ಯೆ 140 ಎಕರೆ ಪ್ರದೇಶದಲ್ಲಿ 487224 ಮೆಟ್ರಿಕ್ ಟನ್, ಇಂಡಿ ತಾಲೂಕಿನ ಗುಬ್ಬೇವಾಡ ಮತ್ತು ಶಿರಗೂರ ಬಳಿ 149 ಎಕರೆಯಲ್ಲಿ 590985 ಮೆಟ್ರಿಕ್ ಟನ್, ಇದೇ ತಾಲೂಕಿನ ಪಡನೂರ ಮತ್ತು ಬರಗುಡಿ ಬಳಿ 160 ಎಕರೆಯಲ್ಲಿ 568279 ಮೆಟ್ರಿಕ್ ಟನ್ ಮತ್ತು ಆಲಮೇಲ ತಾಲೂಕಿನ ದೇವಣಗಾಂವ ಬಳಿ 270 ಎಕರೆಯಲ್ಲಿ 823821 ಮೆಟ್ರಿಕ್ ಟನ್ ಹಾಗೂ ಬಗಲೂರ ಬಳಿ 78 ಎಕರೆಯಲ್ಲಿ 271003 ಮೆಟ್ರಿಕ್ ಟನ್ ಮರಳು ಇರುವುದನ್ನು ಗುರುತಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.