ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಜಿಲ್ಲೆಯ ನಾನಾ ಯೋಜನೆಗಳಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಆಹೇರಿ ತಾಂಡಾದಲ್ಲಿ ಪ್ರಗತಿ ಕಾಲೋನಿ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರೂ 1.50 ಕೋ. ವೆಚ್ಚದಲ್ಲಿ ಮಾಡಲಾಗುತ್ತಿರುವ ಸಿಸಿ ರಸ್ತೆ ಮತ್ತು ಸಮುದಾಯ ಭವನಗಳ ಪೂರ್ಣಗೊಂಡ ಕಾಮಗಾರಿಗಳನ್ನು ಅವರು ವೀಕ್ಷಿಸಿದರು. ಅಲ್ಲದೇ, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಕನ್ನಾಳ ಗ್ರಾಮದಲ್ಲಿ ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಡಾ. ಬಿ. ಆರ್. ಅಂಬೇಡ್ಕರ ಭವನವನ್ನು ಅವರು ಪರಿಶೀಲನೆ ನಡೆಸಿದರು.
ಬಳಿಕ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ರೂ. 2.90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಗಾಂಧಿ ಭವನ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಭೂತ್ನಾಳ ಕೆರೆಯ ಬಳಿ ನಿರ್ಮಿಸಲಾಗುತ್ತಿರುವ ಮತ್ತು ಅರ್ಧಕ್ಕೆ ನಿಂತಿರುವ ಸೈಕ್ಲಿಂಗ್ ವೆಲೋಡ್ರೋಮ್ ಕಾಮಗಾರಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ. ಎನ್, ಮಲಜಿ, ಕೆ ಆರ್ ಐ ಡಿ ಎಲ್ ಕಾರ್ಯ ನಿರ್ವಾಹಕ ಅಭಿಯಂತರರು, ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಬಸವರಾಜ ಎಸ್. ನಾಟಿಕಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.