ಸಚಿವ ಕಾರಜೋಳ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ- ದಲಿತರ ಹೆಸರಿನಲ್ಲಿ ರಾಜಕೀಯ ಆರೋಪ

ವಿಜಯಪುರ: ಮೇಕೆದಾಟು ವಿಚಾರದಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ವಿರುದ್ಧ ಸಚಿವ ಗೋವಿಂದ ಕಾರಜೋಳ ಬಬಲಿಗರು ನಡೆಸುತ್ತಿರುವ ಪ್ರತಿಭಟನೆ ವಿರುದ್ಧ ವಿಜಯಪುರ ಜಿಲ್ಲಾ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ಮುೞಂಡರು ಸಚಿವ ಗೋವಿಂದ ಕಾರಜೋಳ ವಿರದ್ಧ ಆಕ್ರೋಶ ಹೊರ ಹಾಕಿದ್ದಾರೆ.

 

ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯಪುರ ಕಾಂಗ್ರೆಸ್ ಎಸ್. ಸಿ. ಘಟಕದ ರಾಜ್ಯ ಸಂಚಾಲಕ ಮತ್ತು ನ್ಯಾಯವಾದಿ ಸುನೀಲ ಉಕ್ಕಲಿ, ಸಚಿವ ಗೋವಿಂದ ಕಾರಜೋಳ ಅವರು ಕೆಲವು ದಲಿತ ಮುಖಂಡರು ಮತ್ತು ಸಂಘಟನೆಗಳನ್ನು ಬಳಸಿಕೊಂಡು ಮಾಜಿ ಸಚಿವ ಎಂ. ಬಿ. ಪಾಟೀಲರ ನಿವಾಸದ ಎದುರು ಧರಣಿ, ಪ್ರತಿಕೃತಿ ದಹನ, ಎಂ. ಬಿ. ಪಾಟೀಲ ಅವರ ಬಗ್ಗೆ ಅನುಚಿತವಾಗಿ ನಿಂದನೆ ಮಾಡಲು ಪ್ರೇರೆಪಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ. ಅಂಬೇಡ್ಕರ ಅವರು ಬರೆದಿರುವ ಸಂವಿಧಾನದ ಕಾನೂನಿನಡಿ ಮೀಸಲಾತಿಯ ಮೂಲಕ ರಾಜಕೀಯ ಅಧಿಕಾರ ಪಡೆದ ಕಾರಜೋಳ ಅವರು ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಮುಂದುವರೆದ, ದಲಿತ ಮತ್ತು ಹಿಂದುಳಿದ ವರ್ಗದವರಲ್ಲಿ ಮನಸ್ತಾಪ ಮೂಡಿಸುವ ಮತ್ತು ಜಾತಿ, ಜಾತಿಗಳಲ್ಲಿ ಕಲಹ ಸೃಷ್ಟಿಸುವ ಕೃತ್ಯಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವರಾಗಿ ಎಂ. ಬಿ. ಪಾಟೀಲ ಅವರು ಮಾಡಿರುವ ಸಾಧನೆಗಳು ಇಂದಿಗೂ ರಾಜ್ಯದಲ್ಲಿ ಮನೆಮಾತಾಗಿವೆ. ಮೇಕೆದಾಟು ಯೋಜನೆಯ ನೆಪದಲ್ಲಿ ವಿನಾಃಕಾರಣ ಕಾರಜೋಳ ಅವರು ಎಂ. ಬಿ. ಪಾಟೀಲ ವಿರುದ್ಧ ಅನಾಮಧೇಯ ಜಾಹಿರಾತಿನ ಮೂಲಕ ಆರೋಪ ಮಾಡುತ್ತಿರುವುದು ಅವರ ಹುದ್ದೆಗೆ ಶೋಭೆ ತರುವಂಥದ್ದಲ್ಲ. ಅಲ್ಲದೆ, ತಮ್ಮದೇ ಪಕ್ಷದ ಪ್ರಧಾನ ಮಂತ್ರಿಯವರಿಗೆ ಮನವಿ ಮಾಡಲು ಹಿಂಜರಿಯುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಲುವಾಗಿ 2013 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಂದಿನ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಅವರ ದಿಟ್ಟ ನಿರ್ಧಾರದಿಂದ ಮೇಕೆದಾಟು ಯೋಜನೆಗೆ ಕಾನೂನಾತ್ಮಕವಾಗಿ ಚಾಲನೆ ನೀಡಲಾಯಿತು. ಈ ವಿಷಯವನ್ನು ಸಚಿವ ಗೋವಿಂದ ಕಾರಜೋಳ ಅವರು ಮರೆಯಬಾರದು ಎಂದು ಹೇಳಿದರು.

ಮಾದಿಗ ಮಹಾಸಭಾ ಅಧ್ಯಕ್ಷ ಮುತ್ತಣ್ಣ ಬೆನ್ನೂರ ಅವರು ಮಾಜಿ ಶಾಸಕ ಪ್ರೊ. ರಾಜು ಆಲಗೂರರವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ, ಅಲ್ಲದೆ, ಅವರನ್ನು ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸಿರುವುದು ಹಾಸ್ಯಾಸ್ಪದ ಹಾಗೂ ಮೂರ್ಖತನದ ಪರಮಾವದಿಯಾಗಿದೆ. ಪ್ರೊ. ರಾಜು ಆಲಗೂರ ಒಬ್ಬ ಮೌಲ್ಯಾಧಾರಿತ ರಾಜಕಾರಣಿ ಎಂದು ಸುನೀಲ ಉಕ್ಕಲಿ ಹೇಳಿದರು.

ಕಾಂಗ್ರೆಸ್ ಎಸ್. ಸಿ. ಘಟಕದ ಜಿಲ್ಲಾಧ್ಯಕ್ಷ ಆರ್. ಕೆ. ಜವನರ, ಸುರೇಶ ಘೋಣಸಗಿ, ತಮ್ಮಣ್ಣ ಮೇಲಿನಕೇರಿ, ಅನಿಲ ಸೂರ್ಯವಂಶಿ, ವಸಂತ ಹೊನಮೊಡೆ, ಬಿ. ಎಸ್.‌ ಬ್ಯಾಳಿ, ಎಂ. ಬಿ. ಹಳ್ಳದಮನಿ, ಅಡಿವೆಪ್ಪ ಸಾಲಗಲ್, ಡಾ. ಸಂದೀಪ ಬೆಳಗಲಿ, ಭಾರತಿ ಹೂಸಮನಿ, ರಾಹುಲ್ ಕುಬಕಡ್ಡಿ, ಸಿದ್ದಾರ್ಥ ಪರನಾಕರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಮೀದ ಮುಶ್ರಿಫ್, ವೈಜನಾಥ ಕರ್ಪೂರಮಠ, ಅಡಿವೆಪ್ಪ ಸಾಲಗಲ್ಲ ವಾಗ್ದಾಳಿ

ಈ ಮಧ್ಯೆ, ಎರಡನೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್‍ಹಮೀದ್ ಮುಶ್ರೀಫ್, ಸಚಿವ ಕಾರಜೋಳ ಒಳ್ಳೆಯವರು. ವಿನಾಕಾರಣ ಉತ್ತಮವಾಗಿ ಕೆಲಸ ಮಾಡಿರುವ ಎಂ. ಬಿ. ಪಾಟೀಲ ಅವರ ವಿರುದ್ಧ ಆಧಾರರಲ ರಹಿತವಾಗಿ ಆಪಾದನೆ ಮಾಡುವುದನ್ನು ಕೈ ಬಿಡಬೇಕು. ಕಾರಜೋಳ ಅವರು ತಮ್ಮ ಬೆಂಬಲಿಗರನ್ನು ಎಂ. ಬಿ. ಪಾಟೀಲ ಅವರ ಮನೆಗೆ ಕಳುಹಿಸಿ ಧರಣಿ, ಧಿಕ್ಕಾರ ಹಾಕಿಸುವುದು ಸರಿಯಲ್ಲ. ‌ಈ ಮನೋಭಾವ ಕೈ ಬಿಡದಿದ್ದರೆ ಸಚಿವ ಕಾರಜೋಳ ಅವರ ಮನೆಯೂ ವಿಜಯಪುರದಲ್ಲಿದೆ. ‌ಅವರ ಮನೆಗೂ ನಾವು ಮುತ್ತಿಗೆ ಹಾಕುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಎಂ. ಬಿ. ಪಾಟೀಲ ಅವರು ಕಾರಜೋಳ ಸಾಹೇಬರ ಬಗ್ಗೆ ಹಗರುವಾಗಿ ಮಾತನಾಡಿಲ್ಲ. ಹೀಗಿದ್ದರೂ ಆರೋಪ ಮಾಡಿ ಅವರ ಮನೆಗೆ ಮುತ್ತಿಗೆ ಹಾಕಿಸುವುದು, ಪ್ರತಿಕೃತಿ ದಹನ ಮಾಡುವುದು ಕಾರಜೋಳ ಅವರಂಥ ರಾಜಕಾರಣಿಗೆ ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.

ಈ ಎಲ್ಲವನ್ನೂ ಇಷ್ಟಕ್ಕೇ ನಿಲ್ಲಿಸಿ. ‌ಇಲ್ಲದಿದ್ದರೆ ನಾವೂ ನಿಮ್ಮ ಮನೆ ಮುಂದೆ ಹೋರಾಟ ನಡೆಸಬೇಕಾಗುತ್ತದೆ ಎಂದು ಅಬ್ದುಲ ಹಮೀದ ಮುಶ್ರಿಫ್ ಎಚ್ಚರಿಕೆ ನೀಡಿದರು.

ಡಿಎಸ್ಎಸ್ ಮುಖಂಡ ಅಡಿವೆಪ್ಪ ಸಾಲಗಲ ಮಾತನಾಡಿ, ಹಳ್ಳಿಗಳಲ್ಲಿ ದಲಿತರು ಮೇಲ್ವರ್ಗದವರ ಜೊತೆ ಹೊಂದಾಣಿಕೆಯಿಂದ ಸಾಮರಸ್ಯದ ಜೀವನ ಸಾಗಿಸುತ್ತಿದ್ದಾರೆ. ಇದನ್ನು ಸಚಿವ ಕಾರಜೋಳ ಅವರು ಹಾಳು ಮಾಡುವ ಪ್ರಯತ್ನ ಮಾಡಬಾರದು. ಕಲಬುರ್ಗಿ, ಮುಧೋಳ ಹೀಗೆ ಬೇರೆ ಬೇರೆ ಕಡೆಯಿಂದ ಕರೆಸಿದ ದಲಿತ ಮುಖಂಡರ ಮೂಲಕ ಎಂ. ಬಿ. ಪಾಟೀಲ ಅವರ ಮನೆಗೆ ಕಾರಜೋಳರು ಮುತ್ತಿಗೆ ಹಾಕಿಸಿದ್ದಾರೆ. ದಲಿತರಿಗೆ ಅನ್ಯಾಯ ಆಗಿದೆ ಎಂದರೆ ದಲಿತರ ಮುಖಂಡರನ್ನು ಕರೆಯಿಸಿ ತಿಳಿಸಬಹುದಿತ್ತು. ಅದನ್ನು ಬಿಟ್ಟು ಈ ರೀತಿಯ ಮನೋಭಾವ ತೋರುತ್ತಿರುವುದು ಸರಿಯಲ್ಲ ಎಂದು. ಈ ಹಿಂದೆ ದೌರ್ಜನ್ಯ ನಡೆದಾಗ ಜಾತಿ ನಿಂದನೆ ಕೇಸ್ ಹಾಕಬೇಡಿ ಎನ್ನುತ್ತಿದ್ದ ಸಚಿವರು ಈಗ ತಮ್ಮನ್ನು ಜಾತಿಗೆ ಸೀಮಿತ ಮಾಡಿಕೊಳ್ಳುತ್ತಿದ್ದಾರೆ. ದಲಿತರಿಗೆ ಅವಮಾನವಾಗಿದೆ ಎನ್ಮುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಮಾದಿಗರು, ಹರಿಜನರು ಸೇರಿದಂತೆ ಎಲ್ಲ ದಲಿತರು ಸಾಮರಸ್ಯದಿಂದ ಇದ್ದೇವೆ.‌‌ಆ ಸಾಮರಸ್ಯ ಹಾಳಾಗಬಾರದು. ಸಚಿವ ಕಾರಜೋಳ ಅವರು ಮೇಲ್ವರ್ಗದವರ ಮೇಲೆ ದಲಿತರ ಹೆಸರಿನಲ್ಲಿ ದೌರ್ಜನ್ಯ ಮಾಡಬಾರದು ಎಂದು ಅಡಿವೆಪ್ಪ ಸಾಲಗಲ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಜನಾಥ ಮಾತನಾಡಿ, ಮಾಜಿ ಸಚಿವ ಎಂ. ಬಿ. ಪಾಟೀಲ ನಿವಾಸದ ಎದುರು ಧರಣಿ, ಪ್ರತಿಭಟನೆ ನಡೆಸಿ ಅವಮಾನಿಸುವುದು ಸರಿಯಲ್ಲ. ಕಾಂಗ್ರೆಸ್ ಕೂಡ ಇದನ್ನು ಎದುರಿಸಿ ಪ್ರತ್ಯುತ್ತರ ನೀಡಲು ಸಮರ್ಥವಾಗಿದೆ ಎಂದು ಹೇಳಿದರು.

Leave a Reply

ಹೊಸ ಪೋಸ್ಟ್‌