ಬಂಜಾರಾ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ನಡೆಸಿದ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ

ವಿಜಯಪುರ: ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಜ್ಞ ವೈದ್ಯರ ತಂಡದೊಂದಿಗೆ ವಿಜಯಪುರ ನಗರದ ಬಂಜಾರಾ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದರು.

ವಿಶೇಷ ತಜ್ಞರನ್ನೊಳಗೊಂಡ ತಂಡದೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಅಲ್ಲಿನ ರೋಗಿಗಳನ್ನು ಟ್ರಯೇಜಿಗೆ ಒಳಪಡಿಸುವ ಬಗ್ಗೆ ಪರಿಶೀಲನೆ ನಡೆಸಿದರು.  ಅಲ್ಲದೇ, ಕೊರೊನಾ 3ನೇ ಅಲೆಗಾಗಿ ರೋಗಿಗಳನ್ನು ದಾಖಲು ಮಾಡುವ ವಾರ್ಡ್‍ಗಳ ಐಸಿಯು ಬೆಡ್‍ಗಳನ್ನು ಅವರು ಪರಿಶೀಲನೆ ನಡೆಸಿದರು.

ಬಂಜಾರಾ ಆಸ್ಪತ್ರೆಯಲ್ಲಿ ಗರ್ಭಿಣಿಯು ಮರಣ ಹೊಂದಿರುವ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದ ಅವರು, ಪ್ರತಿ ಕೇಸುಗಳ ಬಗ್ಗೆ ಎಕ್ಸಪರ್ಟ್ ಕಮಿಟಿಯ ಸದಸ್ಯರೊಂದಿಗೆ ಚರ್ಚೆ ನಡೆಸಿದರು.  ಸರಕಾರದ ಮಾರ್ಗಸೂಚಿಗಳನ್ವಯ ಚಿಕಿತ್ಸೆ ನೀಡಲು ಹಾಗೂ ಆಸ್ಪತ್ರೆಯಲ್ಲಿ ವೆಂಟಿಲೇಟರ್ಸ್, ಎಚ್‍ಎಫ್‍ಎನ್‍ಸಿ ಹಾಗೂ ಮಲ್ಟಿಪ್ಯಾರಾ ಮಾನಿಟರ್‍ಗಳ ಲಭ್ಯತೆಯ ಬಗ್ಗೆ ವೀಕ್ಷಿಸಿ ಅವುಗಳನ್ನು ಸುಸ್ಥಿತಿಯಲ್ಲಿಡುವಂತೆ ಸೂಚನೆ ನೀಡಿದರು.

ಕೊರೊನಾ 3ನೇ ಅಲೆಯಲ್ಲಿ ಎಷ್ಟು ಮಕ್ಕಳಿಗೆ ಸೋಂಕು ಹರಡಿದೆ ಹಾಗೂ ಅದಕ್ಕಾಗಿ ತಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕ ಮಕ್ಕಳ ವಾರ್ಡ್‍ನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಬೆಡ್‍ಗಳ ಲಭ್ಯತೆಯ ಮಾಹಿತಿಯನ್ನು ತಂತ್ರಾಂಶದಲ್ಲಿ ಕಾಲಕಾಲಕ್ಕೆ ನಮೂದಿಸಬೇಕು.  ಅಲ್ಲದೇ, ಆಸ್ಪತ್ರೆಯ ಆವರಣದಲ್ಲಿ ಮಾಹಿತಿಯನ್ನು ಪ್ರದರ್ಶಿಸಬೇಕು.  ಅದೇ ರೀತಿ ಬೇರೆ ಜಿಲ್ಲೆಗಳಿಂದ ದಾಖಲಾಗುವ ಪ್ರಕರಣಗಳನ್ನು ಬೆಡ್ ಮ್ಯಾನೇಜ್‍ಮೆಂಟ್ ಪೋರ್ಟಲ್ ಮೂಲಕ ದಾಖಲಿಸಿ ಉಚಿತ ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದರು.

ಆಕ್ಸಿಜನ್ ದಾಸ್ತಾನನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು.  ಆಕ್ಸಿಜನ್ ಕೊರತೆಯಿಂದಾಗಿ ಯಾವುದೇ ರೋಗಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.  ಎಬಿ ಎಆರ್‍ಕೆ ಅಡಿಯಲ್ಲಿ ಅಥವಾ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಕುರಿತು ಪ್ರತಿ ರೋಗಿಯಿಂದ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕಗು.  ಎಬಿ ಎಆರ್‍ಕೆ ಅಡಿಯಲ್ಲಿ ನೀಡುವ ಚಿಕಿತ್ಸೆಗಳ ವಿವರದ ಬೋರ್ಡ್‍ಗಳನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು ಎಂದು ಪಿ. ಸುನೀಲ ಕುಮಾರ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಿಶೇಷ ತಜ್ಞರ ತಂಡದ ಸದಸ್ಯರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಯರಗಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್. ಎಲ್. ಲಕ್ಕಣ್ಣವರ, ಅಲ್ ಅಮೀನ ವೈದ್ಯಕೀಯ ಮಹಾವಿದ್ಯಾಲಯದ ಅನಸ್ಥೇಶಿಯಾ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರಕುಮಾರ, ಬಿ ಎಲ್ ಡಿ ಇ ವೈದ್ಯಕೀಯ ಮಹಾವಿದ್ಯಾಲಯದ ಪಲ್ಮನರಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸಂತೋಷ ನೇಮಿಗೌಡ, ಐಎಮ್‍ಎ ಅಧ್ಯಕ್ಷ ಡಾ. ಸಂತೋಷ ನಂದಿ, ಸ್ವಯಂ ಸೇವಾ ಸಂಸ್ಥೆಯ ಪೀಟರ್ ಅಲೆಕ್ಸಾಂಡರ್, ಬಂಜಾರಾ ಆಸ್ಪತ್ರೆಯ ಡಾ. ದೀಪಕ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌