ವಿಜಯಪುರ: ವಿಜಯಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯವೈಖರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಷಯಿ ಶಹಬ್ಬಾಷ್ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಈ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಸಿಎಂ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು. ಈ ಸಭೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸಾಧಿಸಿರುವ ಪ್ರಗತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದರು.
ಸಭೆಯ ಬಳಿಕ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಕೊರೊನಾ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಜೊತೆಗೆ ಸಿಎಂ ವಿಡಿಯೋ ಕಾನ್ಪರೆನ್ಸ್ ನಡೆಸಿದರು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಆಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಿಎಂ ಅವರು ಸಭೆಯಲ್ಲಿ ಕೊರೊನಾ ಲಸಿಕಾಕರಣ ಬಗ್ಗೆ ಮಾಹಿತಿ ಪಡೆದರು. ವಿಜಯಪುರ ಜಿಲ್ಲೆಯಲ್ಲಿ ಮೊದಲ ಕೋವಿಡ್ ಡೋಸ್ ಲಸಿಕೆ ಹಾಕುವುದರಲ್ಲಿ ಶೇ. 104 ರಷ್ಟು ಸಾಧನೆ ಮಾಡಲಾಗಿದೆ. ಎರಡನೇ ಡೋಸ್ ಲಸಿಕೆ ಹಾಕುವಲ್ಲಿ ಶೇ. 91ರಷ್ಟು ಸಾಧನೆ ಮಾಡಲಾಗಿದೆ. ಫೆಬ್ರುವರಿ ಮೊದಲ ವಾರದಲ್ಲಿ ಎರಡನೇ ಡೋಸ್ ಲಸಿಕಾಕರಣ ಪೂರ್ಣಗೊಳಿಸಲಾಗುತ್ತದೆ ಎಂದು ಸಿಎಂಗೆ ಭರವಸೆ ನೀಡಿದ್ದೇವೆ ಎಂದು ತಿಳಿಸಿದರು.
ಸಂಜೆ ನಡೆದ 18 ಜಿಲ್ಲೆಗಳ ಪೈಕಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೊರೊನಾ ನಿಯಂತ್ರಣ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಅಲ್ಲದೇ, ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಲಸಿಕಾಕರಣ ಆಗಿದ್ದು ಮೊದಲ ಸ್ಥಾನದಲ್ಲಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೇ, ವಿಜಯಪುರ ಜಿಲ್ಲೆಯಲ್ಲಿ 15 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಶೇ. 61 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಲಾಯಿತು. ಶಾಲೆಯಿಂದ ಹೊರಗುಳಿದಿರುವ ಮತ್ತು ಮನೆಯಲ್ಲಿರುವ ಮಕ್ಕಳಿಗೆ ಮನೆ ಬಾಗಿಲಿಗೆ ತೆರಳಿ ಕೋವಿಡ್ ಲಸಿಕೆ ಹಾಕಲು ಸಿಎಂ ಸೂಚನೆ ನೀಡಿದ್ಧಾರೆ. ಅಲ್ಲದೇ, ಬೂಸ್ಟರ್ ಡೋಸ್ ಸಹ ಹಾಕಲು ಸಿಎಂ ಅವರು ಆಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವೀಕೆಂಡ್ ಕರ್ಪ್ಯೂ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ. ಕೋವಿಡ್ ಬಗ್ಗೆ ಪಾಸಿಟಿವಿಟಿ ರೇಟ್, ನೀಡಲಾಗುತ್ತಿರುವ ಚಿಕಿತ್ಸೆ, ಆಸ್ಪತ್ರೆಯಲ್ಲಿರುವ ಪಾಸಿಟಿವ್ ಪೀಡಿತರ ಸಂಖ್ಯೆ ಬಗ್ಗೆ ಸಿಎಂ ಮಾಹಿತಿ ಪಡೆದರು. ಬೆಡ್ ಸೇರಿದಂತೆ ಆಕ್ಸಿಜನ್ ಬಗ್ಗೆಯೂ ಸಿಎಂ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಮಾಹಿತಿ ಪಡೆದರು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು.