ಕೋವಿಡ್ ನಿಂದ ಗುಣಮಖರಾದ ಸಿಎಂ- ಕೋವಿಡ್ ನಿರ್ಬಂಧ ಸಡಲಿಕೆ ಬಗ್ಗೆ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್ ನಿಂದ ಗುಣಮುಖರಾಗಿದ್ದು, ದಿನಿನಿತ್ಯದ ಕಚೇರಿ ಕೆಲಸಗಳಲ್ಲಿ ತೊಡಗಿಸಿಕೊಡೇದಿದ್ದಾರೆ.

ಕೊರೊನಾದಿಂದ ಗುಣಮುಖರಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ 11 -12 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಗಿದಿದ್ದು, ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ.  ಇಂದಿನಿಂದ ದಿನದ ಕೆಲಸ ಕಾರ್ಯಗಳಲ್ಲಿ ತೊಡಗುವುದಾಗಿ ತಿಳಿಸಿದರು.

ಕೋವಿಡ್ ನಿಯಮ ಸಡಿಲಿಕೆ ಕುರಿತು ವಿಚಾರ

ಈ ಬಾರಿ ಕೊರೊನಾ ಸೋಂಕಿತರು  ಆಸ್ಪತ್ರೆ ದಾಖಲಾಗುವ ಪ್ರಮಾಣ ಕಡಿಮೆಯಿದೆ.  ಹೀಗಾಗಿ ದಿನನಿತ್ಯದ ಕೆಲಸ ಮಾಡಿಕೊಂಡು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದರೆ ಅನುಕೂಲವಾಗುತ್ತದೆ ಎಂಬ ಭಾವನೆ ಇದೆ.  ತಜ್ಞರು ಇದನ್ನು ಪರಾಮರ್ಶೆ ಮಾಡುತ್ತಿದ್ದು, ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಸಂಪೂರ್ಣ ಚಿತ್ರಣವನ್ನು ನಮ್ಮ ಮುಂದೆ ಇಡಲಿದ್ದಾರೆ.  ಈ ಬಗ್ಗೆ ಸ್ಪಷ್ಟತೆ ದೊರೆತ ನಂತರ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಡಿಸಿಗಳೊಂದಿಗೆ ಸಭೆ ವಿಚಾರ

ಮಂಗಳವಾರ ಕೋವಿಡ್ ನಿಯಂತ್ರಣ ಹಾಗೂ ಲಸಿಕೆ ಕಾರ್ಯಕ್ರಮದ ಕುರಿತು ಜಿಲ್ಲಾಧಿಕಾರಿಗಳೊಂದಿಗೆ  ವೀಡಿಯೊ ಸಂವಾದ ನಡೆಸಲಾಗಿದೆ.  ಲಸಿಕೆ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಎರಡೂ ಡೋಸ್ ಹಾಗೂ 15-18 ವರ್ಷ ವಯೋಮಾನದವರಿಗೆ, ಕರೊನಾ ಯೋಧರಿಗೆ ಲಸಿಕೆ ನೀಡುವಿಕೆಯನ್ನು ತೀವ್ರ ಗತಿಯಲ್ಲಿ ನಡೆಸಲು ವಿಶೇಷ ಗಮನ ನೀಡಲು ಸೂಚನೆ ನೀಡಲಾಗಿದೆ.  ಶೇ 94 ರಷ್ಟು ಜನ ಹೋಮ್ ಐಸೋಲೇಶನ್ ನಲ್ಲಿ ಇರುವುದರಿಂದ ಆರೋಗ್ಯ ಇಲಾಖೆ ಗಮನ ನೀಡಿ ಸೋಂಕಿತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಟೆಲಿ ಟ್ರಯಾಜಿಂಗ್ ಹಾಗೂ ಔಷಧ ಕಿಟ್ ಗಳನ್ನು ವಿತರಿಸಬೇಕು.  ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಬೇಕು.  ಬೂಸ್ಟರ್ ಡೋಸ್ ಗಳನ್ನು ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ.  ಒಪಿಡಿ ಬಲಪಡಿಸಲು ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ.  ಈ ಹಿನ್ನೆಲೆಯಲ್ಲಿ ತಜ್ಞರ ಸಲಹೆಯಂತೆ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಫೆಬ್ರವರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪೀಕ್ ತಲುಪುವ ನಿರೀಕ್ಷೆ

ಬೇರೆ ಬೇರೆ ರಾಜ್ಯ ಗಳ ಟ್ರೆಂಡ್ ಪರಿಶೀಲಿಸಿರುವ ತಜ್ಞರು, ನಮ್ಮ ರಾಜ್ಯದಲ್ಲಿ ವಿಳಂಬವಾಗಿ ಪ್ರಾರಂಭವಾದ ಅಲೆ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಏರುಗತಿಯನ್ನು ತಲುಪಬಹುದು ಎಂದು ಅಂದಾಜು ಮಾಡಿದ್ದಾರೆ ಎಂದು ಅವರು ತಿಳಿಸಿದರು.

ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ

ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣ ದಾಖಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ.  ಇದರಲ್ಲಿ ಯಾವ ಸಂಘ, ಸಂಘಟನೆ ಎಂಬ ಬೇಧಭಾವವಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರ

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.

Leave a Reply

ಹೊಸ ಪೋಸ್ಟ್‌