ಕೆಲ ಸಂಘಟನೆಗಳಿಂದ ಎಂ. ಬಿ. ಪಾಟೀಲ ಅವರ ತೇಜೋವಧೆ ಆರೋಪ- ನಾನಾ ಸಂಘಟನೆಗಳ ಸಭೆಯಲ್ಲಿ ಮುಖಂಡರು ಮಾತುಗಳು

ವಿಜಯಪುರ: ಮೇಕೆದಾಟು ವಿಚಾರದಲ್ಲಿ ಜಲಸಂಪನ್ಮೂಲ ಖಾತೆ ಹಾಲಿ ಮತ್ತು ಮಾಜಿ ಸಚಿವರ ಮಧ್ಯೆ ಆರೋಪ ಪ್ರತ್ಯೋರೋಪಗಳು ನಡೆದಿದ್ದವು. ಈ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ವಿಜಯಪುರ ನಿವಾಸದ ಎದುರು ಪ್ರತಿಭಟನೆ ನಡೆಸಿ, ಪ್ರತಿಕೃತಿ ಕೂಡ ದಹನ ಮಾಡಿದ್ದರು. ಇದಾದ ಬಳಿಕ ಕೆಲವು ಸಂಘಟನೆಗಳ ಕಾರ್ಯಕರ್ತರು ಎಂ. ಬಿ. ಪಾಟೀಲ ವಿರುದ್ಧ ಮೂರು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಲು ದೂರು ನೀಡಿದ್ದವು. 

 

 

 

ಈ ಹಿನ್ನೆಲೆಯಲ್ಲಿ, ವಿಜಯಪುರ ಜಿಲ್ಲೆಯಲ್ಲಿ ದಲಿತರ ಹೆಸರಿನಲ್ಲಿ ಅನಗತ್ಯವಾಗಿ ಕೆಲವರನ್ನು ಎತ್ತಿಕಟ್ಟಿ, ಸುಳ್ಳು ಮೊಕದ್ದಮೆ ದಾಖಲಿಸುವುದು. ಜಾತಿನಿಂದನೆ ಕೇಸ್ ಹಾಕಿಸುವುದು. ದಾಂದಲೆ ಮಾಡುವದು. ಬೆದರಿಕೆ ಹಾಕುವುದು. ತೇಜೋವಧೆ ಮಾಡುವುದು ಇತ್ಯಾದಿ ಕಿರುಕುಳಗಳ ಕುರಿತಂತೆ ಸಮಾಲೋಚನಾ ಸಭೆ ವಿಜಯಪುರ ನಗರದ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ನಡೆಯಿತು. ವಿಜಯಪುರ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಮತ್ತು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಈ ಸಭೆ ಕರೆದಿದ್ದರು.

ಈ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಡಾ.ಮಹಾಂತೇಶ ಬಿರಾದಾರ, ಕಳೆದ 10 ದಿನಗಳಲ್ಲಿ ನಡೆದ ವಿದ್ಯಮಾನಗಳನ್ನು ಎಲ್ ಸಿ ಡಿ ಪರದೆಯ ಮೇಲೆ ತೋರಿಸಿ ವಿವರ ನೀಡಿದರು.
ಕಾವೇರಿ ಮತ್ತು ಕೃಷ್ಣೆಯ ವಿಷಯದಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಬದ್ಧತೆ ಪ್ರಶ್ನಾರ್ಹವಾಗಿದೆ. ರಾಜ್ಯದ ಪರ ವಾದ ಮಾಡಲು ಫಾಲಿ ನಾರಿಮನ್ ಮನನೊಂದು ಹಿಂದೇಟು ಹಾಕಿದಾಗ ಅವರ ಕೈಕಾಲು ಹಿಡಿದು ವಾದ ಮಾಡುವಂತೆ ಮಾಡಿರುವ ಶ್ರೇಯಸ್ಸು ಎಂ.ಬಿ. ಪಾಟೀಲರಿಗೆ ಸಲ್ಲುತ್ತದೆ. ಎರಡು ದಶಕಗಳಿಂದ ಕಾವೇರಿ ಜಲವಿವಾದದಲ್ಲಿ ಕರ್ನಾಟಕ ಪರ ವಾದ ಮಂಡಿಸುತ್ತಿದ್ದ ಫಾಲಿ ನಾರಿಮನ್ ಅವರ ವಿರುದ್ಧ ಬಿಜೆಪಿ ನಾಯಕರು ವಿನಾಕಾರಣ ಆರೋಪ ಹೊರೆಸಿದ್ದರು. ಇದರಿಂದ ಮನನೊಂದ ಅವರು ಸರಕಾರದಿಂದ ಪಡೆದ ಸಂಪೂರ್ಣ ಶುಲ್ಕವನ್ನು ಚೆಕ್ ಮೂಲಕ ವಾಪಾಸ್ಸು ನೀಡಿ ವಾದ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಆದರೆ ಎರಡು ದಶಕಗಳಿಂದ ವಾದ ಮಂಡಿಸಿರುವ ನ್ಯಾಯವಾದಿ ಈಗ ವಾದ ಮಂಡಿಸದೇ ಹೋದರೆ ರಾಜ್ಯಕ್ಕೆ ದೊಡ್ಡ ಹಿನ್ನೆಡೆಯಾಗಲಿದೆ ಎಂದು ಅರಿತ ಎಂ. ಬಿ. ಪಾಟೀಲರು ಬೆಳಿಗ್ಗೆ 6 ಗಂಟೆಗೆ ಅವರ ಗೇಟ್ ಮುಂದೆ ನಿಂತು ಅವರ ಕಾಲು ಮುಟ್ಟಿ ವಾದ ಮಾಡುವಂತೆ ಪಟ್ಟು ಹಿಡಿದರು, ಆಗ ಎಫ್.ಎಸ್. ನಾರಿಮನ್ ಅವರು ನೀವು ನನ್ನ ಮಗವಿದ್ದಂತೆ, ನಿಮ್ಮ ಮಾತಿಗೆ ಒಪ್ಪಿ ವಾದ ಮಾಡುವೆ ಎಂದು ಒಪ್ಪಿಕೊಂಡರು. ಈ ರೀತಿಯ ಬದ್ಧತೆಯುಳ್ಳ ಎಂ.ಬಿ. ಪಾಟೀಲರ ಬಗ್ಗೆ ಅವರ ಬದ್ಧತೆ ಪ್ರಶ್ನೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಆದರೆ, ಎಂ. ಬಿ. ಪಾಟೀಲ ಅವರನ್ನು ವಿಲನ್ ಆಗಿ ಬಿಂಬಿಸಲು ಹೊರಟಿರುವುದು ಖಂಡನಾರ್ಹ. ಬೆಂಬಲಿಗರನ್ನು ಕಳುಹಿಸಿ ಗೂಂಡಾ ವರ್ತನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲು ಪ್ರೇರಣೆ ಮಾಡಿರುವುದು ನೋವಿನ ಸಂಗತಿ. ಪ್ರತಿಕೃತಿ ದಹಿಸಿ ವಿಕೃತಿ ಮೆರೆದಿರುವುದು ಗೋವಿಂದ ಕಾರಜೋಳ ಅವರಂಥ ಸಭ್ಯರು, ಶರಣ ಸಂಸ್ಕೃತಿಯಿಂದ ಬಂದವರಿಗೆ ಶೋಭೆ ತರುವಂಥದ್ದಲ್ಲ. ಬಬಬಲೇಶ್ವರ, ತಿಕೋಟಾ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ಜಾತಿ ನಿಂದನೆ ದೂರು ದಾಖಲಿಸುವಂತೆ ಅಮಾಯಕರಿಗೆ ದಾರಿ ತಪ್ಪಿಸಿ ಪ್ರಚೋದನೆ ನೀಡುತ್ತಿರುವುದು ಖಂಡನಾರ್ಹ ಎಂದು ಹೇಳಿದರು.

ಮುಖಂಡ ಚೆನ್ನಪ್ಪ ಕೊಪ್ಪದ ಮಾತನಾಡಿ, ಸಣ್ಣ ಕೂಸಿಗೂ ಸಹ ಎಂ. ಬಿ. ಪಾಟೀಲ ಅವರ ಕೊಡುಗೆ ಗೊತ್ತಿದೆ, ಪ್ರತಿಭಟನೆಗೆ ಮುಗ್ಧ ದಲಿತ ಸಮಾಜವನ್ನು ಬಳಕೆ ಮಾಡಿ ಅದಕ್ಕೆ ಸೀಮಿತಗೊಳಿಸಬೇಡಿ, ಆ ಸಮುದಾಯವನ್ನು ಅಭಿವೃದ್ಧಿಗೊಳಿಸಿ ಎಂದು ಹೇಳಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಜಾತ್ಯಾತೀತ ನಾಯಕ ದಿ. ರಾಮಕೃಷ್ಣ ಹೆಗಡೆ ಅವರ ಅನುಯಾಯಿಯಾಗಿರುವ ಗೋವಿಂದ ಕಾರಜೋಳರು ಈ ರೀತಿಯ ವರ್ತನೆ ತೋರುತ್ತಿರುವುದು ಸರಿಯಲ್ಲ, ಎಂ. ಬಿ. ಪಾಟೀಲ ಅವರ ಬೆಳವಣಿಗೆ ಸಹಿಸದೇ ಬೆಂಬಲಿಗರನ್ನು ಬಿಟ್ಟು ಪ್ರತಿಭಟನೆಗೆ ಪ್ರೇರಣೆ ಮಾಡಿರುವುದು ಕಾರಜೋಳರ ಹಿರಿತನಕ್ಕೆ ಶೋಭೆ ತರುವುದಿಲ್ಲ, ಡಿಸಿಎಂ ಆಗಿದ್ದ ಕಾರಜೋಳ ಅವರಿಗೆ ಈಗ ಹಿನ್ನೆಡೆಯಾಗಿದೆ, ಹೀಗಾಗಿ ಅವರು ಹೈಕಮಾಂಡ್ ಮೇಲೆ ತಮ್ಮ ಸಿಟ್ಟನ್ನು ಪ್ರದರ್ಶಿಸಬೇಕು ಹೊರತು ಎಂ. ಬಿ. ಪಾಟೀಲ ಮೇಲೆ ಅಲ್ಲ ಎಂದು ಹೇಳಿದರು.

ಮುಗ್ಧ ದಲಿತರನ್ನು ದುರ್ಬಳಕೆ ಯಾರು ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ಜನತಾ ನ್ಯಾಯಾಲಯದಲ್ಲಿಯೇ ತೀರ್ಮಾನವಾಗಲಿ, ಎಂ. ಬಿ. ಪಾಟೀಲ ಅವರಿಗೆ ಭದ್ರತೆ ಕೊಡಿ ಎಂದು ಮನವಿ ಸಲ್ಲಿಸಲು ಎಂ. ಬಿ. ಪಾಟೀಲರ ಬೆಂಬಲಿಗರು ಹೋಗಿದ್ದಾಗ ಅವರಿಗೂ ಸಹ ಫೋನ್ನಲ್ಲಿ ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಲಾಗಿದೆ. ಹೀಗಾಗಿ ಸಚಿವರು ತಮ್ಮ ಸಲಹೆಗಾರನನ್ನು ಬದಲಿಸಿಕೊಳ್ಳಿ ಎಂದು ಹೇಳಿದರು.


ರಮೇಶ ಬಡ್ರಿ ಮಾತನಾಡಿ, ಬಿಜೆಪಿಯಲ್ಲಿ ದಲಿತರಿಗೆ ಮುಖ್ಯಮಂತ್ರಿಯಾಗುವ ಯೋಗ ಬಂದರೆ ಕಾರಜೋಳ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಆಶಯ ನಮಗೂ ಇತ್ತು. ಮುಖಂಡರನ್ನು ಬಿಡಿ ರೈತರ ಕೈಗೆ ಮೈಕ್ ಕೊಟ್ಟು ನೋಡಿ. ಒಂದು ಪ್ರತಿಭಟನೆಗೆ ಕರೆ ಕೊಟ್ಟರೆ ಸಾಕು, ನಿಲ್ಲಲು ಜಾಗವಿಲ್ಲದಷ್ಟು ರೈತರು ಎಂ. ಬಿ. ಪಾಟೀಲ ಅವರ ಪರವಾಗಿ ನಿಲ್ಲುತ್ತಾರೆ. ಎಂ. ಬಿ. ಪಾಟೀಲ ಅವರ ಹೆಸರಿಗೆ ಕಳಂಕ ತರಲು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಹೇಳಿದು.
ಸಂಗಮೇಶ ಬಬಲೇಶ್ವರ ಮಾತನಾಡಿ, ಜಾತಿ ಹೆಸರಿನಲ್ಲಿ ರಾಜಕಾರಣ ಬೇಡ, ಜನ್ಮಕೊಟ್ಟ ತಾಯಿ, ಅನ್ನ ಕೊಟ್ಟ ರೈತನಿಗೆ ಜಾತಿ ಇಲ್ಲ, ಪ್ರತಿಭಟನೆ ಮಾಡಿದವರು ಕೆಲವು ಕಾಣದ ಕೈಗಳ ಪ್ರಚೋದನೆಗೆ ಒಳಗಾದ ನಮ್ಮ ಬಂಧುಗಳೇ ಆಗಿದ್ದಾರೆ. ಪ್ರತಿಭಟನೆ ನಡೆಸಿದ ನಂತರ ಅವರೇ ಅಭಿಪ್ರಾಯ ವ್ಯಕ್ತಪಡಿಸಿ, ಎಂ. ಬಿ. ಪಾಟೀಲ ಅವರಿಗೆ ಟೀಕೆ ಮಾಡಲು ಆತ್ಮಸಾಕ್ಷಿ ಕೆಣಕ್ಕುತ್ತಿತ್ತು ಎಂದು ಫೋನ್ ಕರೆ ಮಾಡಿ ಹೇಳಿದ್ದಾರೆ ಎಂದು ಹೇಳಿದರು.
ಹೊನಮಲ್ಲ ಸಾರವಾಡ ಮಾತನಾಡಿ, ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ ಹಮೀದ್ ಮುಶ್ರೀಫ್, ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ, ವಿ. ಎಸ್. ಪಾಟೀಲ, ಸೋಮನಾಥ ಬಾಗಲಕೋಟ, ಡಾ. ಗಂಗಾಧರ ಸಂಬಣ್ಣಿ, ಮೊಹ್ಮದ್ ರಫೀಕ್ ಟಪಾಲ್ ಎಂಜಿನಿಯರ್, ದಾನಮ್ಮಗೌಡತಿ ಪಾಟೀಲ, ವಿದ್ಯಾರಾಣಿ ತುಂಗಳ, ಗಂಗಾಧರ ಸಾಲಕ್ಕಿ, ಕೆ. ಎಚ್. ಮುಂಬಾರೆಡ್ಡಿ, ಜಮೀರ್ ಭಕ್ಷಿ ಮುಂತಾದವರು ಪಾಲ್ಗೋಂಡಿದ್ದರು.

Leave a Reply

ಹೊಸ ಪೋಸ್ಟ್‌