ಜಿಲ್ಲೆಯಲ್ಲಿ ದಲಿತರ ಹೆಸರಿನಲ್ಲಿ ಅನಗತ್ಯವಾಗಿ ಜನರನ್ನು ಎತ್ತಿ ಕಟ್ಟಿದ ಆರೋಪ- ನಾನಾ ಸಂಘಟನೆಗಳ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕೆಲವು ಸಂಘಟನೆಯವರು ದಲಿತರ ಹೆಸರಿನಲ್ಲಿ ಅನಗತ್ಯವಾಗಿ ಕೆಲವರನ್ನು ಎತ್ತಿ ಕಟ್ಟಿ ಸುಳ್ಳು ಪ್ರಕರಣ ದಾಖಲಿಸುವುದು, ಬೆದರಿಗೆ ಹಾಕುವುದು, ತೇಜೋವಧೆ ಮಾಡುವುದು ಇತ್ಯಾದಿ ಕಿರುಕುಳ ಗುರಿತು ಸಮಾಲೋಚನೆ ಸಭೆ ವಿಜಯಪುರ ನಗರದ ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ನಡೆಯಿತು.

ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಣ್ಣ ಕೈಗಾರಿಕೆಗಳ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಮತ್ತು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ನ್ಯಾಯವಾದಿ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಕುರಿತು ಮಾಹಿತಿ ನೀಡಿದರು.

ಮೇಕೆದಾಟು ನೀರಾವರಿ ಹೋರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂ. ಬಿ. ಪಾಟೀಲ ಮತ್ತು ಹಾಲಿ ಸಚಿವ ಗೋವಿಂದ ಕಾರಜೋಳ ಮಧ್ಯೆ ಹೇಳಿಕೆ ಪ್ರತಿ ಹೇಳಿಕೆಗಳು ನಡೆದಿವೆ.  ಆದರೆ, ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ ಪರ ಕೆಲವು ಸಂಘಟನೆಗಳು ಮಾಜಿ ಸಚಿವ ಎಂ. ಬಿ. ಪಾಟೀಲ ನಿವಾಸದ ಎದುರು ಪ್ರತಿಭಟನೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರತಿಕೃತಿ ದಹನ ಮಾಡಿದ್ದಾರೆ.  ಅಲ್ಲದೇ, ಎಂ. ಬಿ. ಪಾಟೀಲ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.  ಈ ಕುರಿತು ನಾನಾ ಪೊಲೀಸ್ ಠಾಣೆಗಳಲ್ಲಿ ದೂರನ್ನೂ ಕೂಡ ನೀಡಿದ್ದಾರೆ ಎಂದು ತಿಳಿಸಿದರು.  ಆದರೆ, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಕುರಿತು ತೀರ್ಮಾನಿಸಲು ನಡೆದ ಸಭೆಯಲ್ಲಿ ನಾಲ್ಕು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.  ಎಂ. ಬಿ. ಪಾಟೀಲ ಅವರು ಕಳೆದ 30 ವರ್ಷಗಳಿಂದ ಶತಮಾನಗಳ ಇತಿಹಾಸ ಇರುವ ವಿಜಯಪುರ ಲಿಂಗಾಯತ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ, ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಸಲ್ಲಿಸಿರುವ ಸೇವೆ ನಾಡಿನ ಜನಮನದಲ್ಲಿದೆ.  ಅವರ ಕೆಲಸ ರೈತ ರ ಬದುಕಿನಲ್ಲಿ ಬದಲಾವಣೆ ತಂದಿದೆ.  ಇಂಥವರ ವಿರುದ್ಧ 7 ಪಿಸಿಆರ್ ಅಂದರೆ ಜಾತಿ ನಿಂದನೆ ಆರೋಪ ಮಾಡಿ ತಿಕೋಟಾ, ಬಬಲೇಶ್ವರ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.  ಇದನ್ನು ಈ ಸಭೆ ಖಂಡಿಸುತ್ತದೆ.  ಇದು ಇಡೀ ರಾಜ್ಯದಲ್ಲಿಯೇ ಅತ್ಯಂತ ಕೆಟ್ಟ ಪರಂಪರೆಗೆ ಆರಂಭಕ್ಕೆ ಈ ಘಟನೆ ಕಾರಣವಾಗಿದೆ ಎಂದು ಹೇಳಿದರು.

ರಾಜಕೀಯದಲ್ಲಿ ನಾನಾ ವಿಷಯಗಳ ಕುರಿತು ಭಿನ್ನಾಭಿಪ್ರಾಯಗಳು, ವೈಯಕ್ತಿಕ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನೆ ಮುಂದಿಟ್ಟುಕೊಂಡು ಇನ್ನೊಬ್ಬರ ಮನೆಯ ಮುಂದೆ ಹೋಗಿ, ಪದೇ-ಪದೇ ದೊಂಬಿ ಮಾಡುವುದು, ಅಶ್ಲೀಲ ಶಬ್ದಗಳಿಂದ ನಿಂಧಿಸುವುದು, ಹಲಗೆ ಬಾರಿಸುವುದು, ಘೋಷಣೆ ಕೂಗುವುದು, ತೇಜೋವಧೆ ಮಾಡುವುದು, ಅವಳಿ ಜಿಲ್ಲೆಯ ಇತಿಹಾಸದಲ್ಲಿ ಎಂದೂ ಕೂಡ ಆಗಿರಲಿಲ್ಲ.  ಈ ರೀತಿಯ ಕೃತ್ಯಗಳನ್ನು ಶ್ರೀ ಎಂ.ಬಿ.ಪಾಟೀಲರವರ ವಿಜಯಪುರದ ನಿವಾಸದ ಮುಂದೆ ಒಂದು ಬಾರಿ ಅಲ್ಲ ಎರಡು ಬಾರಿ ಮಾಡುವ ಮೂಲಕ ಇಂತಹ ಕರಾಳ ಕೃತ್ಯಕ್ಕೆ ಜಿಲ್ಲೆ ಸಾಕ್ಷಿಯಾಯಿತು. ಈ ಕೃತ್ಯ ಎಸೆಗಿದವರು ಬಹುತೇಕ ಹೊರ ಜಿಲ್ಲೆಯವರು, ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಇಂಥ ಘಟನೆಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳು ಆಸ್ಪದ ನೀಡಬಾರದು ಎಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರತ್ಯಕ್ಷ ಕಂಡರೂ, ಪ್ರಮಾಣಿಸಿ ನೋಡಬೇಕು.  ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ಶಬ್ದ ಬಳಕೆಯಾಗಿದ್ದನ್ನು ವಿವೇಚನೆಯಿಂದ ನೋಡದೇ, ಅನಗತ್ಯವಾಗಿ ಜನರನ್ನು ಪ್ರಚೋಧಿಸಿ, ರೊಚ್ಚಿಗೆಬ್ಬಿಸುವುದು, ಅವರಿಂದ ದೊಂಬಿ ಮಾಡಿಸುವುದು, ಸುಳ್ಳು ಮೊಕಾದ್ದಮೆಗಳನ್ನು ದಾಖಲಿಸುವುದು, ಬೆದರಿಕೆ ಹಾಕಿಸುವುದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಅಧಿಕಾರ ದೊರೆತಾಗ ಅದನ್ನು ಸದ್ಭಳಕೆ ಮಾಡಿಕೊಂಡು, ಜನಸಮುದಾಯಕ್ಕೆ ಲೋಕಹಿತ ಕಾರ್ಯಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು.  ಎಂ. ಬಿ. ಪಾಟೀಲ ಅವರು ಈ ಹಿಂದೆ ಸಚಿವರಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ಹಲವು ನೀರಾವರಿ ಯೋಜನೆಗಳಿಗೆ ನಿರ್ಣಾಯಕ ಹಂತಕ್ಕೆ ತಲುಪಿಸಿರುವುದು ಜನತೆಗೆ ತಿಳಿದಿರುವ ವಿಚಾರ. ಅದರ ಮುಂದುವರೆದ ಭಾಗವನ್ನು ಈಗ ಅಧಿಕಾರದಲ್ಲಿರುವವರು ಪೂರ್ಣಗೊಳಿಸಲಿ.  ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳನ್ನು ಎಂ. ಬಿ. ಪಾಟೀಲ ಅವರಂತೆ ಯುದ್ದೋಪಾದಿಯಲ್ಲಿ ಪೂರ್ಣಗೊಳಿಸಿ ಜನಮಾನಸದಲ್ಲಿ ಒಳ್ಳೇಯ ಕೆಲಸದಿಂದ ಶಾಶ್ವತವಾಗಿ ಸ್ಥಾನ ಪಡೆಯಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಕಳೆದ 10 ದಿನಗಳಿಂದ ಅವಳಿ ಜಿಲ್ಲೆಯಲ್ಲಿ ನಡೆದಿರುವ ಘಟನಾವಳಿಗಳಿಂದ ಜಿಲ್ಲೆಯ ಜನರ ಮನಸ್ಸು ಘಾಸಿಯಾಗಿದೆ.  ಅದನ್ನು ಸರಿಪಡಿಸುವ ಸಾಮೂಹಿಕ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ.  ಅದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು.  ಆದ್ದರಿಂದ ಈ ವಿಷಯವನ್ನು ಇಲ್ಲಿಗೆ ಕೈಬಿಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಡಾ. ಗಂಗಾಧರ ಸಂಬಣ್ಣಿ ಮತ್ತು ಸುಭಾಷ ಛಾಯಾಗೋಳ ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಮಹಾಂತೇಶ ಬಿರಾದಾರ, ಸಂಗಮೇಶ ಬಬಲೇಶ್ವರ, ವಾರದ, ಕೊಡ್ಲಿ, ಸೋಮನಾಥ ಕಳ್ಳಿಮನಿ, ಹೊನಮಲ್ಲ ಸಾರವಾಡ, ಜಿ. ಬಿ. ಸಾಲಕ್ಕಿ, ಬಡ್ರಿ, ಅಬ್ದುಲ್ ಹಮೀದ ಮುಶ್ರಿಫ್ ಮುಂತಾದವರು ಉಪಸ್ಥಿತರಿದ್ದರು.

ಹೊಸ ಪೋಸ್ಟ್‌