ಸಚಿವ ಗೋವಿಂದ ಕಾರಜೋಳ ಲಿಂಗಾಯಿತ ಉಪಪಂಗಡದವರು-ಎಂ. ಬಿ. ಪಾಟೀಲ ಲಿಂಗಾಯಿತರಲ್ಲ- ಉಮೇಶ ಕೋಳಕೂರ

ವಿಜಯಪುರ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಲಿಂಗಾಯಿತರು ಉಪಪಂಗಡಕ್ಕೆ ಸೇರಿದ್ದಾರೆ.  ಆದರೆ, ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಲಿಂಗಾಯಿತರಲ್ಲ ಎಂದು ವಿಜಯಪುರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಇತ್ತೀಚೆಗೆ ನಡೆದ ಘಟನಾವಳಿಗಳ ಕುರಿತು ಪ್ರಸ್ತಾಪಿಸಿದರು. ಸಚಿವ ಗೋವಿಂದ ಕಾರಜೋಳ ಅವರ ವಿರುದ್ಧ ಮಾಜಿ ಸಚಿವ ಎಂ. ಬಿ. ಪಾಟೀಲ ಪರವಾಗಿ ಈಗಾಗಲೇ ಕೆಲವರು ಮಾತನಾಡಿದ್ದಾರೆ. ಅಲ್ಲದೇ, ಈ ವಿಷಯ ಇಲ್ಲಿಗೆ ಮುಗಿಯುತು ಎಂದು ಹೇಳುತ್ತಲೇ ಬುಧವಾರ ಮತ್ತೆ ಸಮಾಲೋಚನೆ ಸಭೆ ನಡೆಸಿದ್ದಾರೆ. ಕಾರಜೋಳ ಅವರಿಗೆ ಲಿಂಗಾಯಿತರು ಪಾಠ ಕಲಿಸಬೇಕಾಗುತ್ತದೆ ಎಂದು ಕೆಲವರು ಹೇಳಿದ್ದಾರೆ. ಇದನ್ನು ಜಾತಿ ರಾಜಕಾರಣ ಮಾಡಿದವರೇ ಅವರು ಎಂದು ಉಮೇಶ ಕೊಳಕೂರ ಹೇಳಿದರು.

ಲಿಂಗಾಯಿತರೆಂದರೆ ಯಾರು? ಲಿಂಗಾಯಿತರಲ್ಲಿ 106 ಉಪಪಂಗಡಗಳಿವೆ. ಕಾರಜೋಳ ಅವರೂ ಕೂಡ ಲಿಂಗಾಯಿತ ಉಪಪಂಗಡಗಳಿಗೆ ಸೇರಿದ್ದಾರೆ.   ಅವರ ಸಮುದಾಯವೂ ಉಪಜಾತಿಗಳ ಪಟ್ಟಿಯಲ್ಲಿದೆ.  ಹೀಗಾಗಿ ಕಾರಜೋಳ ಅವರೂ ಲಿಂಗಾಯಿತರೇ.  ಕಾರಜೋಳ ಅವರು ಎಂದೂ ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ. ಲಿಂಗಾಯಿತ ನಾಯಕರು ಎಂದು ಹೇಳಿಕೊಳ್ಳುವ ಎಂ. ಬಿ. ಪಾಟೀಲ ಲಿಂಗಾಯಿತರಲ್ಲ. ಅವರ ಸಮುದಾಯದ ಹೆಸರು ಸರಕಾರಿ ಜಾತಿ ಪಟ್ಟಿಯಲ್ಲಿಯೇ ಇಲ್ಲ. ಲಿಂಗಾಯಿತರಲ್ಲದವರು ಲಿಂಗಾಯಿತ ನಾಯಕರಾಗಲು ಹೊರಟಿದ್ದೀರಿ.  ಕೂಡು ಒಕ್ಕಲಿಗ ಸಮುದಾಯದವರು ಈ ಹಿಂದೆ ತಮ್ಮನ್ನು ದಕ್ಷಿಣ ಕರ್ನಾಟಕದ ಒಕ್ಕಲಿಗರ ಜೊತೆ ಸೇರಿಸಿ ಎಂದು ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.

ಎಂ. ಬಿ. ಪಾಟೀಲ ವಿರುದ್ಧ ಕಾರಜೋಳ ಬೆಂಬಲಿಗರು ಜಾತಿ ನಿಂದನೆ ಕೇಸ್ ದಾಖಲು ಮಾಡಿಲ್ಲ. ನೀರಾವರಿ ವಿಚಾರಗಳು ಮತ್ತು ಹಗರಣಗಳ ಕುರಿತು ಕಾರಜೋಳ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರು.  ಆದನ್ನು ಮರೆ ಮಾಚುವ ಸಲುವಾಗಿ ಎಂ. ಬಿ. ಪಾಟೀಲ ಅವರು ಸಚಿವ ಕಾರಜೋಳ ವಿರುದ್ಧ ಅಪಪ್ರಚಾರ ಮಾಡಿದ್ದಾರೆ.  ದಲಿತರನ್ನು ನಮ್ಮ ವಿರುದ್ದ ಕಾರಜೋಳ ಎತ್ತಿ ಕಟ್ಟಿದ್ದಾರೆ ಎಂದು ಅಪಪ್ರಚಾರ ಮಾಡಿದ್ದಾರೆ. ಎಂ. ಬಿ. ಪಾಟೀಲ ಅವರಿಗೆ ಪೊಲೀಸರು ಈಗಾಗಲೇ ರಕ್ಷಣೆ ನೀಡಿದ್ದಾರೆ. ಎಂ. ಬಿ. ಪಾಟೀಲ ಅವರ ನಿವಾಸದ ಬಳಿ ಕೇವಲ ಕಾರಜೋಳ ಅವರ ಜನಾಂಗದವರು ಪ್ರತಿಭಟನೆ ಮಾಡಿಲ್ಲ. ಬಿಜೆಪಿ ಮತ್ತು ಕಾರಜೋಳ ಅವರ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಇದನ್ನು ಜಾತಿಗೆ ತಳಕು ಹಾಕುವುದು ಸರಿಯಲ್ಲ. ಕಾರಜೋಳ ಅವರು ಎಲ್ಲ ಜಾತಿ ಜನಾಂಗದ ನಾಯಕರಾಗಿದ್ದಾರೆ. ಅವರನ್ನು ಜಾತಿಗೆ ಸೀಮಿತಗೊಳಿಸುವ ಕೆಲಸ ಮಾಡಬಾರದು ಎಂದು ಅವರು ಹೇಳಿದರು.

ಜಾತಿ ರಾಜಕಾರಣ ಯಾರು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾರಜೋಳ ಅವರು ಜನರನ್ನು ಕೂಡಿಸಿ ಪ್ರತಿಭಟನೆ ಮಾಡಿಸುವ ಸಂಸ್ಕೃತಿಯವರಲ್ಲ. ಯಾರು ತಪ್ಪು ಮಾಡಿದ್ದಾರೆ ಎಂಬುದರ ಬಗ್ಗೆ ಬಹಿರಂಗ ಚರ್ಚೆ ಮಾಡಬೇಕು. ಹಿರಿಯ ನಾಯಕರಿಗೆ ಅಗೌರವ ಮಾಡಿದ್ದಕ್ಕೆ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆ ನಡೆಯಲು ಯಾರು ಕಾರಣ? ತಪ್ಪಿನ ಮೂಲ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಸದಸ್ಯ ನವೀನ ಅರಕೇರಿ, ಬಿಜೆಪಿ ಮುಖಂಡರಾದ ವಿಠ್ಠಲ ಕಿರಸೂರ, ರಾಮು ಜಾಧವ, ಈರಣ್ಣಾ ಶಿರಮಗೊಂಡ, ಶಿವು ದಳವಾಯಿ, ಮಲ್ಲಿಕಾರ್ಜುನ ಕನ್ನೂರ, ಸಾಹೇಬಗೌಡ ಬಿರಾದಾರ, ಎಂ. ಆರ್. ತುಂಗಳ, ರಾಜೇಂದ್ರ ಕುಲಕರ್ಣಿ, ಸಿದ್ದುಗೌಡ ಪಾಟೀಲ ಹೂವಿನಹಳ್ಳಿ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌