ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಡಿಸಿ ಪಿ. ಸುನೀಲ ಕುಮಾರ ಸೂಚನೆ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯುತವಾಗಿ ಮತ್ತು ಇನ್ನಷ್ಟು ಚುರುಕಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ನಾನಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ ಅವರು, ಅಧಿಕಾರಿಗಳು ತಮ್ಮ ನಿತ್ಯದ ಕಚೇರಿ ಕೆಲಸ ಕಾರ್ಯಗಳೊಂದಿಗೆ ಕೋವಿಡ್ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಈ ಕೆಲಸಕ್ಕೆ ನೇಮಿಸಲಾದ ಅಧಿಕಾರಿಗಳು ಸೋಂಕಿತರ ಹಾಗೂ ಶಂಕಿತರ ಸಮರ್ಪಕ ಅಗತ್ಯ ಮಾಹಿತಿ ಕ್ರೂಢೀಕರಣ ಸೇರಿದಂತೆ ಅದನ್ನು ಕೋವಿಡ್ ಪೋರ್ಟಲ್, ಆಪ್ ಹಾಗೂ ಸರಕಾರದ ನೂತನ ತಂತ್ರಾಂಶದಲ್ಲಿ ಸಮರ್ಪಕವಾಗಿ ದಾಖಲಿಸುವ ಕುರಿತು ಕೂಡಲೇ ಅವಶ್ಯಕ ಕ್ರಮಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ನಿಯಂತ್ರಣಕ್ಕೆ ನೇಮಿಸಲಾದ ನಾನಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು.  ಲಸಿಕಾಕರಣ ಕಾರ್ಯದಲ್ಲಿ ತೋರಿದ ಬದ್ಧತೆಯನ್ನು ಇಲ್ಲಿಯೂ ತೋರುವ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ವಹಿಸಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸ್ವ್ಯಾಬ್ ಕಲೆಕ್ಟಿಂಗ್ ಟೆಕ್ನಿಶಿಯನ ಗಳ ಪಾತ್ರ ಇದರಲ್ಲಿ ಬಹಳ ಮುಖ್ಯವಾಗಿದೆ.  ಅವರು ಸೋಂಕಿತರ ಮತ್ತು ಶಂಕಿತರ ಮೊಬೈಲ್ ಸಂಖ್ಯೆ ಹಾಗೂ ವಿಳಾಸವನ್ನು ಸಮರ್ಪಕವಾಗಿ ಸಂಗ್ರಹಿಸಬೇಕು.  ಕಾಂಟ್ಯಾಕ್ಟ ಟ್ರೇಸಿಂಗ್ ಮತ್ತು ಕ್ವಾರಂಟೈನ್ ವಾಚ್ ಆಪ್ ನಿರ್ವಹಣೆಯ ವಿಷಯದಲ್ಲಿ ಅಧಿಕಾರಿಗಳು ಬಹಳ ಜಾಗೃತವಾಗಿ ಕಾರ್ಯ ನಿರ್ವಹಿಸಬೇಕು.  ಕಾಂಟಾಕ್ಟ್ ಟ್ರೇಸಿಂಗ್ ಆ್ಯಪ್ ಕುರಿತು ಬಿ ಎಲ್ ಒ ಗಳು ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಕುರಿತು ಹೆಚ್ಚಿನ ಗಮನ ಹರಿಸಬೇಕು.  ಕ್ವಾರಂಟೈನ್ ವಾಚ್ ಆ್ಯಪ್ ಬಗ್ಗೆ ಪಿಡಿಓ, ಬಿಲ್ ಕಲೆಕ್ಟರ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಪರಿಣಾಮಕಾರಿ ಸರಿಯಾಗಿ ಕೆಲಸ ಮಾಡದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿ. ಸುನೀಲ ಕುಮಾರ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿ, ನಗರ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಡೆಯುತ್ತಿದೆ, ಗ್ರಾಮೀಣ ಭಾಗದಲ್ಲಿಯೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಧಿಕಾರಿಗಳು ಕಾರ್ಯೋನ್ಮುರಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.

ಈ ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಯರಗಲ ಸೇರಿದಂತೆ ತಹಸೀಲ್ದಾರರು ಹಾಗೂ ತಾಲೂಕು ಹಾಗೂ ಜಿಲ್ಲಾಮಟ್ಟದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌