ಕಾರಜೋಳರಿಂದ ಸಿರಸಂಗಿ ಲಿಂಗರಾಜರ ವಂಶಸ್ಥರ ಅವಮಾನ- ಸಾಮರ್ಥ್ಯವಿದ್ದರೆ ಸಾಮಾನ್ಯ ಕ್ಷೇತ್ರದಿಂದ ಗೆದ್ದು ತೋರಿಸಲಿ- ಸಂಗಮೇಶ ಬಬಲೇಶ್ವರ

ವಿಜಯಪುರ: ಬಿಜೆಪಿ ಮುಖಂಡ ಉಮೇಶ ಕೋಳಕೂರ ಮೂಲಕ ಸಚಿವ ಗೋವಿಂದ ಕಾರಜೋಳ ಅಖಿಲ ಭಾರತ ವೀರಶೈವ ಮಹಾಸಭೆ ಕಟ್ಟಲು ಕಾರಣರಾದ ಮಹಾದಾನಿ ಸಿರಸಂಗಿ ಲಿಂಗರಾಜರ ವಂಶಸ್ಥರನ್ನು ಅವಮಾನಿಸಿದ್ದಾರೆ ಎಂದು ಪಂಚಮಸಾಲಿ ಸಮುದಾಯದ ರಾಷ್ಚ್ರೀಯ ವಕ್ತಾರ ಮತ್ತು ಕೆಪಿಸಿಸಿ ಸದಸ್ಯ ಹಾಗೂ ಸಮಾಜ ಸೇವಕ ಸಂಗಮೇಶ ಬಬಲೇಶ್ವರ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ತಮ್ಮ ಹಿಂಬಾಲಕರ ಮೂಲಕ ಎಂ. ಬಿ. ಪಾಟೀಲ ಅವರು ಲಿಂಗಾಯತ ನಾಯಕರಲ್ಲ.  ಸರಕಾರದ ಜಾತಿ ಪಟ್ಟಿಯಲ್ಲಿ ಅವರ ಸಮುದಾಯದ ಹೆಸರಿಲ್ಲ ಎಂದು ಬಾಲಿಶಃ ಹೇಳಿಕೆ ಕೊಡಿಸಿದ್ದಾರೆ.  ಈ ಮೂಲಕ ಸಚಿವ ಗೋವಿಂದ ಕಾರಜೋಳ ಅವರು ಕರ್ನಾಟಕದಲ್ಲಿ ಲಿಂಗಾಯತರ ಅಸ್ಮಿತೆಯನ್ನು ಒಗ್ಗೂಡಿಸಿದ ಮತ್ತು ಹಾನಗಲ್ ಕುಮಾರಸ್ವಾಮಿ, ಅರಟಾಳ ರುದ್ರಗೌಡ ಅವರೊಂದಿಗೆ ಅಖಿಲ ಭಾರತ ವೀರಶೈವ ಮಹಾಸಭೆ ಕಟ್ಟಲು ಕಾರಣರಾದ ಮಹಾದಾನಿ ಸಿರಸಂಗಿ ಲಿಂಗರಾಜರ ವಂಶಸ್ಥರನ್ನು ಅವಮಾನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಲಿಂಗಾಯತರನ್ನು ಒಗ್ಗೂಡಿಸಿ, ತಮ್ಮ ಸಮಸ್ತ ಆಸ್ತಿಯನ್ನು ಲಿಂಗಾಯಿತ ಉಪಪಂಗಡಗಳ ಅಭಿವೃದ್ಧಿಗೆ ವಿಲ್ ಮೂಲಕ ದತ್ತಿಯನ್ನು ನೀಡಿ ಸಿರಸಂಗಿ ಟ್ರಸ್ಟ್ ಮೂಲಕ ನಮ್ಮ ನಾಡಿನ ಸಾವಿರಾರು ಲಿಂಗಾಯತ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.  ಎಸ್. ಆರ್. ಬೊಮ್ಮಾಯಿ, ವಿ. ಎಸ್. ಮಳಿಮಠ, ಬಿ. ಡಿ. ಜತ್ತಿ ಸೇರಿದಂತೆ ಹಲವು ಮುತ್ಸದ್ದಿಗಳು ಈ ಟ್ರಸ್ಟ್‍ನ ಸ್ಕಾಲರಶಿಫ್‍ನಿಂದ ತಮ್ಮ ಶಿಕ್ಷಣ ಪೂರ್ಣಗೊಳಿಸಿದ್ದಾರೆ.  ಎಂ. ಬಿ. ಪಾಟೀಲ ಅವರ ಪೂರ್ವಜರಾದ ಸಿರಸಂಗಿ ಲಿಂಗರಾಜರು ಕೆ ಎಲ್ ಇ ಸಂಸ್ಥೆ ಸೇರಿದಂತೆ ನಾಡಿನ ತುಂಬ ಹಲವು ಲಿಂಗಾಯತ ಸಂಸ್ಥೆಗಳ ಸ್ಥಾಪನೆಗೆ ಕಾರಣರಾಗಿದ್ದಾರೆ ಎಂದು ಹೇಳಿದರು.

ಜಾತಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆ ತಿಳಿದುಕೊಳ್ಳಲಿ

ಗೋವಿಂದ ಕಾರಜೋಳ ಬಾಲಿಶ ಹೇಳಿಕೆ ಕೊಡಿಸುವ ಮೂಲಕ ಸಮಸ್ತ ನಾಡಿನ ಲಿಂಗಾಯಿತ ಒಳಪಂಗಡಗಳ ಆಸ್ಮಿತೆಯನ್ನು ಕೆಣಕಿದ್ದೀರಿ.  ನಮ್ಮ ಆತ್ಮಗೌರವಕ್ಕೆ ಸವಾಲನ್ನು ಎಸೆದಿದ್ದೀರಿ.  ಸರಕಾರದ ನಾನಾ ಹುದ್ದೆಗಳನ್ನು ಅನುಭವಿಸಿರುವ ನೀವು ರಾಜ್ಯದ ಡಿಸಿಎಂ ಆಗಿ, ಹಾಲಿ ಜಲಸಂಪನ್ಮೂಲ ಸಚಿವರಾಗಿರುವ ನಿಮಗೆ ಸರಕಾರದ ಜಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಾದರೆ ಏನೆಲ್ಲ ಕಾರಣಗಳಿವೆ ಎಂಬುದರ ಪ್ರಾಥಮಿಕ ಜ್ಞಾನ ನಿಮಗೆ ಇರಬೇಕಿತ್ತು.  12ನೇ ಶತಮಾನದಲ್ಲಿ ಬಸವಾದಿ ಕೃಷಿ ಕಸುಬಿನ ಕುಡ ಒಕ್ಕಲಿಗರು, ಪಂಚಮಸಾಲಿಗಳು, ಬಣಜಿಗರು, ರೆಡ್ಡಿಗಳು, ಗಾಣಿಗರು ಸೇರಿದಂತೆ ಹಲವು ಜಾತಿಗಳು 12ನೇ ಶತಮಾನದಲ್ಲಿ ಬಸವಾದಿ ಶರಣರ ಆಶಯಕ್ಕೆ ಒಳಗಾಗಿ ಲಿಂಗಾಯತ ದೀಕ್ಷೆ ಪಡೆದು, ಗುರುಲಿಂಗಜಂಗಮರ ಪರಂಪರೆಯಲ್ಲಿ ಇಂದಿಗೂ ಬೆಳೆದು ಬಂದಿದ್ದಾರೆ.  ಸ್ವಾತಂತ್ರ್ಯ ನಂತರದಲ್ಲಿ ಮೀಸಲಾತಿಗಾಗಿ ಸರಕಾರಗಳು ಜಾತಿ ಪಟ್ಟಿಯನ್ನು ಮಾಡಿವೆ.  ಇದರಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಹಿಂದುಳಿದ ಜಾತಿಗಳಿಗೆ ಆದ್ಯತೆಯ ಮೇರೆಗೆ ಮೀಸಲಾತಿ ಸೌಲಭ್ಯ ಸಿಕ್ಕಿವೆ ಎಂಬುದು ಹಿರಿಯ ಸಚಿವರಾದ ತಮಗೆ ತಿಳಿಯಬೇಕಿತ್ತು.  ಇಂದು ತಾವು ಎಂ. ಬಿ. ಪಾಟೀಲರು ಲಿಂಗಾಯಿತರಲ್ಲ.  ಲಿಂಗಾಯಿತರ ಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂದು ಹೇಳಿಸುತ್ತಿದ್ದೀರಲ್ಲ.  ನಿಮಗೆ ಇದು ತಿಳಿದಿರಲಿ.  ರಾಜ್ಯದಲ್ಲಿ ಈವರೆಗೆ ಆಗಿಹೋದ ಮುಖ್ಯಮಂತ್ರಿಗಳು ಯಾವ ಸಮುದಾಯಕ್ಕೆ ಸೇರಿದವರು ಎಂಬುದು ನಿಮಗೆ ಗೊತ್ತಿದೆ ಎಂದು ಭಾವಿಸಿದ್ದೇನೆ.  ಲಿಂಗಾಯತ ಮುತ್ಸದ್ದಿ ನಾಯಕರಾದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಜೆ. ಎಚ್. ಪಟೇಲ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಜಾತಿಗಳು ಸರಕಾರದ ಜಾತಿ ಪಟ್ಟಿಯಲ್ಲಿ ಇರಲಿಲ್ಲ.  ಹಾಗಾದರೇ ಇವರಾರೂ ಲಿಂಗಾಯಿತರಲ್ಲವೇ? ಇಷ್ಟು ಪ್ರಾಥಮಿಕ ಜ್ಞಾನ ನಿಮಗೆ ಬೇಡವೆ.  ಸರಕಾರವನ್ನು ನಡೆಸುವ ಸರಕಾರದ ಭಾಗವಾಗಿರುವ ಬಹುಸಂಖ್ಯಾತ ಲಿಂಗಾಯಿತರ ಆಸ್ಮಿತೆಯನ್ನು ಕೆಣಕುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು.  ಈಗ ತಾವು ಸಚಿವರಾಗಿರುವ ಸರಕಾರದ ಮುಖ್ಯಮಂತ್ರಿ ಲಿಂಗಾಯತ ನಾಯಕರಾದ ಬಸವರಾಜ ಬೊಮ್ಮಾಯಿಯವರ ಸಾದರ ಉಪಜಾತಿ ಕೂಡ ಸರಕಾರದ ಜಾತಿ ಪಟ್ಟಿಯಲ್ಲಿ ಇಲ್ಲ.  ಹಾಗಿದ್ದರೆ ಅವರೂ ಲಿಂಗಾಯಿತರಲ್ಲವೇ? ನೀವು ಅವರ ಪಕ್ಕದಲ್ಲಿಯೇ ಕುಳಿತು ರಾಜಕಾರಣ ಮಾಡುವ ತಾವು ಈಗ ಬೊಮ್ಮಾಯಿ ಅವರನ್ನು ನೀವು ಲಿಂಗಾಯಿತರಲ್ಲವೇ ಎಂದು ಕೇಳಿ.  ಆಗ ನಿಮಗೆ ತಿಳಿಯುತ್ತದೇ ಎಂದು ಸಂಗಮೇಶ ಬಬಲೇಶ್ವರ ಹೇಳಿದರು.

ಲಿಂಗಾಯಿತರ ಆತ್ಮಗೌರವ ಕೆಣಕಬೇಡಿ

ಇಂಥ ಬಾಲೀಶ ಹೇಳಿಕೆಗಳನ್ನು ಕೋಡಿಸುವ ಬದಲು ತಾವು ಇದನ್ನು ಗಮಿನಿಸಿ.  2009ರ ಮುಂಚೆ ಲಿಂಗಾಯತ ಪಂಚಮಸಾಲಿ ಸಮುದಾಯ ಸಹ ಸರಕಾರದ ಜಾತಿ ಪಟ್ಟಿಯಲ್ಲಿ ಇರಲಿಲ್ಲ.  ಹಾಗಾದರೆ ಈ ಜಾತಿಯಲ್ಲಿ ಹುಟ್ಟಿ ಇಂದು ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಸಿ. ಸಿ. ಪಾಟೀಲ, ಮುರುಗೇಶ ನಿರಾಣ, ಬಿಜೆಪಿ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ ಲಿಂಗಾಯಿತರಲ್ಲವೇ? ಶಿವಾನಂದ ಪಾಟೀಲ, ದಿಂ. ಎಂ. ಸಿ. ಮನಗೂಳಿ 2009ಕ್ಕಿಂತ ಮುಂಚೆ ಲಿಂಗಾಯತರಾಗಿರಲಿಲ್ಲವೇ? ಇಂಥ ಬಾಲಿಶ ಹೇಳಿಕೆಗಳ ಮೂಲಕ ಇಡೀ ಲಿಂಗಾಯಿತ ಸಮುದಾಯದ ಆತ್ಮಗೌರವನ್ನು ಕೆಣಕುವ ಮೂಲಕ ಅಹಿತಕರ ವಾತಾವರಣ ಸೃಷ್ಠಿಯಾದರೆ ಅದಕ್ಕೆ ಗೋವಿಂದ ಕಾರಜೋಳ ಅವರೇ ಕಾರಣರಾಗುತ್ತಾರೆ.

ಸಿಎಂ ಕೂಡ ಈ ಸೂಕ್ಷ್ಮ ವಿಚಾರವನ್ನು ಗಮನಿಸಬೇಕು.  ಇಂದಿಗೂ ಸಹ ಕುಡಒಕ್ಕಲಿಗ, ಆದಿ ಬಣಜಿಗ ಸೇರಿದಂತೆ ಹಲವು ಜಾತಿಗಳು ಸರಕಾರದ ಜಾತಿ ಪಟ್ಟಿಯಲ್ಲಿ ಸೇರಿಲ್ಲ.  ಹಾಗಿದ್ದರೆ ಇದೇ ಇದೇ ಸಮುದಾಯಕ್ಕೆ ಸೇರಿರುವ ಸಚಿವೆ ಶಶಿಕಲಾ ಜೊಲ್ಲೆ ಲಿಂಗಾಯಿತರಲ್ಲವೇ? ಶಾಸಕರಾದ ಎಂ. ಬಿ. ಪಾಟೀಲ, ಯಶವಂತರಾಯಗೌಡ ಪಾಟೀಲ ಇಂದಿಗೂ ಲಿಂಗಾಯತರಲ್ಲವೇ? ಎಂದು ಅವರು ಪ್ರಶ್ನಿಸಿದರು.

ಹಾಸ್ಯಾಸ್ಪದ ಹೇಳಿಕೆಗಳನ್ನು ಕೊಡಿಸುವ ಮೂಲಕ ನಮ್ಮೆಲ್ಲರ ಆತ್ಮಗೌರವವನ್ನು ಕೆಣಕಿದ್ದೀರಿ.  ಯಾವ ಕಾರಣಕ್ಕೆ ಜಾತಿ ಪಟ್ಟಿಯಲ್ಲಿ ಲಿಂಗಾಯಿತ ಉಪಪಂಗಡಗಳನ್ನು  ಸೇರಿಸಿಲ್ಲ ಎಂಬುದರ ಪ್ರಾಥಮಿಕ ಜ್ಞಾನ ಸಾರ್ವಜನಿಕ ಜೀವನದಲ್ಲಿ ತಮಗೆ ಇದ್ದಿದ್ದರೆ ಇಂಥ ಬಾಲಿಶ ಹೇಳಿಕೆಗಳನ್ನು ಕೊಡಿಸುವ ಮೂಲಕ ಲಿಂಗಾಯಿತರ ಆಸ್ಮಿತೆಯನ್ನು ಕೆಣಕುವ ಕೆಲಸವನ್ನು ಮಾಡುತ್ತಿರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯಿತ ಎಂದು ಹೇಳಿಸಿಕೊಂಡಿರುವ ತಾವು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ತೋರಿಸಿ

ತಾವು ಲಿಂಗಾಯಿತರು ಎಂದು ಹೇಳಿಸಿಕೊಂಡಿದ್ದೀರಿ.  ಇದನ್ನು ಹೃದಯಪೂರ್ವಕವಾಗಿ ನಾನು ಸ್ವಾಗತಿಸುತ್ತೇನೆ.  ಈಗಾಗಲೇ ಮೀಸಲು ಕ್ಷೇತ್ರದಿಂದ ಉನ್ನತ ಅಧಿಕಾರ ಅನುಭವಿಸಿರುವ ತಮಗೆ ನಾನು ಸವಾಲು ಹಾಕುತ್ತೇನೆ.  ನೀವು ಹಾಗೂ ನಿಮ್ಮ ವಂಶಸ್ಥರಿಗೆ ಸವಾಲು ಹೂಕಾತ್ತೇನೆ.  ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಮೀಸಲು ಕ್ಷೇತ್ರಗಳನ್ನು ಬಿಟ್ಟು ಯಾವುದಾದರೂ ಸಾಮಾನ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಥಿಸಿ ತೋರಿಸಿ ಎಂದು ಸಂಗಮೇಶ ಬಬಲೇಶ್ವರ ಸವಾಲು ಹಾಕಿದರು.

ನೀರಾವರಿಗೆ ಸಂಬಂಧಿಸಿದಂತೆ ಸಚಿವ ಗೋವಿಂದ ಕಾರಜೋಳ ಅವರು ಬಾಂಬ್ ಸಿಡಿಸಲಿದ್ದಾರೆ ಎಂದು ಹೇಳಿದ್ದಾರೆ.  2018ರಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಈಗಿನ ಗೃಹ ಸಚಿವ ಅಮಿತ ಶಾ, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಈಗಾಗಲೇ ಹಲವು ಬಾಂಬ್‍ಗಳನ್ನು ಸಿಡಿಸಿದ್ದು, ಅವು ಎಲ್ಲಿ ಸ್ಪೋಟವಾಗಿವೆ ಎಂಬುದು ನಮಗಂತೂ ಗೊತ್ತಿಲ್ಲ.  ನೀವೂ ಕೂಡ ಈಗ ಬಾಂಬ್ ಸಿಡಿಸುತ್ತೇನೆ ಎಂದು ಹೇಳುತ್ತಿರಲ್ಲ , ನೀವೇನು ಬ್ಲ್ಯಾಕ್ ಮೇಲ್ ಮಾಡುತ್ತೀದ್ದೀರಾ? ನಿಮಗೆ ನೈತಿಕತೆ ಇದ್ದರೆ ಅದು ಯಾವ ಬಾಂಬ್ ಸಿಡಿಸುತ್ತೀರೋ ಸಿಡಿಸಿ.  ಅದನ್ನು ನಾವೂ ನೋಡಲು ಸಜ್ಜಾಗಿದ್ದೇವೆ.  ಆ ಬಾಂಬ್ ಎದುರಿಸಲು ನಾವೂ ಸನ್ನದ್ಧರಾಗಿದ್ದೇವೆ.  ಜನಕಂಜಿ ನಡೆದರೇನುಂಟು ಲೋಕದಲ್ಲಿ ಮನಕಂಜಿ ನಡೆಕೊಂಬುದೆ ಚೆನ್ನ ಎಂದು ನಿಜಗುಣಿ ಶಿವಯೋಗಿಗಳ ಹೇಳಿದ್ದಾರೆ.  ಇವತ್ತು ನೀವು ಬುದ್ಧ, ಬಸವ, ಅಂಬೇಡ್ಕರ ಅವರ ಹೆಸರು ಹೇಳುತ್ತಿದ್ದೀರಿ.  ಆದರೆ, ಅವರ ಜೀವನಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಇಡೀ ಸಮಸ್ತ ಲಿಂಗಾಯತ ಸಮುದಾಯದ ಆತ್ಮಗೌರವ ಕೆಣಕುವಂಥ ಕೀಳುಮಟ್ಟದ ರಾಜಕಾರಣ ಮಾಡುತ್ತಿರುವುದು ಖೇದಕರ.  ಇವತ್ತು ನಿಮ್ಮ ಮಾನಸಿಕ ದಾರಿದ್ರ್ಯ, ರಾಜಕೀಯ ವೈಯಕ್ತಿಕ ಹಿತಾಸಕ್ತಿಗಾಗಿ ಬ್ಲ್ಯಾಕ್ ಮೇಲ್ ಮಾಡಿಸುವ, ಲಿಂಗಾಯಿತರ ಆಸ್ಮಿತೆ ಕೆಣಕುವ ರಾಜಕಾರಣ ದಯವಿಟ್ಟು ಬಿಡಿ.  ನೀವು ಮಾಡುತ್ತಿರುವ ಕ್ಷುಲ್ಲಕ ರಾಜಕಾರಣದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಸಚಿವ ಕಾರಜೋಳ ಅವರ ಹಿತೈಷಿಗಳಾಗಿದ್ದ ಕೇಂದ್ರದ ಮಾಜಿ ಸಚಿವರೊಬ್ಬರ ವಿನಂತಿಯ ಮೇರೆಗೆ ನಾವೇಲ್ಲ ಪರಸ್ಪರ ಕಿತ್ತಾಟ ಒಳ್ಳೆಯದಲ್ಲ.  ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಹೇಳಿದ್ದರು.  ಅವರ ಮಾತಿಗೆ ಬೆಲೆ ನೀಡಿ ಬುಧವಾರ ನಡೆದ ಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಂಡು ನಿರ್ಧರಿಸಿದ್ದೇವು.  ಕ್ಷುಲ್ಲಕ ಬದಲು ಸಾತ್ವಿಕ ರಾಜಕಾರಣ ಇರಲಿ ಎಂದು ಸದಾಶಯದಿಂದ ಎಲ್ಲ ಸಮುದಾಯದ ಮುಖಂಡರು ನಿರ್ಧರಿಸಿದ್ದೇವು.  ಆದರೆ, ನೀವು ನಿಮ್ಮ ಹಿಂಬಾಲಕರ ಮೂಲಕ ಸಭೆಯ ನಂತರವೂ ನಿಮ್ಮದೇ ಭಾವನೆಗಳನ್ನು ನೇರವಾಗಿ ನಮ್ಮ ಲಿಂಗಾಯಿತರ ಆಸ್ಮಿತೆಯನ್ನು ಪ್ರಶ್ನಿಸುವ ಮೂಲಕ ಇಂಥ ಘಟನೆಗಳಿಗೆ ಕಾರಣರಾಗುತ್ತಿದ್ದೀರಿ.  ನಾವು ಬುಧವಾರ ಯಾವುದನ್ನು ಅಂತ್ಯಗೊಳಿಸಿದ್ದೇವೋ ಅದನ್ನು ನೀವು ಕೆಣಕಿದ್ದೀರಿ.  ನೀವೇ ಹೇಳಿಸಿಕೊಂಡಿರುವಂತೆ ನೀವು ಲಿಂಗಾಯಿತರು.  ಈಗ ಮೀಸಲು ಕ್ಷೇತ್ರದಿಂದ ಹೊರಗೆ ಬಂದು ಅಖಂಡ ವಿಜಯಪುರ ಜಿಲ್ಲೆಯ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿ.  ಇಂಥ ಅಹಿತಕರ ವಾತಾವರಣ ತಿಳಿಗೊಳಿಸಿ.  ನಮ್ಮ ಆತ್ಮಗೌರವ ಕೆಣಕುವ ರಾಜಕಾರಣಕ್ಕೆ ತಿಲಾಂಜಲಿ ನೀಡಿ.  ಇದು ಆಂತ್ಯವಲ್ಲ.  ಆರಂಭ ಎಂದು ಸಂಗಮೇಶ ಬಬಲೇಶ್ವರ ಸವಾಲು ಹಾಕಿದರು.

ಬಾಲಿಶ ಹೇಳಿಕೆಗಳನ್ನು ಹೇಳಿವುದಕ್ಕಿಂತ ಹೇಳಿಸುವುದು.  ಅಪರಾಧ ಮಾಡುವುದಕ್ಕಿಂತ ಪ್ರೇರಣೆ ಕೊಡುವವರೇ ಅಪರಾಧಕ್ಕೆ ಕಾರಣರಾಗುತ್ತಾರೆ.  ಒಬ್ಬ ಹಿಂಬಾಲಕರ ಮೂಲಕ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವುದಿದ್ದು, ಲಿಂಗಾಯಿತರ ಆತ್ಮಗೌರವವನ್ನು ಕೆಣಕಲಾಗಿದೆ ಎಂದು ಸಂಗಮೇಶ ಬಬಲೇಶ್ವರ ಹೇಳಿದರು.

ಈ ಸಂದರ್ಭದಲ್ಲಿ ಡಾ. ಗಂಗಾಧರ ಸಂಬಣ್ಣಿ, ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಎನ್. ಎಸ್. ಅಳ್ಳೊಳ್ಳಿ, ವಾರದ, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ, ಅಖಿಲ ಭಾರತ ಲಿಂಗಾಯಿತ ಕುಡುಒಕ್ಕಲಿಗ ಮಹಾಸಭಾ ಅಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಶಿ, ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ, ರೈತ ಮುಖಂಡರಾದ ಚೆನ್ನಪ್ಪ ಕೊಪ್ಪದ, ಸೋಮನಿಂಗ ಕಟಾವಿ, ರಾಜು ಜೋರಾಪುರ, ಚೆನ್ನು ವಾರದ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌