ಅಂತಾರಾಜ್ಯ ಜಲವಿವಾದಗಳ ಬಗ್ಗೆ ಚರ್ಚಿಸಲು ಫೆಬ್ರುವರಿಯಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗುವುದು- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಅಂತಾರಾಜ್ಯ ಜಲವಿವಾದಗಳ ಬಗ್ಗೆ ಚರ್ಚಿಸಲು ಫೆಬ್ರವರಿಯಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಾರಾಜ್ಯ ಜಲ ವಿವಾದಗಳ ಕುರಿತಂತೆ ಸಚಿವರು, ಕಾನೂನು ತಜ್ಞರು, ನೀರಾವರಿ ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.  ಈ ಸಭೆಯ ಬಳಿಕ ಮಾತನಾಡಿದ ಅವರು, ಅಂತಾರಾಜ್ಯ ಜಲವಿವಾದಗಳ ಬಗ್ಗೆ ಕಾನೂನು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಹಾಗೂ ಸಜಿವ ಗೋವಿಂದ ಕಾರಜೋಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ನ್ಯಾಯಾಲಯಗಳಲ್ಲಿ ವಿಚಾರಣೆಯ ಬೇರೆ ಬೇರೆ ಹಂತಗಳಲ್ಲಿರುವ ಪ್ರಕರಣಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.  ಎಲ್ಲ ಜಲವಿವಾದಗಳ ಬಗ್ಗೆ ಚರ್ಚಿಸಲು ಜನೇವರಿ ಅಂತ್ಯದೊಳಗೆ ಇನ್ನೋಂದು ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದೇನೆ.  ಅದಾದ ಬಳಿಕ, ಫೆಬ್ರುವರಿ ಮೊದಲ ವಾರ ಸರ್ವ ಪಕ್ಷಗಳ ಸಭೆ ಕರೆಯುತ್ತೇನೆ.  ಈ ಸಭೆಯಲ್ಲಿ ನ್ಯಾಯವಾದಿಗಳು, ನೀರಾವರಿ ಮತ್ತು ಕಾನೂನು ಸಚಿವರು, ಉಭಯ ಸದನಗಳ ನಾಯಕರಿಗೆ ಆಹ್ವಾನ ನೀಡಲಾಗುವುದು ಎಂದು ಸಿಎಂ ತಿಳಿಸಿದರು.

ಕಾನೂನು ಹೋರಾಟ, ಪ್ರಕರಣಗಳು ಯಾವ ಹಂತದಲ್ಲಿವೆ? ಇವುಗಳನ್ನು ಸಾಕಾರಗೊಳಿಸಲು ಹೇಗೆ ಮುಂದುವರೆಯಬೇಕು? ಈ ಆಡಳಿತ ಮತ್ತು ಪ್ರತಿಪಕ್ಷಗಳು ನಾಡಿನ ಜಲ ಮತ್ತು ನೆಲದ ವಿಷಯ ಬಂದಾಗ ಪರಸ್ಪರ ಸಮಾಲೋಚನೆ ಮೂಲಕ ಕೈಗೊಂಡ ನಿರ್ಣಯಗಳಂತೆ ಈಬಾರಿಯೂ ಚರ್ಚಿಸಲಾಗುವುದು.  ಪ್ರತಿಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.  .

ಹೊಗೆನಕಲ್ ಯೋಜನೆ

ಸರಕಾರ ಹೊಗೆನಕಲ್ ಸೇರಿದಂತೆ ಇಂಥ ಹಲವಾರು ಸವಾಲುಗಳನ್ನು ಈ ಹಿಂದೆಯೂ ಎದುರಿಸಿದೆ.  ಈಗ ಹೊಗೆನಕಲ್ ಯೋಜನೆ ಎರಡನೇ ಹಂತವಿರಲಿ ಅಥವಾ ನದಿ ಜೋಡಣೆ ಯೋಜನೆಗಳ ಬಗ್ಗೆ ಸುಪ್ರಿಂ ಕೋರ್ಟಿನಲ್ಲಿ ವಿರೋಧ ವ್ಯಕ್ತಪಡಿಸಿದ್ದೇವೆ.  ಹೊಗೆನಕಲ್ ಎರಡನೇ ಹಂತದ ಯೋಜನೆ ಬಗ್ಗೆಯೂ ಕೇಂದ್ರ ಮತ್ತು ಸಿಡಬ್ಲ್ಯೂಸಿ ಒಪ್ಪಿಗೆ ನೀಡಬಾರದು ಎಂದು ಒತ್ತಡ ತರುತ್ತೇವೆ.  ಕಾನೂನಾತ್ಮಕ ಮತ್ತು ರಾಜಕೀಯ ಹೋರಾಟಗಳನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹಿರಿಯ ವಕೀಲರಾದ ಶ್ಯಾಮ ದಿವಾನ, ಮೋಹನ್ ಕಾತರಕಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌