ಜಲವಿವಾದಗಳ ತ್ವರಿತ ವಿಚಾರಣೆಗೆ ಎಲ್ಲ ಪ್ರಯತ್ನ ಮಾಡಲು ಸಿಎಂ ಸೂಚನೆ ನೀಡಿದ್ದಾರೆ- ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ಅಂತಾರಾಜ್ಯ ಜಲವಿವಾದಗಳ ತ್ವರಿತ ವಿಚಾರಣೆಗೆ ಅಗತ್ಯವಾಗಿರುವ ಎಲ್ಲ ಪ್ರಯತ್ನ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಾರಾಜ್ಯ ಜಲ ವಿವಾದಗಳ ಕುರಿತಂತೆ ಸಚಿವರು, ಕಾನೂನು ತಜ್ಞರು, ನೀರಾವರಿ ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಸಭೆಯ ಬಳಿಕ ಸಚಿವ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೃಷ್ಣಾ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.  ಈ ಹಿನ್ನೆಲೆಯಲ್ಲಿ ಕೂಡಲೇ ಪೀಠವನ್ನು ರಚಿಸುವಂತೆ ಸುಪ್ರೀಂ ಕೋರ್ಟಿನ ರಜಿಸ್ಟ್ರಾರ ಅವರಿಗೆ ಸೋಮವಾರ ಆಡಳಿತಾತ್ಮಕವಾಗಿ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಫೆ. 16ರಂದು ಸುಪ್ರಿಂ ಕೋರ್ಟಿನಲ್ಲಿ ಈ ಪ್ರಕರಣ ವಿಚಾರಣೆಗೆ ಬರಲಿದೆ. ಇದಕ್ಕೂ ಮುನ್ನ ಮತ್ತೋಂದು ಸಭೆಯನ್ನು ಜನೇವರಿ ಅಂತ್ಯದೊಳಗೆ ಆಯೋಜಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.

ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ಪ್ರಕರಣ ಸುಪ್ರಿಂ ಕೋರ್ಟಿನಲ್ಲಿ ಅಂತಿಮ ಹಂತದ ವಿಚಾರಣೆಯಲ್ಲಿರಿವುದರಿಂದ ಅಂತಿಮ ವಾದ ಮಂಡನೆಗೆ ಅವಕಾಶ ಕೋರಲು ಮತ್ತು ತ್ವರಿತವಾಗಿ ವಿಚಾರಣೆಗೆ ಸುಪ್ರಿಂ ಕೋರ್ಟಿನಲ್ಲಿ ಉಲ್ಲೇಖಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.  ರಾಜ್ಯಕ್ಕೆ ಸಂಬಂಧಿಸಿದ ಮತ್ತು ಸುಪ್ರಿಂ ಕೋರ್ಟಿನಲ್ಲಿ ಬಾಕಿ ಇರುವ ಜಲ ವಿವಾದಗಳನ್ನು ತ್ವರಿತವಾಗಿ ಮುಗಿಸಲು ಎಲ್ಲ ಪ್ರಯತ್ನಗಳನ್ನು ಮುಂದುವರೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ ನೀಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

Leave a Reply

ಹೊಸ ಪೋಸ್ಟ್‌