ವಿಜಯಪುರ: ಪಂಚಮಸಾಲಿ ಮೂರನೇ ಪೀಠ ಸ್ಥಾಪನೆಯಲ್ಲಿ ಸಚಿವ ಮುರುಗೇಶ ನಿರಾಣಿ ಕುಮ್ಮಕ್ಕಿಲ್ಲ. ಯಾರೂ ಅವರ ಹೆಸರು ಹೇಳುವ ಮೂಲಕ ಸಚಿವರ ಮನಸ್ಸನ್ನು ನೋಯಿಸಬಾರದು ಎಂದು ವಿಜಯಪುರ ಜಿಲ್ಲೆಯ ಮನಗೂಳಿ ಹಿರೇಮಠದ ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೂರನೇ ಪೀಠದ ಸ್ವಾಮೀಜಿಗಳ ಪೀಠಾರೋಣ ಕಾರ್ಯಕರ್ಮ ಫೆ. 14 ರಂದು ಬ್ರಾಹ್ಮಿ ಮುಹೂರ್ತದಲ್ಲಿ ನಡೆಯಲಿದೆ ಹರಿಹರ ಪೀಠ, ಕನಕ ಪೀಠ, ವಾಲ್ಮಿಕಿ, ಮಾದಾರ ಚನ್ನಯ್ಯ ಪೀಠ, ಭೋವಿ ಪೀಠ, ರೆಡ್ಡಿ ಪೀಠದ ಪೂಜ್ಯರು ಬರಲು ಒಪ್ಪಿದ್ದಾರೆ. ಯಶಸ್ವಿ ಕಾರ್ಯಕ್ರಮ ಅದಾಗಲಿದೆ ಎಂದು ಹೇಳಿದರು.
ಈ ಪೀಠದ ಬಗ್ಗೆ ಕೂಡಲ ಸಂಗಮ ಸ್ವಾಮೀಜಿಗಳು ಅಕ್ಷೇಪಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೂಡಲ ಸಂಗಮ ಸ್ವಾಮೀಜಿವರೂ ಕೂಡ ನಮ್ಮವರೇ. ಸಚಿವ ಮುರುಗೇಶ ನಿರಾಣಿ ಮುಖ್ಯಮಂತ್ರಿಯಾಗಲು ಮೂರನೇ ಪೀಠ ಸ್ಥಾಪಿಸುತ್ತಿಲ್ಲ. ಅವರ ಮತಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯ ಮಾತ್ರ ಸೀಮಿತವಾಗಿಲ್ಲ. ಓರ್ವ ರಾಜಕೀಯ ವ್ಯಕ್ತಿ ಶಾಸಕ, ಸಚಿವನಾಗಬೇಕಾದರೆ ಒಂದೇ ಸಮಾಜದವರು ಮತ ಚಲಾಯಿಸಿದರೆ ಎಂದೂ ಆರಿಸಿ ಬರುವುದಿಲ್ಲ. ನಾನು ಮುಖ್ಯಮಂತ್ರಿಯಾಗಬೇಕು. ನನ್ನ ಸಮಾಜ ಬೆಳೆಸಬೇಕು ಎನ್ನು ವ್ಯಕ್ತಿ ನಿರಾಣಿ ಅಲ್ಲ. ಎಲ್ಲ ಸಮಾಜವನ್ನು ಪ್ರೀತಿಯಿಂದ ಅಪ್ಪಿಕೊಂಡು ಎಲ್ಲರೂ ನನ್ನವರು ಎನ್ನುವ ರೀತಿಯಲ್ಲಿ ಈ ರಾಜ್ಯದಲ್ಲಿ ಬೆಳೆಯುತ್ತಿರುವ ವ್ಯಕ್ತಿ ಮುರುಗೇಶ ನಿರಾಣಿ ಎಂದು ಹೇಳಿದರು.
ಒಂದೊಂದು ಸಮಾಜದಲ್ಲಿ ಸಾಕಷ್ಟು ರಾಜಕೀಯ ವ್ಯಕ್ತಿಗಳಿರುತ್ತಾರೆ. ನಿರಾಣಿ ಅವರ ಮನೆಗೆ ಕೇವಲ ಪಂಚಮಸಾಲಿ ಪೀಠದ ಸ್ವಾಮೀಜಿಗಳು ಮಾತ್ರ ಹೋಗುತ್ತಿಲ್ಲ. ಬಹಳಷ್ಟು ಸಮಾಜದ ಸ್ವಾಮೀಜಿಗಳು ಬರುತ್ತಿರುತ್ತಾರೆ. ಹರಿಹರ ಮತ್ತು ಕೂಡಲ ಸಂಗಮ ಪೀಠಗಳನ್ನು ಒಂದುಗೂಡಿಸಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅವರಷ್ಟು ಪ್ರಯತ್ನವನ್ನು ಯಾವ ರಾಜಕೀಯ ವ್ಯಕ್ತಿಗಳೂ ಮಾಡಿಲ್ಲ. ಬಬಲೇಶ್ವರದಲ್ಲಿ ದೊಡ್ಡ ಸಮಾವೇಶ ಮಾಡಿ ಪೀಠಗಳನ್ನು ಒಂದಾಗಿಸಲು ಪ್ರಯತ್ನ ಮಾಡಿದರು. ಹುಬ್ಬಳ್ಳಿ ಬೆಂಗಳೂರಿನಲ್ಲಿ ನಿರಾಣಿ ಅವರು ಸಭೆಗಳನ್ನು ನಡೆಸಿದರು. ಆಗ ಜವಾಬ್ದಾರಿ ತೆಗೆದುಕೊಂಡವರು ನಿರಾಣಿ ಮಾತ್ರ. ಅವರು ಒಂದುಗೂಡಿಸಲು ಪ್ರಯತ್ನ ಮಾಡಿದರು. ಆದರೆ, ಪೀಠವನ್ನು ಒಡೆಯುವ ಕೆಲಸವನ್ನು ಎಂದೂ ಮಾಡಿಲ್ಲ. ರಾಜಕೀಯ ವ್ಯಕ್ತಿಗಳಾಗಿರಲಿ, ಜನರಾಗಲಿ ಇದನ್ನು ಅರ್ಥಮಾಡಿಕೊಳ್ಳಬೇಕು. ಮೂರನೇ ಪೀಠ ಸಮಾಜವನ್ನು ಒಡೆಯುವ ಕೆಲಸ ಮಾಡುವುದಿಲ್ಲ. 2ಎ ಮೀಸಲಾತಿ ಸಿಗುತ್ತದೆಂದರೆ ನಮಗೆಲ್ಲ ಅಭಿಮಾನವಿದೆ, ಹೆಮ್ಮೆಯಿದೆ. ಸಮುದಾಯ ಬಹಳ ದೊಡ್ಡದಿದೆ. ತಮ್ಮ ಮನೆಯ ಕಾರ್ಯಕ್ರಮಗಳಿಗೆ ನಮ್ಮ ಸ್ವಾಮೀಜಿಗಳನ್ನು ಕರೆಯಿಸಬೇಕು ಎಂದು ಜನ ಬಯಸುತ್ತಾರೆ. ಅವರ ಒಪ್ಪಿಗೆ ಮೇರೆಗೆ ಮೂರನೇ ಪೀಠ ರಚನೆಯಾಗುತ್ತಿದೆ. ನಿರಾಣಿ ನಮ್ಮ ಜೊತೆ ಈವರೆಗೂ ಸಂಪರ್ಕವಿಲ್ಲ. ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ನಾನು ಸ್ವಾಮೀಜಿಗಳ ಸೇವಕ. ಯಾರು ನನ್ನ ಮನೆಗೆ ಬರುತ್ತಾರೆ. ನನ್ನ ಕೈಲಾದಷ್ಟು ಕಾಣಿಕೆ ಕೊಡುವುದು ನಮ್ಮ ಮನೆಯ ಪರಂಪರೆಯಾಗಿದೆ ಎಂದು ನಿರಾಣಿ ತಿಳಿಸಿದ್ದಾರೆ. ಇದರಲ್ಲಿ ನಿರಾಣಿಯವರ ಕುಮ್ಮಕ್ಕಿಲ್ಲ. ನಿರಾಣಿ ಅವರ ಹೆಸರ ಮೇಲೆ ಯಾರೂ ಅವರ ಮನಸ್ಸನ್ನು ನೋಯಿಸಬಾರದು ಎಂದು ಮನಗೂಳಿ ಸ್ವಾಮೀಜಿ ಹೇಳಿದರು.
ಹರಿಹರ ಪೀಠದ ಸ್ವಾಮೀಜಿ ನಮ್ವವರೇ. ಬೇರೆ ಪೀಠಕ ಸ್ವಾಮೀಜಿಗಳನ್ನು ಆಹ್ವಾನಿಸುವಂತೆ ಅವರನ್ನೂ ಆಹ್ವಾನ ನೀಡುತ್ತೇವೆ. ಪಂಚಮಸಾಲಿ ಮಠಾಧೀಶ ಒಕ್ಕೂಟವನ್ನು ರಚಿಸಲು ಸುಮಾರು ವರ್ಷಗಳಿಂದ ವಿಚಾರ ಇತ್ತು. ಸುಮಾರು ಒಂಬತ್ತು ತಿಂಗಳ ಹಿಂದೆ ಎಲ್ಲ ಪೂಜ್ಯರು ಕೂಡಿಕೊಂಡು ಒಕ್ಕೂಟ ರಚಿಸಿದ್ದೇವೆ. ಹರಿಹರ ಪೀಠದ ಪ್ರಥಮ ಜಗದ್ಗುರು ಡಾ. ಮಹಾಂತ ಶಿವಾಚರ್ಯರು ಒಂದಲ್ಲ, ಎರಡಲ್ಲ, ಐದು ಪೀಠಗಳಾದರೂ ತಪ್ಪಿಲ್ಲ ಎನ್ನುವ ಮಾತನ್ನು ಅವರದೇ ಆದ ಲೇಖನಗಳ ಮೂಲಕ ಭಕ್ತರಿಗೆ ಸಂದೇಶ ನೀಡಿದ್ದರು. 2009ರಲ್ಲಿ ಬಿಡುಗಡೆಯಾದ ಪಂಚಮಸಾಲಿ ಎಂಬ ಪುಸ್ತಕದಲ್ಲಿ ರಾಜ್ಯ ಸಮಿತಿಯಲ್ಲಿರುವ ಶರಣಬಸಪ್ಪ ಹತ್ತಿ ಅವರು ಒಂದು ಲೇಖನ ಬರೆದಿದ್ದಾರೆ. ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟದಲ್ಲಿ ಯಾವುದೇ ಇರಲಿ, ನಾಲ್ಕು ವಿಭಾಗೀಯ ಪೀಠಗಳು, ಜಿಲ್ಲೆಗೊಂದು ಮತ್ತು ತಾಲೂಕಿಗೊಂದು ಮಠ ಬೆಳೆಸಬೇಕು ಎಂದು ಹೇಳಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಪಂಚಮಸಾಲಿ ಸಮಾಜದ ಜನ ಒಪ್ಪಿಕೊಂಡರೇ ಮೂರನೇ ಪೀಠ ಆಗಬಹುದು ಎಂದು ಅಂದು ಹೇಳಿದ್ದೆ. ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ. ಜಮಖಂಡಿ ತಾಲೂಕಿನ ನಾನಾ ಗ್ರಾಮಗಳ ಜನ ಮೂರನೇ ಪೀಠ ಸ್ಥಾಪನೆಯಾಗುತ್ತಿರುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಒಕ್ಕೂಟದಲ್ಲಿ ಹಿರಿಯರಾದ ನಾಲ್ಕೈದು ಬಾಷೆ ಮಾತನಾಡುವ ಪೂಜ್ಯರು, ಕಾಶಿ ಪಂಡಿತರಾದ ಡಾ. ಮಹಾದೇವ ಶಿವಾಚಾರ್ಯರನ್ನು ಈ ಪೀಠಾಧೀಶರನ್ನಾಗಿ ಆಯ್ಕೆ ಮಾಡಲಾಗಿದೆ. ಜನರ ಒಪ್ಪಿಗೆ ಮೇರೆಗೆ ಮತ್ತು ಎಲ್ಲ ಪೂಜ್ಯರ ಸಹಮತದ ಮೇರೆಗೆ ಮೂರನೇ ಪೀಠ ಸ್ಥಾಪನೆಯಾಗುತ್ತಿದೆ. ಪಂಚಮಸಾಲಿ ಮಠಾಧೀಶ ಒಕ್ಕೂಟದ ಎಲ್ಲ ಪೂಜ್ಯರು ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಹಳ್ಳಿಹಳ್ಳಿಗಳಿಗೆ, ತಾಲೂಕುಗಳಿಗೆ ಭೇಟಿ ನೀಡಿ ಒಂದು ಲಕ್ಷ ಭಕ್ತರನ್ನು ಕೂಡಿಸಿ ಆ ಕಾರ್ಯಕ್ರಮ ಮಾಡುತ್ತೇವೆ ಎಂದು ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.