ಬೆಂಗಳೂರು: ಬೀದರ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪದಲ್ಲಿ ಬಸವಣ್ಣನ ಕಾಲದ ಅನುಭವ ಮಂಟಪವನ್ನೇ ಮರುಸೃಷ್ಟಿ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಬಸವ ಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ಅನುಭವ ಮಂಟಪದ ಪ್ರಗತಿ ಕುರಿತು ಅವರು ಸಭೆ ನಡೆಸಿದರು. ಅಲ್ಲದೇ, ಅನುಭವ ಮಂಟಪದ ಪ್ರಾತ್ಯಕ್ಷಿಕೆಯನ್ನು ಸಿಎಂ ವೀಕ್ಷಿಸಿದರು.
ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವು ಸದಾ ಚಟುವಟಿಕೆಯಿಂದ ಕೂಡಿದ್ದು, ವಿಚಾರ ಮಂಥನ ನಡೆಯುತ್ತಿತ್ತು. ಪ್ರಸ್ತುತ ನಿರ್ಮಿಸುತ್ತಿರುವ ಅನುಭವ ಮಂಟಪದಲ್ಲಿಯೂ ನಿರಂತರ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಸುಸಜ್ಜಿತ ಸಭಾಂಗಣಗಳು ಮತ್ತು ಇತರ ಮೂಲ ಸೌಕರ್ಯಗಳನ್ನು ಸೃಷ್ಟಿಸುವಂತೆ ಅವರು ಸೂಚನೆ ನೀಡಿದರು.
ಮಕ್ಕಳಿಗೆ ಹಿಂದಿನ ಅನುಭವ ಮಂಟಪ ಹೇಗಿತ್ತು? ಎಂಬ ಅರಿವು ಮೂಡಿಸುವ ರೀತಿಯಲ್ಲಿ ಇದನ್ನು ನಿರ್ಮಿಸಬೇಕು. ಜೊತೆಗೆ ಸುಸಜ್ಜಿತವಾದ ಡಿಜಿಟಲ್ ಲೈಬ್ರರಿ, ಹಾಲೋಗ್ರಾಫಿಕ್ ಪ್ರದರ್ಶನ ಮುಂತಾದ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅನುಭವ ಮಂಟಪದ ಅನುಭವ ಜನರಿಗೆ ಆಗುವಂತೆ ಮಾಡಬೇಕು. ಕನಿಷ್ಠ 200 ಜನ ಕುಳಿತುಕೊಳ್ಳುವ ಎರಡು ಸಭಾಂಗಣ ನಿರ್ಮಾಣ ಮಾಡಿ ಎಂದು ಸೂಚನೆ ನೀಡಿದರು.
ದಿನದ 24 ಗಂಟೆ ಕಾಲ ವಿದ್ಯುತ್ ಪೂರೈಕೆ ಇರುವಂತೆ ನೋಡಿಕೊಳ್ಳಿ. ಕಟ್ಟಡದ ಗುಣಮಟ್ಟ ಉತ್ಕೃಷ್ಟ ವಾಗಿ ಇರಲಿ. ಅನುಭವ ಮಂಟಪದ ಸುರಕ್ಷತೆ ಮತ್ತು ನಿರ್ವಹಣೆ ಬಗ್ಗೆ ಆದ್ಯತೆ ನೀಡುವಂತೆ ಹಾಗೂ ಯೋಜನೆಯ ಭಾಗವಾಗಿ ಪರಿಗಣಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ, ಮಾಜಿ ಶಾಸಕ ಬಸವರಾಜ ಪಾಟೀಲ ಸೇಡಂ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಮತ್ತು ಇತರರು ಉಪಸ್ಥಿತರಿದ್ದರು.