ವಿಜಯಪುರ: ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಹುನ್ನಾರ ನಡೆದಿದೆ ಎಂಬ ವಿಷಯ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಗೋವಿಂದ ಕಾರಜೋಳ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವಂತೆ ಆ ಭಾಗದ ಹೆಣ್ಣುಮಕ್ಕಳು ಹೆಚ್ಚೆಚ್ಚು ವಿದ್ಯಾವಂತರಾಗುವಂತೆ ಶೈಕ್ಷಣಿಕ ವ್ಯವಸ್ಥೆಯನ್ನು ಉನ್ನತೀಕರಿಸಲು ತನ್ಮೂಲಕ ಸುಸಂಸ್ಕೃತ, ಸುಶಿಕ್ಷಿತ ಸಮಾಜವನ್ನು ನಿರ್ಮಿಸಿ ಸ್ವಾವಲಂಬಿ ಮಹಿಳೆಯರನ್ನು ಉತ್ತೇಜಿಸುವ ಉದಾತ್ತ ಉದ್ದೇಶದಿಂದ ಮಹಿಳಾ ವಿಶ್ವವಿದ್ಯಾಲಯವನ್ನು ಪ್ರಾರಂಭಸಲಾಗಿದೆ.
ವಿಜಯಪುರದ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ ಆ ಭಾಗದ ಜನಪ್ರತಿನಿಧಿಯಾಗಿ ಮತ್ತು ಜನಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಮತ್ತು ಜನರ ಅಪೇಕ್ಷೆ, ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸುವ ಅಳಿಲು ಸೇವೆಯ ಮೂಲಕ ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ ಕೊಡುಗೆ ನೀಡುವ ಸೌಭಾಗ್ಯವು ನನ್ನದಾಗಿದೆ. ಈ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕೇವಲ ಒಂದೇ ಜಿಲ್ಲೆ ಅಲ್ಲ, ಹದಿಮೂರು ಜಿಲ್ಲೆಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿವೆ. ಈ ಮಹಿಳಾ ವಿಶ್ವ ವಿದ್ಯಾಲಯವನ್ನು ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಎಂದು ಪುನರ್ ನಾಮಕರಣ ಮಾಡಿ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಅಕ್ಕಮಹಾದೇವಿಯವರಿಗೆ ಗೌರವ ಸಲ್ಲಿಸಿದ ಕೀರ್ತಿ ಭಾರತೀಯ ಜನತಾ ಪಕ್ಷದ ಸರಕಾರಕ್ಕೆ ಸಲ್ಲುತ್ತದೆ.
ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮಪಡಿಸುವ ಸದುದ್ದೇಶದಿಂದ ಪ್ರಾರಂಭವಾಗಿರುವ ಮಹಿಳಾ ವಿಶ್ವ ವಿದ್ಯಾಲಯವನ್ನು ಮುಚ್ಚಲಾಗುವುದು ಎಂಬ ಸುಳ್ಳು ವದಂತಿಗಳನ್ನು ಯಾರೂ ಹರಡಬಾರದು ಮತ್ತು ಇಂಥ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಈ ಮೂಲಕ ವಿನಂತಿಸುವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.