ವಿಜಯಪುರ: ಊಟದ ಜೊತೆಗೆ ಉಪ್ಪಿನಕಾಯಿ ಇದ್ದರೆ ಅದರ ರುಚಿಯೇ ಬೇರೆ ಎಂಬುದು ಎಲ್ಲರೂ ಹೇಳುವ ಮಾತು. ಆದರೆ, ಇನ್ನು ಮುಂದೆ ಬಡವರು ಪಡೆಯುವ ಪಡಿತರ ಜೊತೆಗೆ ಉಪ್ಪಿನಕಾಯಿಯೂ ಕಡಿಮೆ ಬೆಲೆ ಸಿಗುವ ದಿನಗಳೂ ಹತ್ತಿರ ಬರಲಿವೆ. ಏಕೆಂದರೆ, ಇದರಿಂದ ಜನರಿಗೆ ಲಿಂಬೆಯಲ್ಲಿರುವ ಸಿಟ್ರಿಕ್ ಪೋಷಕಾಂಶ ಜನರ ಆರೋಗ್ಯಕ್ಕೆ ಪೂರಕವಾದರೆ, ಇದೇ ಲಿಂಬೆಯನ್ನು ನಂಬಿರುವ ಬೆಳೆಗಾರರ ಪಾಲಿಗೂ ಇದು ವರದಾನವಾಗಲಿದೆ.
ಹೌದು ಇಂಥದ್ದೋದ್ದು ಜನೋಪಯೋಗಿ ಯೋಜನೆ ಜಾರಿಗೆ ಲಿಂಬೆ ಅಭಿವೃದ್ಧಿ ಮಂಡಳಿ ಯೋಜನೆ ರೂಪಿಸಿದ್ದು, ಈಗಾಗಲೇ ಈ ಕುರಿತು ಆಹಾರ ನಿಗಮದ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಬವಸನಾಡು ವಿಜಯಪುರ ಈಗ ದ್ರಾಕ್ಷಿ ಅಷ್ಟೇ ಅಲ್ಲ, ಲಿಂಬೆಯ ನಾಡು ಎಂದೂ ಹೆಸರಾಗಿದೆ. ಈ ಲಿಂಬೆಗೆ ಜಾಗತಿ ಸೂಚ್ಯಕ್ಕಯ ಗ್ಲೋಬಲ್ ಇಂಡಿಕೇಶನ್ ನೀಡುವ ದಿನಗಳು ಸಮಿಪಿಸಿವೆ. ಈ ಹಿನ್ನೆಲೆಯಲ್ಲಿ ಈ ಹೊಸ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಿಂಬೆ ಬೆಳೆಗೆ ವರ್ಷವಿಡೀ ಒಂದೇ ದರ ಇರುವುದಿಲ್ಲ. ಚಳಿಗಾಲದಲ್ಲಿ ಲಿಂಬೆಯನ್ನು ಕೇಳವವರ ಸಂಖ್ಯೆ ಕಡಿಮೆ. ಬೇಸಿಗೆಯಲ್ಲಿ ಲಿಂಬೆಹಣ್ಣಿನ ಬೆಲೆ ಉತ್ತಮವಾಗಿದ್ದರೂ ಇದರಿಂದ ರೈತರಿಗೆ ಸಿಗುವ ಲಾಭವೂ ಕಡಿಮೆ. ಕೆಲವೇ ಕೆಲವು ವ್ಯಾಪಾರಿಗಳ ಹಿಡಿತದಲ್ಲಿರುವ ಲಿಂಬೆ ಮಾರುಕಟ್ಟೆ ರೈತರನ್ನು ಹಲವಾರು ಬಾರಿ ಸಂಕಷ್ಟಕ್ಕೆ ಸಿಲುಕಿಸಿದ್ದು ಇದೆ. ರೈತರ ಶೋಷಣೆ ತಪ್ಪಿಸಲು ಮತ್ತು ಲಿಂಬೆಹಣ್ಣು ಮಾರುಕಟ್ಟೆ ವಿಸ್ತರಿಸಲು ಮಂಡಳಿ, ಲಿಂಬೆ ಉಪಉತ್ಪನ್ನಗಳನ್ನು ತಯಾರಿಸುವವರಿಗೆ ನೆರವಾಗಲು ನಿರ್ಧರಿಸಿದೆ. ಇದರ ಅಂಗವಾಗಿ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಲೂ ಕೂಡ ಯೋಜನೆ ರೂಪಿಸಿದೆ. ಈಗಾಗಲೇ ಈ ನಿಟ್ಟಿನಲ್ಲಿ ಆಹಾರ ನಿಗಮದ ಅಧ್ಯಕ್ಷ ಮತ್ತು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ತೂಕದ ಪಾಕೀಟುಗಳನ್ನು ತಯಾರಿಸಿ ಪಡಿತರ ಅಂಗಡಿಗಳ ಮೂಲಕ ಕಡಿಮೆ ಬೆಲೆಗೆ ವಿತರಿಸಿದರೆ ಜನತೆಗೆ ರೋಗನಿರೋಧಕ ಶಕ್ತಿ ಹೆಚ್ಚಲು ಕೂಡ ನೆರವಾಗಲಿದೆ ಎಂದು ಅಶೋಕ ಅಲ್ಲಾಪುರ ತಿಳಿಸಿದರು.
ರಾಜ್ಯದಲ್ಲಿ ಲಿಂಬೆಹಣ್ಣು ಉತ್ಪಾದನೆ
ರಾಜ್ಯದಲ್ಲಿ 21660 ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆಹಣ್ಣು ಬೆಳೆಯಲಾಗುತ್ತದೆ. ಅದರಲ್ಲಿ ಬಸವನಾಡು ವಿಜಯಪುರ ಜಿಲ್ಲೆಯ ಪಾಲು ಶೇ. 58ರಷ್ಟಿದೆ. ಅಂದರೆ ವಿಜಯಪುರ ಜಿಲ್ಲೆಯಲ್ಲಿ 12220 ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆಹಣ್ಣು ಬೆಳೆಯಲಾಗುತ್ದೆ. ಅದರಲ್ಲೂ ವಿಜಯಪುರ ಜಿಲ್ಲೆಯ ಇಂಡಿ ಮತ್ತು ಸಿಂದಗಿ ತಾಲೂಕುಗಳಲ್ಲಿ ಜಿಲ್ಲೆಯ ಪಾಲಿನಲ್ಲಿ ಶೇ. 60 ರಷ್ಟು ಲಿಂಬೆಹಣ್ಣನ್ನು ಬೆಳೆಯಲಾಗುತ್ತದೆ. ವಿಶ್ವದಲ್ಲಿ ಲಿಂಬೆ ಬೆಳೆಯುವ ದೇಶಗಳಲ್ಲಿ ಚೀನಾ ಮತ್ತು ಮೆಕ್ಸಿಕೋ ಮೊದಲೆರಡು ಸ್ಥಾನದಲ್ಲಿದ್ದರೆ, ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದರೆ, ವಿಜಯಪುರ ಜಿಲ್ಲೆ ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.
ವರ್ಷದಲ್ಲಿ ಲಿಂಬೆ ಗಿಡಗಳು ಮೂರ್ನಾಲ್ಕು ಬಾರಿ ಇಳುವರಿ ನೀಡುತ್ತವೆ. ಆದರೆ, ಮಾರುಕಟ್ಟೆಯಲ್ಲಿ ಇವುಗಳ ದರ ಏಕರೂಪದಲ್ಲಿ ಇರುವುದಿಲ್ಲ. ಲಿಂಬೆಹಣ್ಣು ಬೆಳೆಗೆ ವರ್ಷವಿಡೀ ಸಮಾನ ದರ ಸಿಗುವಂತಾಗಲು ಮತ್ತು ಲಿಂಬೆ ಬೆಳೆಗಾರರ ನೆರವಿಗೆ ಲಿಂಬೆ ಅಭಿವೃದ್ಧಿ ಮಂಡಳಿ ವಿನೂತನ ಕ್ರಮಕ್ಕೆ ಮುಂದಾಗಿದೆ. ಲಿಂಬೆ ಹಣ್ಣಿನ ನಿರ್ವಹಣೆಗಾಗಿ ಬಹಾರ ನಿರ್ವಹಣೆ ತರಬೇತಿ ನೀಡಲಾತ್ತಿದೆ. ಚಳಿಗಾಲದಲ್ಲಿ ಸಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಲಿಂಬೆಹಣ್ಣಿನ ಬೇಡಿಕೆ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ಬೇಡಿಕೆ ಹೆಚ್ಚಾಗಿರುವ ದಿನಗಳಲ್ಲಿ ಈ ಬೆಳೆ ಹೆಚ್ಚಾಗಿ ಬೆಳೆಯಲು ತಂತ್ರಜ್ಞಾನ ಬಳಕೆ ಕುರಿತು ರೈತರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಅಶೋಕ ಅಲ್ಲಾಪುರ ತಿಳಿಸಿದರು.
ಕೇಂದ್ರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಲಿಂಬೆ ಹಣ್ಣು ಮತ್ತು ಅದರ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ಅಲ್ಲದೇ, ಲಿಂಬೆ ಹಣ್ಣಿನ ಉಪಉತ್ಪನ್ನಗಳಾದ ಉಪ್ಪಿನಕಾಯಿ, ಕ್ವಾಷ್, ಕ್ವಾರ್ಡಿಯಲ್, ಜಾಮ್, ಜ್ಯೂಸ್, ಕಾನ್ಸಂಟ್ರೇಟೆಡ್, ಲೈಮ್ ಡ್ರೈಯರ್ಸ್ ಮೂಲಕ ಬೇಡಿಕೆ ಇರುವ ಅರಬ್ ರಾಷ್ಟ್ರಗಳಿಗೆ ರಫ್ತು ಮಾಡಲು ಅಸಕ್ತಿ ಹೊಂದಿರುವ ರೈತರಿಗೆ ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಾವು ಅಧ್ಯಕ್ಷರಾಗಿ ಈಗಾಗಲೇ ಒಂದು ಕಳೆದಿದ್ದು, ಈ ಅವಧಿಯಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಸ್ವತಂ ಕಚೇರಿ ಕಟ್ಟಡ ನಿರ್ಮಾಣಕ್ಕೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ವಸಂತ ನಗರದಲ್ಲಿ ಈಗಾಗಲೇ 3 ಎಕರೆ 13 ಗುಂಟೆ ಜಮೀನು ಪಡೆಯಲಾಗಿದೆ. ಪೂರ್ಣ ಪ್ರಮಾಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರಕಾರದ ರಫ್ತಾರ್ ಯೋಜನೆಯಡಿ ರೂ. 8 ಕೋ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಫೆಬ್ರವರಿ ಅಂತ್ಯದೊಳಗೆ ಇದಕ್ಕೆ ಮಂಜೂರಾತಿ ಪಡೆದು ಮಂಡಳಿಯ ಸ್ವಂತ ಕಟ್ಟಡಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ಅವರು ತಿಳಿಸಿದರು.
ರಫ್ತು ಮಾಡಲು ಯೋಗ್ಯವಾದ ಲಿಂಬೆಹಣ್ಣು ಬೆಳೆಯಲು ಎಕ್ಸಪೋರ್ಟ್ ಕ್ವಾಲಿಟಿ ಹಣ್ಣುಗಳನ್ನು ಬೆಳೆಯಲು ತಂತ್ರಜ್ಞಾನ ರೂಪಿಸಲಾಗಿದೆ. ಆನಲೈನ್ ಮೂಲಕ ವ್ಯಾಪಾರ ನಡೆಸಲು ಫ್ಲಿಪಕಾರ್ಟ್ ಮತ್ತು ಅಮೇಜಾನ್ ಮೂಲಕ ಬ್ರ್ಯಾಂಡಿಂಗ್ ಮಾಡಲು ಈ ಕಾಮರ್ಸ್ ಮಾರುಕಟ್ಟೆ ಮೂಲಕ ಆಸಕ್ತಿ ಇರುವ ರೈತರಿಗೆ ನೆರವು ನೀಡಲಾಗುವುದು ಎಂದು ಅಶೋಕ ಅಲ್ಲಾಪುರ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಮಲ್ಲಿಕಾರ್ಜುನ ಜೇವೂರ, ಶಿವರುದ್ರ ಬಾಗಲಕೋಟ, ವಿಜಯ ಜೋಶಿ, ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.