ವಿಜಯಪುರ: ಸಚಿವ ಸಂಪುಟದಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡದಿದ್ದರೆ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿದ ಜನರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಈಗ ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ, ಅವುಗಳನ್ನು ತುಂಬಬೇಕು, ಕೆಲ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಅನ್ಯಾಯವಾಗಿದೆ. ಇದರಿಂದ ಆ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿದ ಜನರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಹೇಳಿದರು.
ನೀವು ಸಿಎಂ ಆಗಬೇಕಾದರೆ ಹಲವು ಜಿಲ್ಲೆಗಳಿಂದ ನಾಲ್ಕು ಐದು ಶಾಸಕರನ್ನು ಕೊಟ್ಟಿದ್ದಾರೆ. ಒಂದೊಂದು ಜಿಲ್ಲೆಯಲ್ಲಿ ಎರಡು, ಮೂರು, ನಾಲ್ಕು, ಐದು, ಆರು, ಏಳು ಸಚಿವರನ್ನು ಮಾಡಿದರೆ ಉಳಿದ ಶಾಸಕರಿಗೆ ಸಚಿವರಾಗಲು ಅರ್ಹತೆ ಇಲ್ಲವೇ? ಅಥವಾ ಆ ಜಿಲ್ಲೆಯ ಜನರು ಬಿಜೆಪಿಗೆ ಓಟ್ ಹಾಕಿದ್ದೇ ತಪ್ಪಾ? ಎನ್ನುವ ಪ್ರಶ್ನೆ ಇವತ್ತು ಜನರಲ್ಲಿ ಮೂಡುತ್ತಿದೆ. ಮೊದಲು ಜಿಲ್ಲಾವಾರು ಪ್ರಾತಿನಿಧ್ಯ ನೀಡಬೇಕು. ಉಳಿದಂತೆ ಸೀನಿಯರ್ ಇದ್ದವರಿಗೆ ಹಾಗೂ ನಿಮ್ಮ ಹಿಂದಿನ ಬಾಲಂಗೋಚಿ ಇದ್ದವರಿಗೆ ಕೊಡಿ ಎಂದು ಕೇಂದ್ರ ಮಾಜಿ ಸಚಿವರೂ ಆಗಿರುವ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದರು.
ನಿಗಮ ಮಂಡಳಿ ನೇಮಕ ವಿಚಾರ
ಇದೇ ವೇಳೆ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಕೆಜೆಪಿ ಇಂದ ಬಂದಂತಹವರು ಹೆಚ್ಚು ಜನರು ಅಧ್ಯಕ್ಷರಾಗಿದ್ದಾರೆ. ಇವತ್ತು ಬಿಜೆಪಿ ಹಿರಿಯ ಹಾಗೂ ಮೂಲ ಕಾರ್ಯಕರ್ತರು ಪಕ್ಷ ಕಟ್ಟಿದವರ ನಿರ್ಲಕ್ಷ್ಯ ಆಗಿದೆ. ಅಂಥಹವರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಬೇಕು. ನಿಗಮ ಮಂಡಳಿ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು, ಪಕ್ಷದಲ್ಲೂ ಅನೇಕ ಬದಲಾವಣೆಗಳು ಆಗಬೇಕು, ಪುನಾರಚನೆ ಆಗಬೇಕು. ಹೊಸ ಚೈತನ್ಯದೊಂದಿಗೆ ಬಿಜೆಪಿ ಯುಗಾದಿ ವೇಳೆಗೆ ಸಜ್ಜಾಗಬೇಕು ಎಂದು ಅವರು ಹೇಳಿದರು.
ಜೆಡಿಎಸ್, ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ
ಇದೇ ವೇಳೆ, ಬಿಜೆಪಿ ಮತ್ತು ಜೆಡಿಎಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಒಂದು ಬಾಂಬ್ ಸಿಡಿಸುತ್ತಿದ್ದೇನೆ. ಜೆಡಿಎಸ್ ಮತ್ತು ಕಾಂಗ್ರೆಸ್ಸಿನಲ್ಲಿರುವಂಥ ಅನೇಕ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಮ್ಮ ಸಂಪರ್ಕದಲ್ಲೂ ಇದ್ದಾರೆ ಎಂದು ಹೇಳಿದರು.
ಕೆಲವರು ಹೋಗುವವರು ಹೋಗುತ್ತಾರೆ, ಈ ಜಿಲ್ಲೆಯಲ್ಲೂ ಒಬ್ಬರು ಹೊಗೋಕೆ ಸಿದ್ಧವಾಗಿದ್ದಾರೆ. ಅವರು ಈಗಾಗಲೇ ಕಾಂಗ್ರೆಸ್ ನಾಯಕರೊಂದಿಗೆ ಗುಸುಗುಸು ಪಿಸುಪಿಸು ನಡೆಸಿದ್ದಾರೆ ಎಂದು ಪರೋಕ್ಷವಾಗಿ ಮುದ್ದೇಬಿಹಾಳ ಶಾಸಕ ಎ ಎಸ್. ಪಾಟೀಲ ನಡಹಳ್ಳಿ ಹೆಸರು ಹೇಳದೇ ಯತ್ನಾಳ ಟಾಂಗ್ ನೀಡಿದರು.
ಉಸ್ತುವಾರಿ ಸಚಿವರ ಬದಲಾವಣೆ ವಿಚಾರ
ನಾನು ಸಚಿವೆ ಶಶಿಕಲಾ ಜೊಲ್ಲೆ ಅವರ ಬಗ್ಗೆ ಎಲ್ಲಿಯೂ ಏನೂ ಹೇಳಿಲ್ಲ, ಒಮ್ಮೆಯೂ ನಾನು ಟೀಕೆ ಮಾಡಿಲ್ಲ, ಅವರು ಒಬ್ಬ ಹೆಣ್ಣು ಮಗಳಾಗಿ ಅವರ ಕೆಲಸ ಮಾಡಿದ್ದಾರೆ, ಅವರಿಗೆ ಹೊಸ ಜಿಲ್ಲೆ ಜವಾಬ್ದಾರಿ ಕೊಟ್ಟಿದ್ದಾರೆ, ಇಲ್ಲಿಯವರೆಗೆ ನಮ್ಮ ಜೊತೆ ಸಹಕಾರ ಮಾಡಿದ್ದಕ್ಕೆ ಅವರಿಗೆ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ, ಉಮೇಶ ಕತ್ತಿ ಅವರು ನಮ್ಮ ಜಿಲ್ಲೆಗೆ ಉಸ್ತುವಾರಿ ಆಗಿದ್ದಾರೆ. ಅವರು ನಮ್ಮ ಆತ್ಮೀಯರು ಹಿರಿಯರು. ಅವರು ನಮ್ಮ ಜಿಲ್ಲೆಗೆ ಉಸ್ತುವಾರಿ ಆಗಿದ್ದು ಸಂತೋಷದ ವಿಚಾರ. ಎಂದು ಅವರು ಹೇಳಿದರು.
ಸಮ್ಮಿಶ್ರ ಸರಕಾರ ಕೆಡವಲು ನಾವು ಯತ್ನಾಳ ಅವರು ಬಹಳ ಶ್ರಮಿಸಿದ್ದೇವೆ. ನಮಗೆ ಸೂಕ್ತ ಸ್ಥಾನಮಾನ ಕೊಟ್ಟಿಲ್ಲ ಎಂದು ರೇಣುಕಾಚಾರ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ರೇಣುಕಾಚಾರ್ಯ ಏನು ಮಾಡಿದ್ದಾರೋ, ನಾವು ಏನು ಮಾಡಿದ್ದೀವೋ ಹೇಳಿಕೊಳ್ಳುವುದು ಬೇಡ. ಒಟ್ಟಾರೆಯಾಗಿ ಈ ಸರಕಾರ ಬರಲು ಬಹಳಷ್ಟು ಜನರು ಬಿಜೆಪಿಯಲ್ಲಿ ಶ್ರಮಿಸಿದ್ದಾರೆ, ಅಂತಹವರು ಅಧಿಕಾರದಿಂದ ವಂಚಿತರಾಗಿದ್ದಾರೆ. ನಮ್ಮಲ್ಲಿ ಕೆಲವರಲ್ಲಿ ಅಡ್ಜಸ್ಟ್ ಮೆಂಟ್ ಇವೆ, ಡಿ. ಕೆ. ಶಿವಕುಮಾರ, ಸಿದ್ದರಾಮಯ್ಯ, ಕುಮಾರಸ್ವಾಮಿ ಜೊತೆ ಅಡ್ಜೆಸ್ಟಮೆಂಟ್ ಇರುವ ಲೀಡರಗಳು ಇದ್ದಾರೆ. ಓನ್ಲಿ ಅಡ್ಜೆಸ್ಟ್ ಮೆಂಟ್ ಲೀಡರ್ ಗಳು ಅಂತ್ಯವಾಗಿದ್ದಾರೆ. ಈಗ ಸಜೇಷನ್ ಕೊಡುವ ಲೀಡರ್ಸ್ ಅಷ್ಟೆ ಉಳಿದಿದ್ದಾರೆ ಎಂದು ಹೇಳಿದರು.
ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ
ಸಧ್ಯದಲ್ಲಿಯೇ ಕೆಲವು ಸಚಿವರ ಖಾತೆ ಬದಲಾವಣೆ ಮತ್ತು ಬಾಕಿ ಉಳಿದ ನಾಲ್ಕು ಸ್ಥಾನಗಳ ಭರ್ತಿ ಆಗಲಿದೆ ಎಂಬ ನಿರೀಕ್ಷೆಯಿದೆ. ಈ ಬಾರಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚಣೆಯಲ್ಲಿ ವಿಜಯಪುರ ಜಿಲ್ಲೆಗೆ ಅನ್ಯಾಯವಾಗುವುದಿಲ್ಲ ಎಂದು ಹೇಳಿದ ಅವರು, ಬೆಳಗಾವಿಯಲ್ಲಿ ಉಮೇಶ ಕತ್ತಿ ನೇತೃತ್ವದಲ್ಲಿ ನಡೆದ ಸಭೆ ಮತ್ತು ಬೆಂಗಳೂರಿನಲ್ಲಿ ರಮೇಶ ಜಾರಕಿಹೋಳಿ ಹಾಗೂ ನಾವು ಮಾಡಿದ ಸಭೆ ಗುಪ್ತ ಸಭೆಗಳಲ್ಲ. ಎರಡೂ ಸಭೆಗಳು ಬಿಜೆಪಿ ಸಂಘಟನೆಗಾಗಿ ನಡೆದಿವೆ. ಮುಂದಿನ 2023 ರ ಚುನಾವಣೆಯಲ್ಲಿ ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರಲು ಈ ಸಭೆಗಳು ನಡೆದಿವೆ. 130 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಹಾಗೂ ಲೋಕಸಭೆಯಲ್ಲಿ ಈಗ ಇರುವ 25 ಸ್ಥಾನಗಳನ್ನು ಉಳಿದಿಕೊಳ್ಳಲು ಈ ಸಭೆಗಳು ನಡೆದಿವೆ. ಈ ಸಭೆಗಳು ಪಕ್ಷ ವಿರೋಧಿಯಲ್ಲ. ಪಕ್ಷಕ್ಕೆ ಹಿನ್ನಡೆ ಮಾಡುವಂತದ್ದಲ್ಲ. ಪಕ್ಷಕ್ಕೆ ದ್ರೋಹ ಮಾಡುವಂಥದ್ದಲ್ಲ ಎಂದ ಅವರು ಹೇಳಿದರು.
ಬೆಳಗಾವಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲುಂಡ ಕಾರಣ ಅವರು ಆತ್ಮಾವಲೋಕನ ಸಭೆ ಮಾಡಿದ್ದಾರೆ. ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಪಡೆಯುವ ನಿಟ್ಟಿನಲ್ಲಿ ಅವರು ಸಭೆ ಮಾಡಿದ್ದಾರೆ. ನಾವು ಸಭೆ ಮಾಡಿದ್ದೇವೆ. ಈ ವಿಚಾರಗಳನ್ನು ಬಿಟ್ಟು ಇತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿಲ್ಲ. ಉಮೇಶ್ ಕತ್ತಿ ಹಾಗೂ ನಾವು ಮಾಡಿದ ಸಭೆಗಳು ಗುಪ್ತ ಸಭೆಗಳಲ್ಲಿ ಬಹಿರಂಗ ಸಭೆ ಎಂದು ಯತ್ನಾಳ ಸ್ಪಷ್ಟನೆ ನೀಡಿದರು.
ಮಾರ್ಚ್ ಒಳಗೆ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಯಾದರೆ ಸಚಿವರಾದವರಿಗೆ ಕೆಲಸ ಮಾಡಲು ಸಮಯ ಸಿಗುತ್ತದೆ, ಈ ಕಾರಣದಿಂದ ಮಾರ್ಚ್ ಒಳಗೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಿ ಎಂದು ಸಿಎಂಗೆ ಹೇಳಿದ್ದೇವೆ, ಚುನಾವಣೆಗೆ ಕಡಿಮೆ ಸಮಯ ಇರುವಾಗ ಸಚಿವ ಸ್ಥಾನ ನೀಡಿದರೆ ಕೆಲಸ ಮಾಡಲು ಆಗಲ್ಲಾ ಎಂದ ಯತ್ನಾಳ್
ಚುನಾವಣೆ ಸಮೀಪ ಇರುವಾಗ ಅಧಿಕಾರಿಗಳೂ ಸಹ ಕೆಲಸ ಮಾಡಲ್ಲ. ಈಗ ಸಚಿವ ಸ್ಥಾನ ವಂಚಿತವಾಗಿರೋ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಬೇಕು. ಸಚಿವ ಸ್ಥಾನ ವಂಚಿತ ಜಿಲ್ಲೆಗಳಿಗೆ ಸೂಕ್ತ ಸ್ಥಾನಮಾನ ಹಾಗೂ ಜಾತಿಯ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು. ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಕಾರ್ಯಗಳು ಸರಕಾರದಿಂದ ಆಗಲಿ ಎಂಬುದೇ ನಮ್ಮ ಉದ್ದೇಶವಾಗಿದೆ. ಅದನ್ನು ಬಿಟ್ಟು ಯಾವುದೇ ಶಾಸಕರ ಸಚಿವರ ಭಿನ್ನಾಭಿಪ್ರಾಯ ಭಿನ್ನಮತ ಇಲ್ಲ, ತಾವು ಸಚಿವರಾಗಲು ಲಾಭಿ ಮಾಡಿಲ್ಲ. ಆ ಸಭೆ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ದವೂ ಅಲ್ಲ ಎಂದು ಯತ್ನಾಳ ಸ್ಪಷ್ಟಪಡಿಸಿದರು.
ಪಂಚಮಸಾಲಿ ಸಮುದಾಯದ ಮೂರನೇ ಪೀಠ ವಿಚಾರ
ಲಿಂಗಾಯಿತ ಪಂಚಮಸಾಲಿ ಮೂರನೇ ಪೀಠ ನಿರಾಣಿ ಮಾಡಿಸಿದ ಪೀಠವಾಗಿದೆ. ಮೂರನೇ ಪೀಠದಿಂದ ಯಾವುದೇ ಸಮಸ್ಯೆಯಿಲ್ಲ. ಅದರಿಂದ ಸಮಾಜ ಒಡೆಯವುದಿಲ್ಲ. ಸಮಾಜದ ಜನರಿಗೆ ಗೊತ್ತಿದೆ. ಯಾವ ಪೀಠ ಎಷ್ಟು ಕೆಲಸ ಮಾಡಿದೆ ಎಂಬುದು ಗೊತ್ತಿದೆ. ಕೂಡಲ ಸಂಗಮ ಪೀಠ ರಾಜಕೀಯ ಮಾಡುತ್ತಿದೆ ಎಂಬ ಮೂರನೇ ಪೀಠದ ಸ್ವಾಮೀಜಿಗಳು ಆರೋಪ ಮಾಡುತ್ತಿದ್ದಾರೆ. ಆದರೆ, ಹರಿಹರ ಪೀಠ ಏನು ಮಾಡುತ್ತಿದೆ? ಸಚಿವ ಮುರುಗೇಶ ನಿರಾಣಿ ಪರವಾಗಿ ವಚನಾನಂದ ಸ್ವಾಮೀಜಿ ಮಾತನಾಡಿಲ್ಲವಾ? ಸಮಾಜಕ್ಕೆ ಮೀಸಲಾತಿ ಸಿಗಲಿ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಾರೆ, ಜನರಿಗೆ ಎಲ್ಲದರ ಬಗ್ಗೆ ಅರಿವಿದೆ. ಜನರೇ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ. ಮೂರು ಅಲ್ಲ ಇನ್ನು ಎಷ್ಟೆ ಪೀಠಗಳು ಬಂದರೂ ಏನು ಆಗೋದಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.