ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ರಾಜ್ಯ ಸರಕಾರ ರೂ. 180 ಕೋ. ವೆಚ್ಚದಲ್ಲಿ ಬೃಹತ್ ಮಿಲಿಟರಿ ಶಾಲೆಯನ್ನು ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 191 ನೇ ಸ್ಮರಣೋತ್ಸವದ ಅಂಗವಾಗಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದರು.
ಈ ಮಿಲಿಟರಿ ಶಾಲೆ ಆರಂಭಿಸುವ ಉದ್ದೇಶಕ್ಕಾಗಿ ರೂ. 55 ಕೋ. ಹಣವನ್ನು ಸರಕಾರ ಈಗಾಗಲೇ ಬಿಡುಗಡೆ ಮಾಡಿದೆ. ಈ ವರ್ಷ ಶಾಲೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ರಕ್ಷಣಾ ಇಲಾಖೆ ಶಾಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ಮಾತುಕತೆ ನಡೆದಿದೆ. ಪರಿಶೀಲನೆ ಕಾರ್ಯವೂ ನಡೆದಿದ್ದು, ರಕ್ಷಣಾ ಇಲಾಖೆ ಅದನ್ನು ಬಹುತೇಕವಾಗಿ ಮಿಲಿಟರಿ ಶಾಲೆಯಾಗಿ ಪರಿವರ್ತನೆ ಮಾಡಲಿದೆ. ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು 100 ಎಕರೆ ಪ್ರದೇಶದಲ್ಲಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ನಂದಗಡದಲ್ಲಿ ಅವರ ಸಮಾಧಿಯ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗುವುದು. ಅವರ ಹುಟ್ಟೂರು ಸಂಗೊಳ್ಳಿಯಲ್ಲಿ 10 ಎಕರೆ ಜಮೀನು ರಾಕ್ ಗಾರ್ಡನ್ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಮುಂದಿನ ಪೀಳಿಗೆಗೆ ರಾಯಣ್ಣನ ಜೀವನದ ಪರಿಚಯ ಮಾಡಿಕೊಡಲು ಈ ಸ್ಮಾರಕಗಳ ನಿರ್ಮಾಣವಾಗುತ್ತಿದೆ ಎಂದು ಸಿಎಂ ತಿಳಿಸಿದರು.
ರಾಯಣ್ಣನ ಧ್ಯೇಯ ಜೀವಂತವಾಗಿಡಲು ಕ್ರಮ
ಸಂಗೊಳ್ಳಿ ರಾಯಣ್ಣನ ಗುಣಧರ್ಮಗಳಾದ ದೇಶಭಕ್ತಿ, ಸ್ವಾಮಿ ಭಕ್ತಿ, ನಿಷ್ಠೆ, ಧೈರ್ಯ ಶೌರ್ಯ, ಸಾಹಸ ಗುರಿಗಳನ್ನು ಪ್ರಚಲಿತ ಸಮಾಜದಲ್ಲಿ ಜೀವಂತವಾಗಿಡಲು ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ರೂಪಿಸಲು ಸರಕಾರ ಬದ್ಧವಾಗಿದೆ. ಅವರ ಧ್ಯೇಯವನ್ನು ಮುಂದಿಟ್ಟುಕೊಂಡು ನಮ್ಮ ಆಡಳಿತ ನಡೆಯಲಿದೆ. ಕಳೆದ ಬಾರಿ ಸರಕಾರವೇ ರಾಯಣ್ಣನ ಜನ್ಮದಿನಾಚರಣೆ ಮಾಡಲು ಮನವಿ ಬಂದ ಒಂದು ಗಂಟೆಯಲ್ಲಿ ಆದೇಶ ಹೊರಡಿಸಲಾಯಿತು ಎಂದು ಮುಖ್ಯಮಂತ್ರಿ ತಿಳಿಸಿದರು.
ಶಾಲಾ ಕಾಲೇಜುಗಳಲ್ಲಿ ಭಾವಚಿತ್ರ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಹಾಕಿಸಲು ಇಂದೇ ಆದೇಶ ಹೊರಡಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಬೆಂಗಳೂರಿನ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು
ಸಂಗೊಳ್ಳಿ ರಾಯಣ್ಣನ ವಿಚಾರಧಾರೆಯನ್ನು ಪ್ರಚುರ ಪಡಿಸಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಕರ್ನಾಟಕದಲ್ಲಿ ಸ್ವತಂತ್ರ ಹೋರಾಟಗಾರರ ದೊಡ್ಡ ಇತಿಹಾಸವಿದೆ. ಬೆಂಗಳೂರಿನ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಬೇಕು ಎಂಬ ಪ್ರಸ್ತಾಪವನ್ನು ಸಂಸದ ಪಿ. ಸಿ. ಮೋಹನ್ ಮಾಡಿದ್ದಾರೆ. ಈ ಬಗ್ಗೆ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ತಿಳಿಸಿದರು.
ನವದೆಹಲಿಯಲ್ಲಿ ರಾಯಣ್ಣನ ಪ್ರತಿಮೆ
ನವದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆಯಿದೆ. ಚನ್ನಮ್ಮ ಇದ್ದ ಕಡೆ ರಾಯಣ್ಣ ಸಹ ಇರಬೇಕು. ನವದೆಹಲಿಯ ಸೂಕ್ತ ಸ್ಥಳದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಈಗಾಗಲೇ ಸಂಬಂಧ ಪಟ್ಟವರಿಗೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು.
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣ ಸೌಧದ ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಮೂರ್ತಿ ಮಾಡುವವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಆದಷ್ಟು ಶೀಘ್ರದಲ್ಲಿ ಈ ಮೂರ್ತಿಗಳು ಸ್ಥಾಪನೆಯಾಗಲಿವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಅವರ ತ್ಯಾಗ, ಬಲಿದಾನ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ. ಸ್ವಾತಂತ್ರ್ಯದ ನಂತರ ಹುಟ್ಟಿರುವ ನಾವು ದೇಶ ಕಟ್ಟಲು ಆದರ್ಶ ಬದುಕನ್ನು ಬದುಕುವ ಮೂಲಕ ದೇಶಕ್ಕೆ ಸೇವೆ ಮಾಡಬೇಕು. ದೇಶಕ್ಕಾಗಿ ನಾನೇನು ಮಾಡಿದ್ದೇನೆ ಎಂದು ಪ್ರಶ್ನಿಸಿಕೊಳ್ಳಬೇಕಾದ ದಿನವಿದು. ನಮ್ಮ ಹಕ್ಕುಗಳನ್ನು ಅರ್ಹತೆಯಿಂದ ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ಕಾಗಿನೆಲೆ ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕಂದಾಯ ಸಚಿವ ಆರ್. ಅಶೋಕ, ಬೆಂಗಳೂರು ಕೇಂದ್ರ ಬಿಜೆಪಿ ಸಂಸದ ಪಿ. ಸಿ. ಮೋಹನ, ಮಾಜಿ ಶಾಸಕ ವಾಟಾಳ ನಾಗರಾಜ, ಮಾಜಿ ಸಚಿವ ಎಚ್. ಎಂ. ರೇವಣ್ಣ ಮುಂತಾದವರು ಉಪಸ್ಥಿತರಿದ್ದರು.