ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಶೀಘ್ರದಲ್ಲಿ ಸಚಿವರಾಗಲಿದ್ದಾರೆ ಎಂದು ಅರಣ್ಯ, ಆಹಾರ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ನೂತನ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿರುವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಗೆ ಅನ್ಯಾಯವಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂತ್ರಿ ಆಗೇ ಆಗುತ್ತಾರೆ. ಇದರಲ್ಲಿ ಎರಡು ಮಾತಿಲ್ಲ. ಯತ್ನಾಳ ನನ್ನ ಆತ್ಮೀಯ ಮಿತ್ರರು. ಈ ಹಿಂದೆ ಕೇಂದ್ರ ಮಂತ್ರಿಯಾಗಿದ್ದವರು. ರಾಜ್ಯ ಸರಕಾರದಲ್ಲಿ ಮಂತ್ರಿ ಆಗಬೇಕಿದೆ. ಏನೋ ಎಡರು ತೊಡರುಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಸಚಿವರು ಹೇಳಿದರು.
ಯತ್ನಾಳ ಶೀಘ್ರದಲ್ಲಿ ಸಚಿವರಾಗಲ್ಲಿದಾದರೆ. ಮುಖ್ಯಮಂತ್ರಿಗಳು ಯತ್ನಾಳ ಅವರನ್ನು ಮಂತ್ರಿ ಮಾಡಬೇಕು. ಯತ್ನಾಳ ಅವರನ್ನು ಮಂತ್ರಿ ಮಾಡಲು ನಾನು ಎಲ್ಲಾ ಸಪೋರ್ಟ್ ಮಾಡುತ್ತೇನೆ ಎಂದು ಹೇಳಿದ ಉಮೇಶ ಕತ್ತಿ, ಗುಪ್ತ ಸಭೆಗಳ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು.
ಸಚಿವ ಸಂಪುಟ ವಿಸ್ತರಣೆ ನಿರಂತರ ಜ್ಯೋತಿ ಯೋಜನೆ ಇದ್ದಂತೆ
ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಬದಲಾವಣೆ ವಿಚಾರ ನಿರಂತರ ಜ್ಯೋತಿ ಯೋಜನೆ ಇದ್ದಂತೆ. ಆದರೂ ಸಹ ಎಲ್ಲೂ ಬದಲಾವಣೆ ಕಂಡು ಬಂದಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಿಲ್ಲ. ಮಾಧ್ಯಮಗಳ ಮೂಲಕ ಪ್ರತಿದಿನ ಈ ಬಗ್ಗೆ ಚರ್ಚೆ ಆಗುತ್ತಿದೆ. ನಾವೂ ನೋಡುತ್ತಿದ್ದೇವೆ. ನೀವೂ ನೋಡುತ್ತಿದ್ದೀರಿ. ನೋಡಿಕೊಂಡು ಹೋಗೋಣ ಎಂದು ಹೇಳಿದರು.
ನಮ್ಮದು ಗುಪ್ತಸಭೆ ಅಲ್ಲ, ವಿಧಾನ ಪರಿಷತ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಮಹಾಂತೇಶ ಕವಟಗಿಮಠ ಅವರ ಸೋಲು ಹೇಗಾಯಿತು? ಅದಕ್ಕೆ ಕಾರಣವೇನು? ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ತಾಲೂಕು ಪಂಚಾತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಹೇಗೆ ಮಾಡಬೇಕು ಎಂಬುದನ್ನು 10 ಜನ ಶಾಸಕರು ಸೇರಿ ಚರ್ಚೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಯಾವುದೇ ಗುಪ್ತಸಭೆ ನಡೆಸಿಲ್ಲ
ನಾವು ನಡೆಸಿರುವುದು ಗುಪ್ತಸಭೆ ಅಲ್ಲ. ಯಾರನ್ನೂ ಬಿಡೋದು, ಯಾರನ್ನು ತಗೊಂಡು ಸಭೆ ಮಾಡೋದು ಅಂತೇನಿಲ್ಲ. ಸಹಜವಾಗಿ ಸೇರಿದ್ದ ಸಮಯದಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ ಸಚಿವರು, ಬಿಜೆಪಿಯವರು ಕಾಂಗ್ರೆಸ್ ಬಾಗಿಲು ಬಡಿಯುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ ಯಾರು ಹೋಗ್ತಾರೆ ಒಂದೆರಡು ಹೆಸರು ಹೇಳಲಿ ನೋಡೋಣ. ಕಾಂಗ್ರೆಸ್ಸಿ ನವರು ದಿನಾ ಹೀಗೆ ಹೇಳುತ್ತಾರೆ. ನಾವು ಯಾರೂ ಕಾಂಗ್ರೆಸ್ ಬಾಗಿಲು ತಟ್ಟುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾರೂ ಬಿಜೆಪಿ ಬಿಡುವುದಿಲ್ಲ
ಬಿಜೆಪಿ ಬಿಟ್ಟು ಯಾವ ಶಾಸಕರೂ ಹೋಗುವುದಿಲ್ಲ. ಇನ್ನೂ ಒಂದೂವರೆ ವರ್ಷ ಅಧಿಕಾರ ಇದೆ, ಅಧಿಕಾರದಲ್ಲಿ ಇರ್ತೀವಿ. ಒಳ್ಳೆಯ ಸರಕಾರ ಕೊಡುತ್ತೇವೆ. ಮತ್ತೊಮ್ಮೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದ ಉಮೇಶ ಕತ್ತಿ, ವಲಸೆ ಬಂದವರು ವಾಪಸ್ ಹೊಗುವುದಿಲ್ಲ. ಎಲ್ಲರೂ ಬಿಜೆಪಿಯಲ್ಲಿಯೇ ಇರುತ್ತಾರೆ. ಬಂದವರು ಹೋದರೂ ಅವರು ತೆಗೆದುಕೊಳ್ಳುವುದಿಲ್ಲ. ನಾವು 120 ಜನ ಬಿಜೆಪಿ ಶಾಸಕರು ಗಟ್ಟಿಮುಟ್ಟಾಗಿದ್ದೇವೆ. ಸರಕಾರ ನಡೆಸುತ್ತಿದ್ದೇವೆ. ಒಳ್ಳೆಯ ಸರಕಾರ ಕೊಡುತ್ತಿದ್ದೇವೆ. ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದೇವೆ. ವಿಶೇಷವಾಗಿ ಸಿಎಂ ಬೊಮ್ಮಾಯಿ ಅವರು ಈ ಭಾಗಕ್ಕೆ ಸಂಭಂದಿಸಿದಂತೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಸಿಎಂ ಅಭಿವೃದ್ಧಿ ಮಾಡೇ ಮಾಡುತ್ತಾರೆ. ನಮಗೆಲ್ಲ ಜವಾಬ್ದಾರಿ ಕೊಟ್ಟಿದ್ದಾರೆ. ನಾವೆಲ್ಲ ಕೈ ಜೋಡಿಸಿ ಅಭಿವೃದ್ಧಿ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಮರಳಿ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಾರಕಿಹೊಳಿ ಬರ್ದರ್ಸ್ ಹಾಗೂ ಕತ್ತಿ ನಡುವೆ ಹೊಂದಾಣಿಕೆ ಇಲ್ಲದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬ್ರದರ್ಸ್ ಯಾರೂ ಇಲ್ಲ. ಎಲ್ಲರೂ ಬಿಜೆಪಿ ಶಾಸಕರಿದ್ದೇವೆ. ನನಗೂ ಒಬ್ಬ ತಮ್ಮ, ಅಣ್ಣ ಇದ್ದಾರೆ. ಇವರೆಲ್ಲ ಮನೆಲಿ ಇರಬಹುದು. ಆದರೆ, ಬಿಜೆಪಿ ನಮ್ಮ ಮಾತೃ ಪಕ್ಷ. ಅದನ್ನು ಎಲ್ಲರೂ ಕೂಡಿ ಕಟ್ಟಿ ಬೆಳೆಸಬೇಕು. ಮತ್ತೊಮ್ಮೆ ನಾವೆಲ್ಲರೂ ಸೇರಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದು ಅವರು ಹೇಳಿದರು.
ಪಡಿತರ ಅಂಗಡಿಗಳಲ್ಲಿ ಜೋಳ, ರಾಗಿ ವಿತರಣೆ ವಿಚಾರ
ಪಡಿತರ ಧಾನ್ಯ ವಿತರಣೆಯಲ್ಲಿ ಜೋಳ ಮತ್ತು ರಾಗಿ ವಿತರಿಸುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಡಿತರದಲ್ಲಿ ಜೋಳ ವಿತರಣೆ ಮಾಡಲು 6.50 ಲಕ್ಷ ಟನ್ ಜೋಳ ಬೇಕು. 6.50 ಲಕ್ಷ ಟನ್ ರಾಗಿ ಬೇಕು. ರಾಗಿ ಎರಡು ಲಕ್ಷ ಟನ್ ಕಲೆಕ್ಟ್ ಆಗಿದೆ. ಜೋಳ 70 ಸಾವಿರ ಟನ್ ಸಂಗ್ರಹಿಸಿದ್ದೇವೆ. ಬೇಕಾದಷ್ಟು ಪ್ರಮಾಣದಲ್ಲಿ ಜೋಳ ಮತ್ತು ರಾಗಿ ಸಂಗ್ರಹಿಸದ ಕಾರಣ ಹಂಚಿಕೆ ಆಗುತ್ತಿಲ್ಲ. ಹೀಗಾಗಿ ಅಕ್ಕಿಯನ್ನು ಕೊಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮುಂಬರುವ ದಿನಗಳಲ್ಲಿ ಕೇಂದ್ರ ಸರಕಾರದ ಬಳಿ ಹೋಗಿ ಎಂ ಎಸ್ ಪಿ ಬೆಲೆ ಹೆಚ್ಚಳ ಮಾಡಲು ಪ್ರಯತ್ನ ಮಾಡಲಾಗುವುದು. ಆ ಕೆಲಸ ಆದರೆ ಜೋಳದ ಖರೀದಿ ಮಾಡಿ ಹಂಚಿಕೆ ಮಾಡುವ ಕೆಲಸ ಮಾಡುತ್ತೇವೆ. ಈಗಾಗಲೇ ಪಡಿತರ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿ, ಒಂದು ಕೆಜಿ ರಾಗಿ, ಒಂದು ಕೆಜಿ ಜೋಳ ವಿತರಣೆ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಎಲ್ಲ ಕಾರ್ಯಚಟುವಟಿಕೆಗಳು ಸರಿಯಾಗಿ ನಡೆದರೆ ಹಂಚಿಕೆ ಮಾಡಲಾಗುವುದು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಪಡಿತರ ಅಂಗಡಿ, ಶಾಲೆಗಳಲ್ಲಿ ಉಪ್ಪಿನಕಾಯಿ ವಿತರಣೆ ತುರ್ತು ನಿರ್ಧಾರವಿಲ್ಲ
ಲಿಂಬೆ ಹಣ್ಣಿನ ಉಪ್ಪಿನ ಕಾಯಿಯನ್ನು ಶಾಲೆಗಳಿಗೆ ಕೊಡುವ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಶಿಕ್ಷಣ ಇಲಾಖೆ ಜೊತೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಎಷ್ಟು ಬೇಕಾಗಬೇಕು ಎಂಬುದರ ಪ್ರಮಾಣದ ಬಗ್ಗೆ ವಿಚಾರ ಮಾಡಬೇಕು, ಅದು ಬೇಗನೆ ಆಗುವುದಿಲ್ಲ. ಶಿಕ್ಷಣ ಇಲಾಖೆ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಪಡಿತರ ಅಂಗಡಿಗಳಲ್ಲಿ ಲಿಂಬೆ ಉಪ್ಪಿನಕಾಯಿ ವಿತರಿಸಲು ಆಗುವುದಿಲ್ಲ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ನೂತನ ಸಚಿವ ಉಮೇಶ ಕತ್ತಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಪಸ್ಥಿತರಿದ್ದರು.