ವಿಜಯಪುರ: ಭಾರತ ಇಂದು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಶಾಲಿ ಗಣತಂತ್ರ ರಾಷ್ಟ್ರವಾಗಿದೆ ಎಂದು ಅರಣ್ಯ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದರುವ ಕ್ರೀಡಾಂಗಣದಲ್ಲಿ ವಿಜಯಪುರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಗಣರಾಜೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಬಸವಾದಿ ಪ್ರಮಥರು ಹಾಗೂ ಕಂಪನಶೀಲ ವೈಚಾರಿಕತೆ ಮತ್ತು ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸರ್ವರ ವಿಕಾಸದ ಕನಸನ್ನು ಕಂಡ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್.ಅಂಬೇಡ್ಕರ್ ಅವರ ಮಾನವೀಯ ಅಂತಃಕರಣದಿಂದ ಒಡಮೂಡಿ ಬಂದಿರುವ ಭಾರತ ದೇಶ ಇಂದು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ಮತ್ತು ಪ್ರಭಾವಶಾಲಿ ಗಣತಂತ್ರ ರಾಷ್ಟ್ರವೆಂದು ಪರಿಗಣಿತವಾಗಿದೆ ಎಂದು ಹೇಳಿದರು.
ಸಂವಿಧಾನಾತ್ಮಕ ಮಾರ್ಗವೊಂದೇ ಸಾಮಾಜಿಕ ಅಸಮಾನತೆಯನ್ನು ತೊಲಗಿಸುವ ಸಾಧನವಾಗಿದ್ದು, ವ್ಯಕ್ತಿಗತ ಆತ್ಮ ಗೌರವಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಪ್ರತ್ಯೇಕ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುವ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಯತೆ ಮತ್ತು ನಿಷ್ಠೂರತೆಗಳ ಅನನ್ಯ ಮಿಶ್ರಣವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿರುತ್ತದೆ. ಇಂತಹ ಸಂವೇದನಾಶೀಲ ರಾಷ್ಟ್ರೀಯ ದಾಖಲೆಯನ್ನು ಭಾರತೀಯರಿಗೆ ಕೊಟ್ಟಿರುವ ಶ್ರೇಷ್ಠ ಮುತ್ಸದ್ದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಾಬಾಸಾಹೇಬ್ ರಾಮ್‍ಜಿ ಅಂಬೇಡ್ಕರ್ ಅವರಿಗೆ ಈ ವೇದಿಕೆಯ ಪರವಾಗಿ ಗೌರವಪೂರ್ವಕ ನಮನಗಳನ್ನು ಅರ್ಪಿಸಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಸ್ವತಂತ್ರ ಭಾರತವು ಕಳೆದ 75 ವರ್ಷಗಳ ಅವಧಿಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ, ರಾಜಕೀಯ, ಧಾರ್ಮಿಕ ಮತ್ತು ಸಾಹಿತ್ಯಿಕ ರಂಗಗಳಲ್ಲಿ ಸಾಧಿಸಿರುವ ಅದ್ಭುತ ಮತ್ತು ಅದ್ವಿತೀಯ ಕೊಡುಗೆಗಳ ವೈಭವವನ್ನು ಸಾಕ್ಷೀಕರಿಸುವ ಮಹೋನ್ನತ ಉದ್ದೇಶದಿಂದ ನಮ್ಮ ರಾಷ್ಟ್ರದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರ ನೇತೃತ್ವದ ಘನ ಕೇಂದ್ರ ಸರಕಾರವು “ಆಜಾದಿ ಕಾ ಅಮೃತ ಮಹೋತ್ಸವ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಅದರ ಅಂಗವಾಗಿ ಈಗಾಗಲೇ ರಾಷ್ಟ್ರಾದ್ಯಂತ ಹತ್ತು ಹಲವಾರು ವೈವಿಧ್ಯಮಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಅವರು ಹೇಳಿದರು.
ಗ್ರಾಮೀಣ ವಸತಿ ಯೋಜನೆಗಳಡಿ 2021-22 ನೇ ಆರ್ಥಿಕ ವರ್ಷದಲ್ಲಿ ವಿಜಯಪುರ ಜಿಲ್ಲೆಗೆ ಡಾ, ಬಿ. ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ 2023, ಹಾಗೂ ಬಸವ ವಸತಿ ಯೋಜನೆಯಡಿ 6217 ಹೀಗೆ ಒಟ್ಟು 8240 ಮನೆಗಳ ಗುರಿಯನ್ನು ಸರಕಾರದಿಂದ ನೀಡಲಾಗಿದ್ದು, ಗ್ರಾಮ ಸಭೆಗಳ ಮುಖಾಂತರ ಫಲಾನುಭವಿಗಳ ಆಯ್ಕೆ ಜಾರಿಯಲ್ಲಿದೆ. 2021-22 ನೇ ವರ್ಷದಲ್ಲಿ ಒಟ್ಟು 6504 ಎಮ್ ಪಿ ಐ ಸಿ ವಾರ್ಷಿಕ ಗುರಿ ನೀಡಲಾಗಿದ್ದು, ಇಲ್ಲಿಯವರೆಗೆ 4756 ಮನೆಗಳನ್ನು ಪೂರ್ಣಗೊಳಿಸಿ ಶೇಕಡಾ 73 ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ), ಬಬಲೇಶ್ವರ ಶಾಸಕ ಎಂ. ಬಿ, ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ, ಎಸ್ಪಿ ಎಚ್. ಡಿ. ಆನಂದ ಕುಮಾರ್, ಜಿ, ಪಂ, ಸಿಇಓ ಗೋವಿಂದ ರೆಡ್ಡಿ, ತೊರವಿ ಗ್ರಾ. ಪಂ. ಅಧ್ಯಕ್ಷೆ ಗಂಗವ್ವ ಬಾಗಾಯತ, ಮಹಿಳಾ ವಿವಿ ಕುಲಪತಿ ತುಳಸಿಮಾಲಾ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೋವಿಡ್ ಸಂದರ್ಭದಲ್ಲಿ ಅನುಪಮ ಸೇವೆ ಸಲ್ಲಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.