ಮಹಿಳಾ ವಿವಿಗೆ ಅಕ್ಕಮಹಾದೇವಿ ನಾಮಕರಣ ಮಾಡಿದ ಶ್ರೇಯಸ್ಸು ಎಂ. ಬಿ. ಪಾಟೀಲ ಮತ್ತು ಕಾಂಗ್ರೆಸ್ಸಿಗೆ ಸಲ್ಲಬೇಕು- ಬಿಜೆಪಿಗೆ ಅಲ್ಲ- ಸಚಿವ ಕಾರಜೋಳಗೆ ಮಾಜಿ ಶಾಸಕ ಆಲಗೂರ ಪ್ರತ್ಯುತ್ತರ

ವಿಜಯಪುರ: ಬಸವ ನಾಡು ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ನಾಮಕರಣ ಮಾಡಲು ಮಾಜಿ ಸಚಿವ ಎಂ. ಬಿ. ಪಾಟೀಲ ಮತ್ತು ಕಾಂಗ್ರೆಸ್ ಸರಕಾರ ಕಾರಣವೇ ಹೊರತು ಬಿಜೆಪಿ ಅಲ್ಲ ಎಂದು ಮಾಜಿ ಶಾಸಕ ಮತ್ತು ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಹೇಳಿದ್ದಾರೆ.

ವಿಜಯಪುದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ನಾಮಕರಣವನ್ನು ಬಿಜೆಪಿ ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ.  ಈ ವಿವಿ ನಾಮಕರಣ ಶ್ರೇಯಸ್ಸು ಬಿಜೆಪಿ ಸರಕಾರಕ್ಕೆ ಸಲ್ಲಬೇಕು ಎಂದು ಹೇಳಿದ್ದಾರೆ.  ಆದರೆ, ವಾಸ್ತವದಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿವಿಯನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಾಗಿ ನಾಮಕರಣ ಮಾಡಿರುವುದು ಕಾಂಗ್ರೆಸ್ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ,  ಮೂರು ಲಕ್ಷ ಮಹಿಳೆಯರ ಸಮ್ಮುಖದಲ್ಲಿ, ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅಂದಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲರ ಸಾರಥ್ಯದಲ್ಲಿ ನಾನಾ ಸ್ವಾಮೀಜಿಗಳ ಸಾನಿಧ್ಯದಲ್ಲಿ ಬೃಹತ್ ಸಮಾರಂಭ ಆಯೋಜನೆ ಮಾಡಿ ನಾಮಕರಣ ಮಾಡಲಾಗಿದೆ ಎಂದು ಹೇಳಿದರು.

 

ಈ ಸತ್ಯ ಗೊತ್ತಿದ್ದರೂ ಸಹ ಸಚಿವ ಗೋವಿಂದ ಕಾರಜೋಳ ಅವರು ಇದು ಬಿಜೆಪಿ ಸರಕಾರದ ಶ್ರೇಯಸ್ಸು ಎಂದು ಹೇಳಿಕೆ ನೀಡಿರುವುದು ಒಂದು ರೀತಿ ಹಾಸ್ಯದ ಸಂಗತಿಯೇ ಸರಿ.  ಇತ್ತೀಚೆಗೆ ಕಾರಜೋಳ ಅವರು ಯಾಕೆ ಈ ರೀತಿ ವರ್ತಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

1999 ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ವಿಜಯಪುರದಲ್ಲಿ ಮಹಿಳಾ ವಿವಿ ಸ್ಥಾಪನೆಯ ಘೋಷಣೆ ಮಾಡಿದ್ದರು,  ನಂತರ 2003ರಲ್ಲಿ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಈ ವಿಶ್ವವಿದ್ಯಾಲಯವನ್ನು ಲೋಕಾರ್ಪಣೆ ಮಾಡಿದ್ದರು,  ಅಂದಿನ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ ಮೂಲ ಸೌಕರ್ಯ ಒದಗಿಸಿದ್ದರು.  ಹೀಗೆ ಮಹಿಳಾ ವಿವಿಗೆ ಅನೇಕ ಕೊಡುಗೆ ನೀಡಿರುವ ಶ್ರೇಯಸ್ಸು ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಹೊರತು ಬಿಜೆಪಿಗೆ ಇಲ್ಲ ಎಂದು ಆಲಗೂರ ಹೇಳಿದರು.

ಮಹಿಳಾ ವಿವಿಗೆ ನಾಮಕರಣಕ್ಕೆ ಸಂಬಂಧಿಸಿದಂತೆ 2016 ರಂದು ವಿಶೇಷ ಸಭೆ ನಡೆದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರು ಅಕ್ಕ ಮಹಾದೇವಿ ಹೆಸರಿಡಲು ಆಗ್ರಹಿಸಿದ್ದರು.  ಆಗ ಎಂ. ಬಿ. ಪಾಟೀಲ ಅವರು ವಿವಿಗೆ ಅಕ್ಕಮಹಾದೇವಿ ಹೆಸರಿಡುವ ವಾಗ್ದಾನ ಮಾಡಿದ್ದರು.  ಸಿದ್ದರಾಮಯ್ಯ ಅವರ ಮನವೊಲಿಸಿ ಒಪ್ಪಿಸಿದ್ದರು.  ನಂತರ ಗೆಜೆಟ್ ಅಧಿಸೂಚನೆ ಹೊರಡಿಸಲಾಯಿತು.  2017ರಲ್ಲಿ ಮಹಿಳಾ ವಿವಿಗೆ ನಾಡಿನ ಮಠಾಧೀಶರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಅಕ್ಕಮಹಾದೇವಿ ಹೆಸರಿಡಲಾಯಿತು ಎಂದು ತಿಳಿಸಿದರು ಅವರು ಈ ಕುರಿತು ದಾಖಲೆ ಪ್ರದರ್ಶಿಸಿದರು.

ಹಿರಿಯರಾದ ಸಚಿವ ಗೋವಿಂದ ಕಾರಜೋಳರು ವಿನಾಕಾರಣ ಕಾಂಗ್ರೆಸ್ ಪಕ್ಷಕ್ಕೆ ಟೀಕಿಸುವ ಚಟಕ್ಕೆ ಅಂಟಿಕೊಂಡಂತಿದೆ,  ನಮ್ಮ ಸಾಧನಗೆ ಅವರ ಲೇಬಲ್ ಅಂಟಿಸಿಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ಸಿಸಿದ ಅವರು, ವಿಜಯಪುರದಲ್ಲಿ ವಿಮಾನ ನಿಲ್ದಾಣ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ.  ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಹೊರತು ವಿಮಾನ ನಿಲ್ದಾಣ ಸಹ ನಮ್ಮ ಅವಧಿಯಲ್ಲಿ ಆಗಿದೆ ಎಂದು ನಾವು ಹೇಳುವುದಿಲ್ಲ.  ಆ ರೀತಿ ಹೇಳಿದರೆ ಅದು ಮೂರ್ಖತನವೂ ಆಗುತ್ತದೆ.  ಆದರೆ, ಸಚಿವ ಕಾರಜೋಳ ಅವರು ವಿನಾಕಾರಣ ಕಾಂಗ್ರೆಸ್ ಟೀಕೆ ಮಾಡುವುದನ್ನು ಕೈ ಬಿಡಬೇಕು ಎಂದು ಪ್ರೊ. ರಾಜು ಆಲಗೂರ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ಗಂಗಾಧರ ಸಂಬಣ್ಣಿ, ಸುರೇಶ ಗೊಣಸಗಿ, ಸುಭಾಷ ಕಾಲೇಭಾಗ, ತಮ್ಮಣ್ಣ ಮೇಲಿನಕೇರಿ, ವಸಂತ ಹೊನಮೋಡೆ, ಸಾಹೇಬಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌