ವಿಜಯಪುರ: ಮಹಿಳೆಯರು ಸದಾ ತಂತಮ್ಮ ದಿನನಿತ್ಯದ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಬಹುತೇಕ ಹೆಂಗಸರು ಮನೆ ಕೆಲಸ, ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಅವರ ಇಡೀ ದಿನ ಕಳೆದು ಬಿಡುತ್ತದೆ. ಇನ್ನೂ ಕೆಲವರು ಉದ್ಯೋಗ ಮಾಡುತ್ತ ಕುಟುಂಬ ನಿರ್ವಹಣೆ ಮಾಡುತ್ತಾರೆ.
ವಿಶ್ರಾಂತಿ ಮತ್ತು ಇತರ ಆರೋಗ್ಯವರ್ಧಕ ಕ್ರಿಯಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳವವರು ಇರುತ್ತಾರೆ. ಆದರೆ, ಅಂಥ ಹೆಂಗಳೆಯರ ಸಂಖ್ಯೆ ತೀರ ಕಡಿಮೆ. ಹೋಗೆ ಸದಾ ಒಂದಿಲ್ಲೊಂದು ಕೆಲಸಗಳಲ್ಲಿ ವ್ಯಸ್ಥರಾಗಿರುವ ವನಿತೆಯರು ಗಣರಾಜ್ಯೋತ್ಸವದ ದಿನ ಸಂಜೆ ಸ್ವಲ್ಪ ರಿಲ್ಯಾಕ್ಸ್ ಆದರು. ಬಸವ ನಾಡು ವಿಜಯಪುರ ನಗರದಲ್ಲಿ ಆದಿತ್ಯನಿಗೆ ನಮಸ್ಕರಿರುವ ಮೂಲಕ ಆರೋಗ್ಯ ಮತ್ತು ದೇಶ ಸೇವೆಗೆ ಒಂದಷ್ಟು ಸಮಯ ಮೀಸಲಿಟ್ಟರು. ಗುಮ್ಮಟ ನಗರಿ ವಿಜಯಪುರದಲ್ಲಿ ಗಣರಾಜ್ಯೋತ್ಸವದ ದಿನ ಸಂಜೆ ಮಹಿಳೆಯರು ಪಾಲ್ಗೊಂಡ ಕೋಟಿ ಸೂರ್ಯ ನಮಸ್ಕಾರ ಗಮನ ಸೆಳೆಯಿತು.
ಕೊರೋನಾ 3ನೇ ಅಲೆ ಈಗ ಹೆಚ್ಚಾಗಿದೆ. ಇಂಥ ಪರಿಸ್ಥಿತಿಯಲ್ಲಿ ಗಣರಾಜ್ಯೋತ್ಸವ ಆಚರಣೆಯೂ ಸಂಭ್ರಮದಿಂದ ನಡೆದಿದೆ. ಇಂಥ ಮಹಾಮಾರಿ ಆತಂಕದಲ್ಲಿಏ ಸ್ವಾತಂತ್ರ್ಯ ದಿನದ 75 ನೇ ಅಮೃತ ಮಹೋತ್ಸವದ ಅಂಗವಾಗಿ ನಾನಾ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಬಾರಿ ಗಣರಾಜ್ಯೋತ್ಸವದ ಚುಮುಚುಮು ಚಳಿಯ ಮಧ್ಯೆ ವಿಜಯಪುರ ನಗರದಲ್ಲಿ ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಗಣರಾಜ್ಯೋತ್ಸವದ ಆಚರಣೆಯ ಜೊತೆಗೆ 75 ನೆಯ ಸ್ವತಂತ್ರ ದಿವಸದ ಅಮೃತ ಮಹೋತ್ಸವದ ಅಂಗವಾಗಿ 75 ಕೋಟಿ ಸೂರ್ಯ ನಮಸ್ಕಾರ ಅಭಿಯಾನವನ್ನು ನಡೆಯಿತು. ಇದರ ಅಂಗವಾಗಿ ಐದು ಬಾರಿ ಸೂರ್ಯ ನಮಸ್ಕಾರ ಮಾಡಿ ತಮ್ಮ ಸೇವೆಯನ್ನು ದೇಶಕ್ಕಾಗಿ ಸಮರ್ಪಿಸುವ ದೃಷ್ಟಿಯಿಂದ ನಗರದ ಗ್ಯಾಂಗ್ ಬಾವಡಿಯ ಅದೃಷ್ಟ ಲಕ್ಷ್ಮಿ ದೇವಸ್ಥಾನದಲ್ಲಿ ನೂರಾರು ಮಹಿಳೆಯರು ಬಿಳಿ ಸಮವಸ್ತ್ರ ಹಾಗೂ ಮಾಸ್ಕ್ ಧರಿಸಿಕೊಂಡು ಸೂರ್ಯ ನಮಸ್ಕಾರದಲ್ಲಿ ಭಾಗಿಯಾದರು.
ಯೋಗ ಋಷಿ ರಾಮದೇವ ಬಾಬಾ ಜೀ ಅವರ ಜೊತೆ ನೇರ ಪ್ರಸಾರದಲ್ಲಿ ಸೂರ್ಯ ನಮಸ್ಕಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರು ದೇಶಭಕ್ತಿ ಮೆರೆದರು. ಈ ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ವಿಜಯಪುರ ನಗರದ ನಾನಾ ಬಡಾವಣೆಗಳ ಮಹಿಳೆಯರು ಭಾಗಿಯಾಗಿದ್ದರು. ಸಂಗೀತದೊಂದಿಗೆ ಸೂರ್ಯ ನಮಸ್ಕಾರ ಮಾಡಿದರು.
ಈ ಸೂರ್ಯ ನಮಸ್ಕಾರವು ಯೋಗಾಸನದ 10 ಭಂಗಿಗಳನ್ನು ಒಳಗೊಂಡಿತ್ತು. ಅಲ್ಲದೇ, ಕುಟುಂಬಗಳ ಶಕ್ತಿಯಾಗಿರುವ ಮಹಿಳೆಯರ ಆರೋಗ್ಯ ವೃದ್ದಿ, ಮನೋಬಲ ಹೆಚ್ಚಿಸಲು ಸೂರ್ಯ ನಮಸ್ಕಾರ ಮಾಡಿಸಲಾಯಿತು.
ಕೊರೋನಾಗೆ ಯೋಗ ರಾಮಬಾಣವಾಗಿದೆ. ನಾವು ಪ್ರತಿನಿತ್ಯ ಯೋಗ ಮಾಡುತ್ತಿದ್ದೇವೆ. ಅದರಿಂದ ನಮಗೆ ಕೊರೊನಾ ಸೋಂಕು ಬಂದರೂ ಕೂಡ ಯಾವುದೇ ತೊಂದರೆಯಾಗಿಲ್ಲ. ಆದುದರಿಂದ ನಾವು ಯಾವಾಗಲೂ ಯೋಗ ಮಾಡುತ್ತಿದ್ದೇವೆ. ಇಂದು ನಾನಾ ಕಾಲನಿಗಳ ಮಹಿಳೆಯರ ಜೊತೆ ಯೋಗ ಮಾಡಿ ಖುಷಿ ಆಗಿದೆ ಎನ್ನುತ್ತಾರೆ ಈ ಸೂರ್ಯ ನಮಸ್ಕಾರದಲ್ಲಿ ಭಾಗಿಯಾದ ಸಾವಿತ್ರಿ ಮಠ ಮತ್ತು ಗಿರಿಜಾ ಕೋಹಳ್ಳಿ.
ಈ ಬಾರಿ ಗಣರಾಜ್ಯೋತ್ಸವ ದಿನದಂದು ಮಹಿಳೆಯರು ಬಸವ ನಾಡಿನಲ್ಲಿ ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಿ ರಿಲ್ಯಾಕ್ಸ್ ಮೂಢ್ ನಲ್ಲಿ ಯೋಗಾ ಮಾಡುವ ಮೂಲಕ ಆರೋಗ್ಯ ವೃದ್ದಿಯ ಜೊತೆಗೆ ಮನೊಬಲ ವೃದ್ದಿಗೆ ಪಣತೊಟ್ಟರು.