ಬಸವ ನಾಡಿನಲ್ಲಿ ಜನಮೆಚ್ಚುವ ಕಾಯಕದ ಮೂಲಕ ಸ್ವಚ್ಛತೆಯ ಕಂಪು ಪಸರಿಸುತ್ತಿರುವ ಗಾನಯೋಗಿ ಸಂಘದ ಯುವಕರು

ವಿಜಯಪುರ: ಕಳೆದ ಸುಮಾರು ಒಂದು ವರ್ಷಗಳಿಂದ ಯುವಕರ ತಂಡವೊಂದು ಬಸವ ನಾಡು ವಿಜಯಪುರದಲ್ಲಿ ಗಮನ ಸೆಳೆಯುವ ಕೆಲಸ ಮಾಡುವ ಮೂಲಕ ಮನೆ ಮಾತಾಗುತ್ತಿದೆ.  ಮನೆಯಲ್ಲಿಯೇ ತಂತಮ್ಮ ಕೆಲಸ ಮಾಡುವ ಜನರು ಕಡಿಮೆ ಇರುವ ಇಂದಿನ ದಿನಗಳಲ್ಲಿ ಈ ಯುವಕರ ತಂಡ ಮಹಾನಗರ ಪಾಲಿಕೆ ಮಾಡಬೇಕಾದ ಕಾರ್ಯವನ್ನು ಸ್ವಂತ ಖರ್ಚಿನಲ್ಲಿ ಮಾಡುತ್ತ ನಗರದ ಸೌಂದರ್ಯ ಹೆಚ್ಚಾಗಲು ಕಾರಣವಾಗುತ್ತಿದೆ.

‘ಕಳೆದ ವರ್ಷ ಪಾಳು ಬಿದ್ದಿದ್ದ ಆದಿಲ್‌ ಶಾಹಿ ಕಾಲದ ಪುರಾತನ ಭಾವಿಯನ್ನು ಪ್ರಕಾಶ ಆರ್. ಕೆ. ನೇತೃತ್ವದ ಗಾಯನೋಗಿ ಸಂಘದ ಯುವಕರ ತಂಡ ಸ್ವಚ್ಛಗೊಳಿಸಿ ಇಲ್ಲಿ ಇಷ್ಟೋಂದು ಸುಂದರವಾದ ಭಾವಿ ಇದೆಯಾ ಎಂದು ಆ ಬಡಾವಣೆ ಜನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಕೆಲಸ ಮಾಡಿತ್ತು.  ನಂತರ ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಸಂಕಿರ್ಣದ ಪ್ರವೇಶ ದ್ವಾರಗಳನ್ನು ಸ್ವಚ್ಛಗೊಳಿಸಿ ಸುಣ್ಣ, ಬಣ್ಣ ಬಳಿದು ಅದಕ್ಕೊಂದು ಅಂದದ ರೂಪ ನೀಡಿತ್ತು.

ಈಗ ಇದೇ ತಂಡ ಮತ್ತೋಂದು ಪುಣ್ಯದ ಕೆಲಸ ಮಾಡಿದ್ದು, ಯಾರೂ ಮಾಡದ ಮತ್ತು ಯೋಚಿಸದ ಕೆಲಸದ ಮೂಲಕ ಗಮನ ಸೆಳೆದಿದೆ.  ಪ್ರಕಾಶ್ ಆರ್. ಕೆ. ಎಂಬ ಯುವಕ ನಗೆ ಚಟಾಕಿಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಸುರ ಮಾಡಿದ್ದಾನೆ.  ಸಹಸ್ರಾರು ಹಿಂಬಾಲಕರನ್ನು ಗಳಿಸಿದ್ದಾನೆ.  ಈಗ ಕೇವಲ ತಾನೊಬ್ಬನೇ ಹೆಸರು ಮಾಡಿದರೆ ಸಾಲು ಎಂದುಕೊಂಡು ಮತ್ತಷ್ಟು ಜನರನ್ನು ಸೋಶಿಯಲ್ ಮೀಡಿಯಾಕ್ಕೆ ಪರಿಚಯಿಸುತ್ತಲೇ ಇದ್ದಾನೆ.  ಕೇವಲ ಸೋಶಿಯಲ್ ಮಿಡಿಯಾದಲ್ಲಿ ಕಾಮಿಡಿ ಅಲ್ಲದೇ, ಸಾಮಾಜಿಕ ಕಳಕಳಿಯುಳ್ಳ ವಿಡಿಯೋ ಮಾಡುತ್ತಾ ತನ್ನ ಸಮಾನ ಮನಸ್ಕ ಯುವಕರ ತಂಡ ಕಟ್ಟಿಕೊಂಡು ಐತಿಹಾಸಿಕ ನಗರಿ ವಿಜಯಪುರವನ್ನು ಸುಂದರ ನಗರವನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿದ್ದಾನೆ.

ಈತ ಆರಂಭಿಸಿರುವ ಗಾನಯೋಗಿ ಸಂಘ ಎಂಬ ಹೆಸರಿನ ಸಂಘಟನೆಯಲ್ಲಿರುವ ಯುವಕರು ತಾವು ಸ್ವಂತ ದುಡಿದ ಹಣದಲ್ಲಿ ವಿಜಯಪುರ ಮಹಾನಗರ ಪಾಲಿಕೆ ಮಾಡಬೇಕಾದ ಕಾರ್ಯ ತಾವು ಮಾಡುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ.

ಟಿ ಶರ್ಟ್ ಧರಿಸಿ, ಕೊರಳಿಗೆ ಐಡಿ ಕಾರ್ಡ್ ಹಾಕಿಕೊಂಡು ಪಕ್ಕಾ ಕೂಲಿ ಕಾರ್ಮಿಕರಂತೆ ಕಾರ್ಯ ಮಾಡುತ್ತಿರುವ ಇವರನ್ನು ಸೋಶಿಯಲ್ ಮಿಡಿಯಾದಲ್ಲಿ ರಾಜ್ಯದ ಬಹುತೇ ಜನರು ನೋಡಿದ್ದಾರೆ.  ಇವರ ತಂಡ ಪ್ರತಿ ವಾರಕ್ಕೊಮ್ಮೆ ಎಲ್ಲರೂ ಒಂದೆಡೆ ಸೇರಿ ಬಸ್ ನಿಲ್ದಾಣ, ಮಾರುಕಟ್ಟೆ, ಬಾವಿಗಳ ಸ್ವಚ್ಚತಾ ಕಾರ್ಯ ನಡೆಸುತ್ತಾರೆ.  ಗುಮ್ಮಟ ನಗರಿ ವಿಜಯಪುರವನ್ನು ಸುಂದರಗೊಳಿಸಲು ಪಣತೊಟ್ಟಿದ್ದಾರೆ.

 

ಈ ಬಾರಿ ಈ ಯುವಕರು ವಿಜಯಪುರ ನಗರದ ಸ್ಟೇಶನ್ ರಸ್ತೆಯಲ್ಲಿಯರುವ ದರಬಾರ ಹೈಸ್ಕೂಲ್ ಹತ್ತಿರ ಗಲೀಜಿನಿಂದ ಕೂಡಿದ್ದ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ಅದಕ್ಕೊಂದು ಅಂದದ ರೂಪ ನೀಡಿದ್ದಾರೆ.  ಅಚ್ಚುಕಟ್ಟಾಗಿ ಪೇಂಟ್ ಮಾಡಿ ಮೊದಲು ಈ ಬಸ್ ತಂಗುದಾಣವನ್ನು ನೋಡಿದವರಿಗೆ ದಂಗು ಬಡಿಯುವಂತೆ ಮಾಡಿದ್ದಾರೆ.

ವಿಜಯಪುರ ನಗರದ ನಗರದ ದರಬಾರ ಹೈಸ್ಕೂಲ್ ಬಸ್‍ಸ್ಟಾಪ್ ಬಳಿ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೊತ್ತು ಜನಜಂಗುಳಿ ಹೆಚ್ಚಾಗಿರುತ್ತದೆ.  ಈ ಶಾಲೆ ಮತ್ತು ಕಾಲೇಜಿಗೆ ಬರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪ್ರತಿನಿತ್ಯ ಇಲ್ಲಿಯೇ ನಿಂತುಕೊಂಡು ಬಸ್ಸಿನಿಂದ ಹತ್ತುವುದು ಮತ್ತು ಇಳಿಯುವುದನ್ನು ಮಾಡುತ್ತಾರೆ.  ಆದರೆ, ನಿರ್ವಹಣೆ ಇಲ್ಲದ ಈ ಬಸ್ ತಂಗುದಾಣ ಮಲೀನಗೊಂಡಿತ್ತು.  ಎಲ್ಲೆಂದರಲ್ಲಿ ಗುಟ್ಕಾ, ತಂಬಾಕು, ಸಿಗರೇಟು ಹಾಗೂ ಕುಡುಕರ ಬೀಸಾಡಿದ ತ್ಯಾಜ್ಯ ವಸ್ತುಗಳ ತಾಣವಾಗಿತ್ತು.  ಇದನ್ನು ಗಮನಿಸಿದ ಗಾನಯೋಗಿ ಸಂಘದ ಯುವಕರು ಇಲ್ಲಿಗೆ ಬರುವ ಶಾಲಾ ಮಕ್ಕಳ ಮೇಲೆ ಈ ಪರಿಸರ ದುಷ್ಪರಿಣಾಮ ಬೀರಬಾರದು ಎಂದು ಯೋಚಿಸಿ ಮೊದಲಿಗೆ ಅದನ್ನು ಸ್ವಚ್ಛಗೊಳಿಸಿದ್ದಾರೆ.  ನಂತರ ಅದಕ್ಕೆ ಬಣ್ಣ ಹಚ್ಚಿ ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮದ ನಾಯಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಎಂಬ ಶಿರ್ಷಿಕೆಯನ್ನಿಟ್ಟು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸುಮಾರು 50ಕ್ಕೂ ಹೆಚ್ಚು ಮಹನೀಯರ ಹೆಸರುಗಳನ್ನು ಗೊಡೆಯ ಮೇಲೆ ಬರೆದಿದ್ದಾರೆ.

ಈ ಮೂಲಕ ಇತಿಹಾಸದ ಬಗ್ಗೆಯೂ ಮಕ್ಕಳಲ್ಲಿ ಸದಸಭಿರುಚಿ ಬೆಳೆಯಸುವ ಪ್ರಯತ್ನ ಮಾಡಿದ್ದಾರೆ.  ಈ ಸಂದರ್ಭದಲ್ಲಿ ಸಂತೋಷ ಚವ್ಹಾಣ, ಬಾಹುಬಲಿ ಶಿವಣ್ಣನವರ, ರವಿ ರತ್ನಾಕರ, ರಾಜಕುಮಾರ ಹೊಸಟ್ಟಿ, ವಿಕಾಸ ಕಂಬಾಗಿ, ಸಚೀನ ವಾಲಿಕಾರ, ಮಹೇಶ ಕುಂಬಾರ, ಆನಂದ ಹೊನವಾಡ, ಪ್ರಮೋದ ಚವ್ಹಾಣ, ರೇವಣಸಿದ್ದಯ್ಯ ಹಿರೇಮಠ, ವಿಠ್ಠಲ ಗುರುವಿನ, ಶ್ರೀಶೈಲ ಕುಮಸಗಿ, ವಿರೇಶ ಸೊನ್ನಲಿಗಿ, ಶ್ರೀಶೈಲ ಜುಮನಾಳ, ಸಚೀನ ಚವ್ಹಾಣ, ರಾಹುಲ ಎಮ್. ಬಾಬು ಮುಂತಾದವರು ಪಾಲ್ಗೋಂಡು ಈ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ.

 

ಸರಕಾರ ಮಾಡಬೇಕಾದ ಕಾರ್ಯವನ್ನು ತಮ್ಮ ಸ್ವಂತ ಹಣದಿಂದ ಮಾಡುವ ಮೂಲಕ ಬಸವ ನಾಡಿನ ಗಾನಯೋಗಿ ಸಂಘದ ಯುವಕರ ತಂಡ ಮಾಡುವ ಮೂಲಕ ವಿಜಯಪುರದ ಜನತೆಯ ಮನದಲ್ಲಿ ನೆಲೆಯೂರುವ ಕೆಲಸವನ್ನು ಮಾಡುತ್ತಿರುವುದು ಪ್ರಶಂಸನಾರ್ಹವಾಗಿದೆ.  ಸರಕಾರ ಇಂಥ ಸಂಘಟನೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ.

Leave a Reply

ಹೊಸ ಪೋಸ್ಟ್‌