ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ನಾಯಕರು ಮನಬಂದಂತೆ ಕೊಡುವ ಹೇಳಿಕೆಗಳಿಂದ ಉತ್ತಮ ಆಡಳಿತಕ್ಕೆ ಸಮಸ್ಯೆಯಾಗುತ್ತಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 30 ತಿಂಗಳಾಯಿತು. ಮೊದಲಿನ 24 ತಿಂಗಳು ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಅವರ ಕಾಲದಲ್ಲೂ ಪಕ್ಷದ ನಾಯಕರು ಮನಬಂದಂತೆ ಹೇಳಿಕೆ ನೀಡಿದ ಪರಿಣಾಮ ಅನೇಕ ಸಮಸ್ಯೆ ಉಂಟಾಗಿವೆ. ಅದರಲ್ಲೂ ಸಂಪುಟ ವಿಸ್ತರಣೆ ಕುರಿತಾದ ಹೇಳಿಕೆಗಳು ಪಕ್ಷದಲ್ಲಿ ಭಿನ್ನಮತವಿದೆಯೇ ಎಂಬ ಶಂಕೆಗೆ ಕಾರಣವಾಗಿವೆ. ಈಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಆರು ತಿಂಗಳು ಕಳೆದಿವೆ. ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಆದರೆ ಅವರನ್ನು ಬದಲಾಯಿಸುವ, ಮತ್ತು ಸಂಪುಟ ವಿಸ್ತರಣೆ ಮಾಡದಿದ್ದರೆ ಪಕ್ಷಕ್ಕೆ ಧಕ್ಕೆಯಾಗಲಿದೆ ಎಂದು ಹಲವು ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಅಷ್ಟೆ ಅಲ್ಲ, ಹಲವರು ಪಕ್ಷಾಂತರ ಮಾಡಲಿದ್ದಾರೆ ಎಂದೂ ಹೇಳುತ್ತಿದ್ದಾರೆ. ಹಿಂದೆಯೂ ಅನೇಕ ಬಾರಿ ಇಂಥ ಹೇಳಿಕೆಯನ್ನು ಕೊಡಬಾರದು ಎಂದು ಬಿಜೆಪಿ ವರಿಷ್ಠರು ಎಚ್ಚರಿಕೆ ಕೊಟ್ಟಿದ್ದರೂ ಇನ್ನೂ ಆ ಚಾಳಿ ಹೋಗಿಲ್ಲ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂದು ಸಂಸದರು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಮುಂದಿನ ಚುನಾವಣೆಗೆ ಸಿದ್ಧತೆಗೂ ಸಮಸ್ಯೆಯಾಗುತ್ತದೆ. ಕಾರ್ಯಕರ್ತರಲ್ಲಿ ಅಸಮಾಧಾನ ಮೂಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ವರಿಷ್ಠರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪಕ್ಷದ ಯಾವ ನಾಯಕರೂ ಇಂಥ ಚರ್ಚಾತ್ಮಕ ಮತ್ತು ಸಮಸ್ಯೆ ಸೃಷ್ಟಿಸುವ ಹೇಳಿಕೆಗಳನ್ನು ಕೊಡದಂತೆ ಕಟ್ಟಪ್ಪಣೆ ಹೊರಡಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಉತ್ತಮ ಆಡಳಿತ ನಿಡುತ್ತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಡುತ್ತಿದ್ದಾರೆ. ಎರಡೂ ಕಡೆ ಒಂದೇ ಪಕ್ಷದ ಸರಕಾರ ಇರುವದು ಪ್ಲಸ್ ಪಾಯಿಂಟ. ಈ ವಿಚಾರಗಳು ಮತದಾರರ ಮನ ಗೆಲ್ಲಲು ಪ್ರಮುಖ ಕಾರಣವಾಗಿವೆ. ಇದೇ ವಾತಾವರಣ ಮುಂದುವರೆಯಬೇಕಾದರೆ ಪಕ್ಷ ಮತ್ತು ಆಡಳಿತ ಕುರಿತು ನಾಯಕರ ವಿಭಿನ್ನ ಹೇಳಿಕೆಗಳು ಹೊರಬರದಂತೆ ನೋಡಿಕೊಳ್ಳುವದು ವರಿಷ್ಠರ ಕರ್ತವ್ಯ ಎಂದು ರಮೇಶ ಜಿಗಜಿಣಗಿ ಅಭಿಪ್ರಾಯ ಪಟ್ಟಿದ್ದಾರೆ.