ನಿರಾಣಿಯನ್ನು ಬಿಜೆಪಿಗೆ ತಂದಿದ್ದೆ ನಾನು- ಸವದಿ ಕೆಳಮಟ್ಟದ ರಾಜಕಾರಣಿಯಲ್ಲ- ಸಿದ್ಧರಾಮಯ್ಯ ಕಾಂಗ್ರೆಸ್ಸಿನಲ್ಲಿ ಕೊನೆ ದಿನಗನ್ನು ಎಣಿಸುತ್ತಿದ್ದಾರೆ- ಯತ್ನಾಳ

ವಿಜಯಪುರ: ನಿರಾಣಿಯನ್ನು ಬಿಜೆಪಿಗೆ ತಂದು ಟಿಕೆಟ್ ಕೊಟ್ಟಿದ್ದೆ ನಾನು.  ಅವನ ಜೊತೆ ನನ್ನನ್ನು ಯಾಕೆ ಹೋಲಿಕೆ ಮಾಡ್ತೀರಾ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠಗಳ ವಿಚಾರದಲ್ಲಿ ಯತ್ನಾಳ ವರ್ಸಸ್ ನಿರಾಣಿ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾ ಯಾವ ನಿರಾಣಿಗೂ ಅಂಜಿ ರಾಜಕಾರಣ ಮಾಡುವವನಲ್ಲ.  ನಿರಾಣಿಯನ್ನು ಬಿಜೆಪಿಗೆ ತಂದು ಟಿಕೆಟ್ ನೀಡಿದವನೇ ನಾನು.  ನನ್ನನ್ನು ನಿರಾಣಿ ಜೊತೆಗೆ ಯಾಕೆ ಹೋಲಿಕೆ ಮಾಡುತ್ತೀರಿ ಎಂದು ಮರು ಪ್ರಶ್ನಿಸಿದರು.

ಲಕ್ಷ್ಮಣ ಸವದಿ ಕೆಳಮಟ್ಟದ ರಾಜಕಾರಣಿಯಲ್ಲ

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಲಖನ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ಲಕ್ಷ್ಮಣ ಸವದಿ ಅವರ ಮೇಲೆ ಪಕ್ಷದ ಋಣವಿದೆ.  ಅವರು ಸೋತರೂ ಅವರನ್ನು ವಿಧಾನ ಪರಿಷತ ಸದಸ್ಯರನ್ನಾಗಿ ಮಾಡಿ ಡಿಸಿಎಂ ಮಾಡಿದ್ದಾರೆ.  ಅವರು ಬಹಳ ಒಳ್ಳೆಯವರಿದ್ದಾರೆ.  ಅವರು ಪಕ್ಷ ತೊರೆಯುವುದಿಲ್ಲ.  ಈಗ ಒಂದು ವರ್ಷ ಚುನಾವಣೆ ಪರ್ವವಿದೆ.  ಈ ಸಂದರ್ಭದಲ್ಲಿ ಹೀಗೆ ಸಂಶಯ, ಅಪಪ್ರಚಾರಗಳು ಗಾಸಿಪ್ ಗಳು ನಡೆಯುತ್ತಿರುತ್ತವೆ.  ಲಕ್ಷ್ಮಣ ಸವದಿ ಅಷ್ಟು ಕೆಳಮಟ್ಟಕ್ಕೆ ಹೋಗುವ ರಾಜಕಾರಣಿಯಲ್ಲ ಎಂಬುದು ನನ್ನ ಭಾವನೆಯಾಗಿದೆ ಎಂದು ತಿಳಿಸಿದರು.

ಸಿದ್ಧರಾಮಯ್ಯ ಮುಗಿಸಲು ಮೇಕೆದಾಟು ಪಾದಯಾತ್ರೆ

ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಅವರ ಜೊತೆ ಅವರ ಮನೆಯವರೇ ಟಚ್ ನಲ್ಲಿಲ್ಲ.  ಬೇರೆಯವರು ಹೇಗೆ ಸಂಪರ್ಕಕ್ಕೆ ಬರಲು ಸಾಧ್ಯ ಎಂದು ಹೇಳಿದರು.

ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಕಾಂಗ್ರೆಸ್ಸಿನಲ್ಲಿ ಅಂತಿಮ ದಿನಗಳನ್ನು ಎಣಿಸುತ್ತಿದ್ದಾರೆ.  ಡಿ. ಕೆ. ಶಿವಕುಮಾರ ಮತ್ತು ಸಿದ್ಧರಾಮಯ್ಯ ಮಧ್ಯೆ ಜಗಳ ಆರಂಭವಾಗಿದೆ.  ಅವರಲ್ಲಿ ಒಬ್ಬರು ಬಿಜೆಪಿಗೆ ಬಂದರೂ ಅಚ್ಚರಿಯಿಲ್ಲ.  ಡಿ. ಕೆ. ಶಿವಕುಮಾರ ಮೊನ್ನೆ ಸಿದ್ಧರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಪಾದಯಾತ್ರೆ ಮಾಡಿದ್ದಾರೆ.  ಆ ಪಾದಯಾತ್ರೆಯಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಎಲ್ಲರೂ ಘೋಷಣೆ ಹಾಕಿದ್ದಾರೆ.  ಅಲ್ಲಿ ಸಿದ್ಧರಾಮಯ್ಯ ಅವರ ಹೆಸರನ್ನು ಯಾರೂ ಪ್ರಸ್ತಾಪಿಸಲಿಲ್ಲ.  ಸಿದ್ಧರಾಮಯ್ಯ ಅವರನ್ನು ಮುಗಿಸಲು ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ.  ಅಲ್ಲಿ ಮೇಕೆ ದಾಟಲಿಲ್ಲ.  ಏಕೆಂದರೆ, ಅಲ್ಲಿ ಟಗರು ಇತ್ತು.  ಟಗರಿನಿಂದ ಮೇಕೆ ದಾಟಲು ಆಗಲಿಲ್ಲ.  ಸಿದ್ಧರಾಮಯ್ಯ ಅವರಿಗೆ ಕಾಂಗ್ರೆಸ್ಸಿನಲ್ಲಿ ಭವಿಷ್ಯ ಅಂಧಕಾರದತ್ತ ಹೋಗುತ್ತಿದೆ.  ಅವರು ಕಾಂಗ್ರೆಸ್ ಬಿಡಲಿದ್ದಾರೆ.  ಅವರು ಡೋಲಾಯಮಾನ ಪರಿಸ್ಥಿತಿಯಲ್ಲಿದ್ದಾರೆ.  ಸಿದ್ಧರಾಮಯ್ಯ ಹಿರಿಯ ನಾಯಕರು.  ಕಾಂಗ್ರೆಸ್ಸಿನಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ.  ಅವರು ಬಿಜೆಪಿಗೆ ಬಂದರೆ ಸೇರಿಕೊಳ್ಳಬೇಕಾದ ನಿರ್ಣಯವನ್ನು ಬಿಜೆಪಿ ಹೈಕಮಾಂಡ ಮಾಡಲಿದೆ ಎಂದು ಯತ್ನಾಳ ತಿಳಿಸಿದರು.

ಹೊಸ ಪ್ರಾದೇಶಿಕ ಪಕ್ಷ ರಚನೆ ಪ್ರಶ್ನೆಯೇ ಇಲ್ಲ

ಮಾಜಿ ಸಚಿವ ರಮೇಶ ಜಾರಕಿಹೊಳಿ ಜೊತೆ ತಾವು ನಡೆಸಿದ ಸಭೆಯಲ್ಲಿ ಹೊಸ ಪ್ರಾದೇಶಿಕ ಪಕ್ಷ ರಚನೆ ಕುರಿತು ಚರ್ಚೆ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಿಯ ಪಕ್ಷ ಕಟ್ಟುವುದು.  ಇರುವ ದೇವೇಗೌಡರ ಪಕ್ಷವೇ ಮಲಗಿಕೊಂಡಿದೆ.  ನಮ್ಮಲ್ಲಿ ಲೂಟಿ ಮಾಡಿದ ಹಣವಿದೆಯಾ? ಹಣವಿದ್ದರೆ ಪಕ್ಷ ಕಟ್ಟಬಹುದಿತ್ತು.  ನಾವೆಲ್ಲ ಮೂಲ ಬಿಜೆಪಿಯವರು.  ಪಕ್ಷ ಬಿಟ್ಟು ಹೋಗಿ ಮತ್ತೋಂದು ಪಕ್ಷ ಕಟ್ಟುವ ಶಕ್ತಿ ನಮ್ಮಲ್ಲಿಲ್ಲ.  ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಬಗ್ಗೆ ಜಾರಕಿಹೊಳಿ ಅವರ ಜೊತೆ ಚರ್ಚಿಸಿದ್ದೇವೆ.  ದೇವರ ಸಾಕ್ಷಿಯಾಗಿ ಹೇಳುತ್ತೇನೆ.  ನಾವು ಯಾವುದೇ ಪಕ್ಟ ಕಟ್ಟುವ ಬಗ್ಗೆಯಾಗಲಿ, ಬ್ಲ್ಯಾಕ್ ಮೇಲ್ ಮಾಡುವ ಕೆಲಸ ಮಾಡುವುದಿಲ್ಲ.  ನಮ್ಮ ಪಕ್ಷದಲ್ಲಿ ನಮ್ಮ ನಾಯಕರು ನಮ್ಮ ಮೇಲೆ ಭರವಸೆ ಇಟ್ಟಿದ್ದಾರೆ ಎಂದು ಸ್ಪಷ್ಚಪಡಿಸಿದರು.

ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಹೇಳಿದ್ದಾರೆ

ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರು ಮುಕ್ತವಾಗಿ ಮೂರ್ನಾಲ್ಕು ದಿನಗಳ ಹಿಂದೆ ನನ್ನ ಜೊತೆ ಮಾತನಾಡಿದ್ದಾರೆ.  ಯಾವಾಗಲೂ ನಿಮ್ಮ ಜೊತೆಗೆ ಇರುತ್ತೇವೆ.  ಈ ಬಾರಿ ವಿಜಯಪುರ ಜಿಲ್ಲೆಗೆ ಸೂಕ್ತ ನ್ಯಾಯ ಒದಗಿಸುತ್ತೇನೆ.  ಸಚಿವ ಸ್ಥಾನ ಕೊಡುವುದಾಗಿ ಭರವಸೆ ನೀಡಿದ್ದಾರೆ.  ಅಲ್ಲದೇ, ಸಿಎಂ ತಮ್ಮ ಜನ್ಮದಿನದ ದಿನ ವಿಜಯಪುರ ಜಿಲ್ಲೆಗೆ ಮತ್ತೆ ರೂ. 50 ಕೋ. ಅನುದಾನ ನೀಡುವುದಾಗಿ ಹೇಳಿದ್ದಾರೆ. ಇನ್ನೂ ಬೇಕಿದ್ದರೆ ಹಣ ನೀಡುವುದಾಗಿ ತಿಳಿಸಿದ್ದಾರೆ.  ಇನ್ನಾರು ತಿಂಗಳಲ್ಲಿ ವಿಜಯಪುರ ಮತಕ್ಷೇತ್ರದ ಚಿತ್ರಣವೇ ಬದಲಾಗಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲವ ಯತ್ನಾಳ ತಿಳಿಸಿದರು.

Leave a Reply

ಹೊಸ ಪೋಸ್ಟ್‌