ಬಿಜೆಪಿ, ಕಾಂಗ್ರೆಸ್ ಬಿಡುವವರ ಪಟ್ಟಿ ನನ್ನ ಬಳಿ ಇದೆ- ಚುನಾವಣೆ ಆರು ತಿಂಗಳಿರುವಾಗ ಸಂಪುಟ ವಿಸ್ತರಿಸಿದರೆ ಸಚಿವನಾಗಲ್ಲ- ಯತ್ನಾಳ

ವಿಜಯಪುರ: ಬಿಜೆಪಿ ಮತ್ತು ಕಾಂಗ್ರೆಸ್ ಬಿಡುವವರ ಲಿಸ್ಟ್ ತಮ್ಮ ಬಳಿ ಇದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿಡುವವರ ಲಿಸ್ಟ್ ನನ್ನ ಬಳಿ ಇದೆ. ಅದೇ ರೀತಿ, ಬಿಜೆಪಿ ಬಿಡುವವರ ಲಿಸ್ಟ್ ಕೂಡ ನನ್ನ ಬಳಿ ಇದೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ತಿಳಿಸಿದರು.

ಆರು ತಿಂಗಳು ತಡೆಯಿರಿ. ಜಾದು ಹೇಗೆ ನಡೆಯುತ್ತದೆ ಎಂಬುದನ್ನು ನೋಡುತ್ತೀರಿ. ಕಾಂಗ್ರೆಸ್ ಬಿಡುವವರ ಸಂಖ್ಯೆ ಈಗ ಹೇಳಲು ಬರುವುದಿಲ್ಲ. ಕಾಂಗ್ರೆಸನ್ನು ಮಾಜಿ ಸಿಎಂ ಎಸ್. ಸಿದ್ದರಾಮಯ್ಯ ಅವರೇ ಬಿಟ್ಟರೂ ಅಚ್ಚರಿ ಇಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಸಿದ್ಧರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸುವುದು ಕೆ ಪಿ ಸಿ ಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅವರ ಪಾದಯಾತ್ರೆಯ ಉದ್ದೇಶವಾಗಿದೆ. ಅವರು ಜನರಿಗಾಗಿ ಪಾದಯಾತ್ರೆ ಮಾಡಿಲ್ಲ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

50 ವರ್ಷ ದೇಶ ಆಳಿದ ಕಾಂಗ್ರೆಸ್ಸಿಗರು ಆಗ ಮೇಕೆದಾಟು ಮತ್ತು ಆಲಮಟ್ಟಿ ಯೋಜನೆಗಳಿಗಾಗಿ ಹೋರಾಟ ಮಾಡಲಿಲ್ಲ. ಆವಾಗ ಕಾವೇರಿ ನ್ಯಾಯ ಬಗೆ ಹರಿಸಲಿಲ್ಲ. ಅಧಿಕಾರ ಅನುಭವಿಸಿ ಲೂಟಿ ಮಾಡಿ ಮತ್ತೆ ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು 50 ವರ್ಷ ಮಾಡಿದ ಲೂಟಿ ಹಣವನ್ನು ರಾಜ್ಯ ಸರಕಾರಕ್ಕೆ ವಾಪಸ್ ನೀಡಿದರೇ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಅವರು ತಿಳಿಸಿದರು.

ಮಹಾದಾಯಿ ಪಾದಯಾತ್ರೆ ವಿಚಾರಮಹಾದಾಯಿ ಪಾದಯಾತ್ರೆ ಯೋಜನೆ ಕುರಿತು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೋರಾಟದ ಕುರಿತು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ಹೀಗೆ ಮಾಡುತ್ತಿದೆ. ಜನರನ್ನು ಮರಳು ಮಾಡಲು ಹೀಗೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಹೋರಾಟ ವಿಚಾರ

370ನೇ ಕಲಂ ನಡಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಲುವಾಗಿ ಹೋರಾಟ ಮಾಡುವುದಾಗಿ ಖಂಡ್ರೆ ಮೊನ್ನೆ ಹೇಳಿದ್ದಾರೆ. ನಾಲ್ಕು ವರ್ಷ ಸುಮ್ಮನಿದ್ದು ಈಗ ಏಕೆ ಹೋರಾಟ ಮಾಡುತ್ತೀರಿ? ಈಗ ಚುನಾವಣೆ ವರ್ಷವಿದೆ. ಇವೆಲ್ಲು ದುರುದ್ದೇಶಪೂರಕವಾದ ವಿಚಾರಗಳಾಗಿವೆ. ಜನರು ಹುಚ್ಚರಿಲ್ಲ, ಅವರಿಗು ಎಲ್ಲ ತಿಳಿಯುತ್ತದೆ. ಇದರಿಂದ ಕಾಂಗ್ರೆಸ್ ಯಶಸ್ವಿಯಾಗುವುದಿಲ್ಲ ಎಂದ ಅವರು ಹೇಳಿದರು.

ಸಚಿವರ ವಿರುದ್ಧ ಶಾಸಕ ರೇಣುಕಾಚಾರ್ಯರ ದೂರು ವಿಚಾರ

ಸಚಿವರ ಕಾರ್ಯ ವೈಖರಿ ಬಗ್ಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೈಕಮಾಂಡ್ ಗೆ ದೂರು ಕೊಟ್ಟಿರುವುದು ಅವರ ವೈಯಕ್ತಿಕ ವಿಚಾರ. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ಯಾವ ಸಚಿವರ ವಿರುದ್ಧವು ದೂರು ಕೊಡಲ್ಲ. ನನ್ನ ಜೊತೆಗೆ ಎಲ್ಲ ಸಚಿವರು ಚೆನ್ನಾಗಿದ್ದಾರೆ. ಸಚಿವರು ಸಹಕಾರ ನೀಡಿದ್ದಾರೆ. ಸಚಿವರ ಬಳಿಗೆ ಹೋದಾಗ ಗೌರವ ಕೊಟ್ಟಿದ್ದಾರೆ. ನಾನು ಹೇಳಿದಾಗ ಆದಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಯಾವ ಸಚಿವರ ಬಗ್ಗೆಯೂ ನನ್ನ ಆರೋಪ, ದೂರು ಇಲ್ಲ ಎಂದು ಯತ್ನಾಳ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಸಚಿವರಿಗೆ ಸಲಹೆ ಕೊಡುವ ಅಧಿಕಾರ ಶಾಸಕರಿಗಿದೆ. ರೂ. 125 ಕೋ. ಅನುದಾನ ವಾಪಾಸ್ ಪಡೆದಾಗ ನಾನೇ ಯಡಿಯೂರಪ್ಪ ನವರ ವಿರುದ್ಧ ಮಾತನಾಡಿದ್ದೆ. ಅಭಿವೃದ್ಧಿ ವಿಚಾರದಲ್ಲಿ ಮಾತನಾಡುವುದು ಬೇರೆ. ಅಭಿವೃದ್ಧಿ ಕೆಲಸಗಳಿಗೆ ನ್ಯಾಯ ಸಿಗದೇ ಇದ್ದಾಗ ಹೋರಾಟ ಮಾಡುತ್ತೇವೆ. ಈಗ ಯಾವ ಸಚಿವರ ವಿರುದ್ಧವೂ ನಾನು ಆರೋಪ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರ

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆದಷ್ಟು ಬೇಗನೆ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎನ್ನುವ ವಿಶ್ವಾಸವಿದೆ. ಚುನಾವಣೆ ಕೇವಲ ಆರು ತಿಂಗಳು ಇರುವಾಗ ಸಂಪುಟ ಪುನಾರಚನೆ ಮಾಡಿದರೆ ನಾವ್ಯಾರು ಮಂತ್ರಿ ಆಗುವುದಿಲ್ಲ. ಆದಷ್ಟು ಬೇಗ ಸಂಪುಟ ಪುನರ್ರಚನೆ ವಿಶ್ವಾಸ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿಯನ್ನು ಭೇಟಿ ಮಾಡಬೇಕು. ಪಂಚರಾಜ್ಯ ಚುನಾವಣೆ ಇದೆ. ಸಿಎಂ ಮಂಗಳವಾರ ದೆಹಲಿಗೆ ಹೊರಟಿದ್ದಾರೆ. ಚರ್ಚೆ ನಡೆಸಿ ಸಂಪುಟ ವಿಸ್ತರಣೆ ಮಾಡಬಹುದು. ಆದರೆ, ಯಾವಾಗ ಆಗುತ್ತದೆ ಗೊತ್ತಿಲ್ಲ. ಆದರೆ, ಚುನಾವಣೆಗೆ ಕೇವಲ ಆರು ತಿಂಗಳು ಮುಂಚೆ ಸಚಿವ ಸ್ಥಾನ ನೀಡದರೆ ನಾವ್ಯಾರು ಮಂತ್ರಿ ಆಗುವುದಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

Leave a Reply

ಹೊಸ ಪೋಸ್ಟ್‌