ಬೆಂಗಳೂರು: ಕೇಂದ್ರ ಬಜೆಟ್ ನೌಕರರು, ಮಧ್ಯಮ ವರ್ಗದವರು, ಬಡವರು, ರೈತರು ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವವರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನಿರಾಸೆ ಮೂಡಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.
ಗೋವಾ ಚುನಾವಣೆ ಹಿನ್ನೆಲೆ ಎಐಸಿಸಿ ವೀಕ್ಷಕರಾಗಿ ತೆರಳಿರುವ ಎಂ. ಬಿ. ಪಾಟೀಲ ಅಲ್ಲಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದ್ದು, ಜನಸಾಮಾನ್ಯರ ಪಾಲಿಗೆ ಹೊರೆಯಾದ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.
ದೇಶದ ಜಿಡಿಪಿಗೆ ಮಹತ್ವದ ಕೊಡುಗೆ ನೀಡುವ ಕೃಷಿ ಕ್ಷೇತ್ರದ ನಿರೀಕ್ಷೆಗಳನ್ನು ಈ ಬಜೆಟ್ ಹುಸಿ ಮಾಡಿದೆ. ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಬಜೆಟ್ ನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಡಿಪಿಗೆ ಬಲನೀಡುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಕ್ಷೇತ್ರವನ್ನೂ ಕಡೆಗಣಿಸಲಾಗಿದೆ. ಈ ಕ್ಷೇತ್ರ ಅನೇಕ ಜನರಿಗೆ ಉದ್ಯೋಗ ನೀಡುತ್ತಿದೆ. ಕೋವಿಡ್-19 ನಿಂದಾಗಿ ಈ ಕ್ಷೇತ್ರದ ಸಹಸ್ರಾರು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ, ಬಜೆಟ್ ನಲ್ಲಿ ಈ ಕ್ಷೇತ್ರವನ್ನು ನಿರ್ಲಕ್ಷಿಸಿರುವುದು ಸರಿಯಲ್ಲ. ಅಷ್ಟೇ ಅಲ್ಲ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿ ಅದನ್ನು 60 ಲಕ್ಷಕ್ಕೆ ಕಡಿತ ಮಾಡಿರುವುದು ಅಸಮರ್ಪಕ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ಹೊಸ ಡಿಜಿಟಲ್ ಕರೆನ್ಸಿ ಪ್ರಸ್ತಾಪದಿಂದಾಗಿ ಈಗ ನಡೆಯುತ್ತಿರುವ ಆನಲೈನ್ ವ್ಯವಹಾರವನ್ನು ಗೊಂದಲಕ್ಕೆ ದೂಡಿದಂತಾಗುತ್ತಿದೆ. ಈ ಬಜೆಟ್ ನಲ್ಲಿ ಶೇ. 6.9 ವಿತ್ತಿಯ ಕೊರತೆ ಇದ್ದು ಇದು ಕೂಡ ಅಸಮರ್ಪಕ ನಿರ್ವಹಣೆಗೆ ಸಾಕ್ಷಿಯಾಗಿದೆ. ಅನಬ್ಲೆಂಡೆಡ್ ತೈಲ ಬೆಲೆಯನ್ನು ರೂ. 2ಕ್ಕೆ ಹೆಚ್ಚಿಸುವ ಪ್ರಸ್ತಾಪ ಆರ್ಥಿಕ ಚಟುವಟಿಕೆಗಳಿಗೆ ಹೊರೆ ಉಂಟು ಮಾಡಲಿದೆ. ರೇಲ್ವೆ ಕ್ಷೇತ್ರಕ್ಕೆ 400 ವಂದೆ ಮಾತರಂ ರೈಲುಗಳನ್ನು ಹೊರತು ಪಡಿಸಿದರೆ ಮತ್ಯಾವ ಕೊಡುಗೆಯನ್ನೂ ನೀಡದಿರುವುದು ವಿಪರ್ತಾಸ ಎಂದು ಅವರು ಹೇಳಿದ್ದಾರೆ.
ಈ ಬಜೆಟ್ ನಲ್ಲಿ ಸಧ್ಯಕ್ಕೆ ತುರ್ತಾಗಿ ನೆರವಾಗಬೇಕಿರುವ ನರೇಗಾ ಕುರಿತಾಗಲಿ, ರಕ್ಷಣಾ ಕ್ಷೇತ್ರದ ಕುರಿತಾಗಲಿ ಜನಸಾಮಾನ್ಯರ ಹಿತರಕ್ಷಣೆಯಾಗಲಿ ಸ್ಪಂದಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆ ಈ ಬಜೆಟ್ ಸಾಮಾನ್ಯ ಜನರ ಪಾಲಿಗೆ ಸಂಪೂರ್ಣ ನಿರಾಸೆ ಮೂಡಿಸಿದೆ. ಅಲ್ಲದೇ ಕರ್ನಾಟಕ ರಾಜ್ಯಕ್ಕಂತೂ ಏನೂ ಕೊಡುಗೆ ನೀಡಿಲ್ಲ ಎಂದು ಎಂ. ಬಿ.ಪಾಟೀಲ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.