ಸವನಹಳ್ಳಿ, ಹೊನಗನಹಳ್ಳಿ ವಿಜಯಪುರ ತಾಲೂಕಿಗೆ ಮರುಸೇರ್ಪಡೆ- ಎಂ. ಬಿ. ಪಾಟೀಲ

ಬೆಂಗಳೂರು. ಬಬಲೇಶ್ವರ ತಾಲೂಕಿನ ಸವನಹಳ್ಳಿ ಮತ್ತು ಹೊನಗನಹಳ್ಳಿ ಗ್ರಾಮಗಳನ್ನು ವಿಜಯಪುರಕ್ಕೆ ಮರು ಸೇರ್ಪಡೆ ಮಾಡಿ ಸರಕಾರ ಆದೇಶ ಹೊರಡಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಮತ್ತು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಗೋವಾದಿಂದ ಮಾಹಿತಿ ನೀಡಿದ ಅವರು, ಹೊಸ ತಾಲೂಕುಗಳ ರಚನೆ ಸಂದರ್ಭದಲ್ಲಿ ಸವನಹಳ್ಳಿ ಮತ್ತು ಹೊನಗನಹಳ್ಳಿ ಗ್ರಾಮಗಳನ್ನು ನೂತನ ಬಬಲೇಶ್ವರ ತಾಲೂಕಿಗೆ ಸೇರ್ಪಡೆ ಮಾಡಲಾಗಿತ್ತು. ಆದರೆ, ಸರಕಾರದ ಈ ನಿರ್ಧಾರದಿಂದಾಗಿ ಎರಡೂ ಗ್ರಾಮಗಳ ಜನರಿಗೆ ತೊಂದರೆಯಾಗಿತ್ತು. ತಮ್ಮ ದೈನಂದಿನ ಕಚೇರಿ ಕೆಲಸಗಳಿಗಾಗಿ ಬಬಲೇಶ್ವರಕ್ಕೆ ತೆರಳಲು ಅನಾನುಕೂಲವಾಗಿತ್ತು. ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಈ ಮುಂಚೆಯಂತೆ ವಿಜಯಪುರ ತಾಲೂಕಿನಲ್ಲಿಯೇ ತಮ್ಮ ಗ್ರಾಮಗಳನ್ನು ಮುಂದುವರೆಸುವಂತೆ ಗ್ರಾಮಸ್ಥರು ನನಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾನು
ದಿ. 30.09.2021ರಂದು ಕಂದಾಯ ಸಚಿವ ಆರ್. ಅಶೋಕ ಅವರನ್ನು ಭೇಟಿ ಮಾಡಿ ಸವನಹಳ್ಳಿ ಮತ್ತು ಹೊನಗನಹಳ್ಳಿ ಗ್ರಾಮಗಳನ್ನು ಬಬಲೇಶ್ವರ ತಾಲೂಕಿನಿಂದ ಬೇರ್ಪಡಿಸಿ, ಈ ಹಿಂದೆ ಇದ್ದಂತೆ ವಿಜಯಪುರ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಪತ್ರ ಬರೆದು ಕೋರಿದ್ದೆ‌. ಅಲ್ಲದೇ ಸಚಿವರೊಂದಿಗೆ ಚರ್ಚುಸಿದ್ದೆ. ಅವರು ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದ ನಂತರ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿ ಈ ಸಮಸ್ಯೆಯನ್ನು ಮನದಟ್ಟು ಮಾಡಿದ ಪರಿಣಾಮ ಈ ಆದೇಶ ಹೊರ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಮುಂದೆ ಈ ಎರಡೂ ಗ್ರಾಮಗಳ ಜನತೆ ತಮ್ಮ ಸರಕಾರಿ ಕೆಲಸಗಳಿಗೆ ಮೊದಲಿನಂತೆ ವಿಜಯಪುರಕ್ಕೆ ತೆರಳಲು ಅನುಕೂಲವಾಗಲಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌