ವಿಜಯಪುರ: ಮುಂದಿನ ಬಾರಿ ನಾನೂ ಬಿಜೆಪಿ ಟಿಕೆಟ್ ಕೇಳುತ್ತೇನೆ. ಕಳೆದ ಬಾರಿ ಯತ್ನಾಳ ಅವರಿಗೆ ಬಿಜೆಪಿ ಟಿಕೆಟ್ ನೀಡಿದವರಿಗೆ ಈಗ ಸೂಕ್ತ ಅನುಭವವಾಗಿದೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾನು ಪಕ್ಷ ವಿರೋಧಿ ಕೆಲಸವನ್ನು ಎಂದೂ ಮಾಡಿಲ್ಲ, ಈ ಹಿಂದೆ ಟಿಕೇಟ್ ಕೈ ತಪ್ಪಿದಾಗ ಬಿಜೆಪಿ ಹಿರಿಯ ನಾಯಕರು ಪಕ್ಷ ಸಂಘಟನೆ ಮಾಡಿ, ವಿಜಯಪುರ ನಗರ ವಿಧಾನಸಭೆ ಕ್ಷೇತ್ರದಲ್ಲಿ ನಿಮಗೆ ಮುಜುಗರವಾದರೆ ಬೇರೆ ಕ್ಷೇತ್ರದಲ್ಲಿ ಪ್ರಚಾರ ಸಾರಥ್ಯ ವಹಿಸಿ ಎಂದು ಸೂಚನೆ ನೀಡಿದ್ದರು, ಪಕ್ಷ ನನ್ನ ಮಾತೃ ಸಮಾನ, ಈ ಪಕ್ಷಕ್ಕಾಗಿ ನಾನು ಸುಮ್ಮನಿದ್ದೆ, ಹೀಗಾಗಿಯೇ ವಿಜಯಪುರ ನಗರ ಮತಕ್ಷೇತ್ರದಿಂದ ಯತ್ನಾಳ ಶಾಸಕರಾಗಿ ಆಯ್ಕೆಯಾಗುವಂತಾಯಿತು. ಇದನ್ನು ಅವರು ಮರೆಯಬಾರದು ಎಂದು ಪಟ್ಟಣಶೆಟ್ಟಿ ಚಾಟಿ ಬೀಸಿದರು.
ಮುಂದಿನ ಬಾರಿ ನಾನು ಬಿಜೆಪಿ ಟಿಕೆಟ್ ಕೇಳುತ್ತೇನೆ. ಕಳೆದ ಬಾರಿ ನನಗೆ ಟಿಕೆಟ್ ತಪ್ಪಿಸಿ ಯತ್ನಾಳ ಅವರಿಗೆ ಟಿಕೆಟ್ ನೀಡಿದವರಿಗೆ ಈಗ ಪಶ್ಚಾತ್ತಾಪವಾಗಿದೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಪ್ರಸ್ತಾಪಿಸಿದ ಅಪ್ಪು ಪಟ್ಟಣಶೆಟ್ಟಿ, ಕಳೆದ ಬಾರಿ ಹಿರಿಯರು ಹೇಳಿದ್ದರಿಂದ ಟಿಕೆಟ್ ಕೈತಪ್ಪಿದರೂ ಬಿಜೆಪಿಯಲ್ಲಿಯೇ ಇದ್ದೇನೆ. ಈ ಬಾರಿ ವಿಜಯಪುರದಿಂದ ಬಿಜೆಪಿ ಟಿಕೆಟ್ ಕೇಳುತ್ತೇನೆ. ಬಿಜೆಪಿಯೇ ನನ್ನ ಜೀವ, ಜೀವನ ಇರುವವರೆಗೂ ಬಿಜೆಪಿಯಲ್ಲಿಯೇ ಇರುವ ಆಸೆ ಇದೆ. ಪಕ್ಷ ಬಿಡುವ ಬಗ್ಗೆ ಯಾವತ್ತೂ ಯೋಚಿಸುವುದಿಲ್ಲ, ನನಗೆ ಬಿಜೆಪಿ ಹೈಕಮಾಂಡ್ ಮೇಲೆ ಸಂಪೂರ್ಣ ಭರವಸೆ ಇದೆ ಎಂದು ಹೇಳಿದರು.
ಯತ್ನಾಳ ಬೋಗಸ ರಾಜಕಾರಣಿ
ಚುನಾವಣೆ ಬಂದಾಗ ನಗರ ಶಾಸಕರಿಗೆ ಹಿಂದೂತ್ವ ನೆನಪಾಗುತ್ತದೆ, ಯತ್ನಾಳರದು ಬರಿ ಬೋಗಸ್ ಕೆಲಸ. ಅವರು ಬೋಗಸ್ ರಾಜಕಾರಣಿ. ಬಿಜೆಪಿಯಲ್ಲಿ ತಾವೇ ಸೀನಿಯರ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಎಲ್ಲ ಹೇಳಿಕೆಗಳನ್ನು ಗಮನಿಸಿದರೆ ಅವರಿಗೆ ತಲೆ ಸರಿ ಇಲ್ಲ ಎಂಬ ಸಂಶಯ ಬರುತ್ತದೆ ಎಂದು ಅವರು ವಾಗ್ದಾಳಿ ನಡೆಸಿದರು. ಉತ್ತರ ಕರ್ನಾಟಕದವರು ಇರಲಿ ಎಂದು ಅನಂತಕುಮಾರ ಅವರು ಕೇಂದ್ರ ಸಚಿವರನ್ನು ಮಾಡಿದ್ದು ವಾಸ್ತವ. ಆದರೆ ಅನವಶ್ಯಕ ವಾಜಪೇಯಿ ಹೆಸರು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಯತ್ನಾಳಗೆ ಬಹಿರಂಗ ಸವಾಲು
ನಾನು ಅಕ್ರಮವಾಗಿ ಆಸ್ತಿ ಮಾಡಿದ್ದೇನೆ. ಗೂಂಡಾಗಳ ಹೆಸರಿನಲ್ಲಿ ಆಸ್ತಿ ದಾಖಲಿಸಿದ್ದೇನೆ ಎಂದು ಯತ್ನಾಳ ಆರೋಪಿಸುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ದಾಖಲೆ ಸಮೇತ ಮಾತನಾಡಲಿ, ಮುಖ್ಯ ರಸ್ತೆಯಲ್ಲಿ ಯತ್ನಾಳರೇ ವೇದಿಕೆ ನಿರ್ಮಿಸಲಿ. ಅಲ್ಲಿ ಇದನ್ನು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದ ಅವರು, ಅನಾವಶ್ಯಕವಾಗಿ ನನ್ನನ್ನು ಕೆಣಕಬೇಡಿ. ಸಂದಿ-ಗೊಂದಿಯಲ್ಲಿ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ನಾನು ದೊಡ್ಡ ಲೀಡರ್ ಅದಿನಿ. ನಾನೇ ಪಕ್ಷ ಕಟ್ಟಿದವ ಎಂದು ಹೇಳಿಕೊಂಡು ಚಪ್ಪಾಳೆ ಗಿಟ್ಟಿಸಿಕೊಳ್ಳಬೇಡಿ. ತಲೆ ಸರಿಯಿಲ್ಲವರು ಹೀಗೆ ಮಾತನಾಡುತ್ತಾರೆ. ಎಲೆಕ್ಷನ್ ಬರಲಿ. ಬೀದಿ ನಾಯಿಗೆ ಉತ್ತರ ಕೊಡಲ್ಲ ಎಂದು ಹೇಳುವ ನೀವು ದಡ್ಡರು. ಮುಂಬರುವ ಚುನಾವಣೆಯಲ್ಲಿ ಯಾವುದು ನಾಯಿ, ಯಾವುದು ಬೆಕ್ಕು ಎಂಬುದನ್ನು ತೋರಿಸುತ್ತೇವೆ. ಪ್ರತಿನಿತ್ಯ ಒಬ್ಬೊಬ್ಬ ನಾಯಕರ ಮನೆಗೆ ಹೋಗುವುದನ್ನು ಬಿಡಿ. ನೀವು ಎಲ್ಲಿಯೂ ದೃಢವಾಗಿ ನಿಲ್ಲುವಂಥವರಲ್ಲ. ನಾನಾ ಸಚಿವ ಸ್ಥಾನ ಆಕಾಂಕ್ಷಿಯಲ್ಲ ಎಂದು ಹೇಳುತ್ತೀರಿ. ಮತ್ತೆ ಮತ್ತೆ ಸಚಿವ ಸ್ಥಾನಕ್ಕೆ ಲಾಭಿ ಮಾಡುತ್ತೀರಿ ಎಂದು ಅವರು ವಿಜಯಪುರ ನಗರ ಬಿಜೆಪಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಾನೂ ಕೆಲಸ ಮಾಡಿದ್ದೇನೆ
ಈವರೆಗೆ ವಿಜಯಪುರ ನಗರದಿಂದ ಆಯ್ಕೆಯಾದ ಶಾಸಕರು ಏನೂ ಕೆಲಸ ಮಾಡಿಲ್ಲ ಎಂದು ಯತ್ನಾಳ ಆರೋಪ ಮಾಡುತ್ತಾರೆ. ಆದರೆ, ನಾನು ಶಾಸಕನಾಗಿದ್ದಾಗ ರೂ. 120 ಕೋ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ, ರೂ. 62 ಕೋ. ವೆಚ್ಚದಲ್ಲಿ ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಯತ್ನಾಳ ಹೇಳಿಕೆ ಹಾಸ್ಯಾಸ್ಪದವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಯತ್ನಾಳರು ಟೀಕಿಸಿದ್ದಾರೆ, ಈ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ, ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಅವರು ಹೇಳಿದರು.
ಸಬ್ ರಜಿಸ್ಟ್ರಾರ್ ಕಚೇರಿ ಭ್ರಷ್ಟಾಚಾರದ ಕೂಪವಾಗಿದೆ ಸಿಐಡಿ ತನಿಖೆಯಾಗಲಿ
ಇದೇ ವೇಳೆ, ವಿಜಯಪುರ ಸಬ್ ರಜಿಸ್ಚ್ರಾರ್ ಕಚೇರಿ ಭ್ರಷ್ಟಾಚಾರದ ಕೂಪವಾಗಿದೆ ಎಂದು ಆರೋಪಿಸಿದ ಅವರು, ಸಬ್ ರಜಿಸ್ಚ್ರಾರೊಬ್ಬರು ಕೋಟ್ಯಂತರ ರೂರಾಯಿ ಅವ್ಯವಹಾರ ಮಾಡಿದ್ದಾರೆ. ಉಪನೊಂದಣಾಧಿಕಾರಿಗಳ ಕಾರ್ಯವೈಖರಿ ಸರಿಯಿಲ್ಲ. ಕಚೇರಿಯಲ್ಲಿ ಅಕ್ರಮವಾಗಿ ಆಸ್ತಿಗಳನ್ನು ಪರಭಾರೆ ಮಾಡುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ, ಈ ಹಿಂದೆ ನಾನು ಈ ಬಗ್ಗೆ ಧ್ವನಿ ಎತ್ತಿದಾಗ ಆ ಅಧಿಕಾರಿಯನ್ನು ಸರಕಾರ ವರ್ಗಾವಣೆ ಮಾಡಿತ್ತು. ಆದರೆ, ಸ್ಥಳೀಯ ಶಾಸಕರು ವರ್ಗಾವಣೆಯಾಗಿ ಮೂರು ತಿಂಗಳ ನಂತರ ಮತ್ತೆ ಅದೇ ಅಧಿಕಾರಿಯನ್ನು ಮತ್ತೆ ಪ್ರತಿಷ್ಠಾಪಿಸಿದ್ದಾರೆ. ಸಬ್ ರಜಿಸ್ಚ್ರಾರ್ ನಾಲ್ಕೈದು ವರ್ಷಗಳಿಂದಲೂ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂದು ಆರೋಪಿಸಿದರು.
ನಕಲಿ ದಾಖಲೆ ಸೃಷ್ಟಿಸಿ ಆಸ್ತಿಗಳನ್ನು ಮಾರಾಟ ಮಾಡುವ ಕಾರ್ಯ ನಡೆಯುತ್ತಿದೆ, ಇದು ಗಂಭೀರವಾದ ಪ್ರಕರಣವಾಗಿದೆ, ಬಡವರು ಇದರಿಂದ ತೊಂದರೆ ಎದುರಿಸುವಂತಾಗಿದೆ. ಇದಕ್ಕೆಲ್ಲ ಇಲ್ಲಿನ ಹಿರಿಯ ನೋಂದಣಿ ಅಧಿಕಾರಿಯೇ ಹೊಣೆಯಾಗಿದ್ದಾರೆ. ಕರ್ನಾಟಕದಲ್ಲಯೇ ಆಸ್ತಿ ಅವ್ಯವಹಾರ ಪರಭಾರೆ ಮೂಲದ ದೊಡ್ಡ ಜಾಲವೇ ಇಲ್ಲಿ ಹೆಚ್ಚಾಗಿದೆ. ಈ ಅಕ್ರಮ ನಿಲ್ಲಿಸಲು ಆಗುತ್ತಿಲ್ಲ, ಈ ಕುರಿತು ಸಿಐಡಿ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಭ್ರಷ್ಟಾಚಾರ ಮುಕ್ತವಾಗಿದ್ದೇನೆ. ನಾನು ಸ್ವಚ್ಛ ಎಂದು ಉದ್ದುದ್ದ ಭಾಷಣ ಮಾಡುವ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಯನ್ನು ಸ್ಥಳೀಯ ಜನಪ್ರತಿನಿಧಿಗಳು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಶಾಸಕ ಯತ್ನಾಳ ಅವರಿಗೆ ಅರ್ಧ ನಾನೇ ಟಾರ್ಗೆಟ್. ಸರಕಾರಿ ಕಾರ್ಯಕ್ರಮಗಳನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರಕಾರಿ ಯೋಜನೆಗಳ ಬಗ್ಗೆ ಹೇಳುವುದನ್ನು ಬಿಟ್ಟು ಬರೀ ಆರೋಪದಲ್ಲೇ ಅರ್ಧ ಭಾಷಣ ಹೊಡೆಯುತ್ತಿದ್ದಾರೆ ಎಂದು ಅಪ್ಪು ಪಟ್ಟಣಶೆಟ್ಟಿ ಆರೋಪಿಸಿದರು.
ನಿರಾಣಿ ವಿರುದ್ಧ ಹೇಳಿಕೆಗೆ ಆಕ್ಷೇಪ
ಇದೇ ವೇಳೆ, ಸಚಿವ ಮುರುಗೇಶ ನಿರಾಣಿ ಅವರನ್ನು ತಾವೇ ಬಿಜೆಪಿಗೆ ಕರೆ ತಂದಿರುವುದಾಗಿ ಯತ್ನಾಳ ಹೇಳಿದ್ದಾರೆ. ಆದರೆ, ನಿಜ ಹೇಳಬೇಕೆಂದರೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ನಿರಾಣಿ ಅವರನ್ನು ಬಿಜೆಪಿಗೆ ಕರೆ ತಂದಿದ್ದಾರೆ. ನಿರಾಣಿ ಅವರು ರಾಜ್ಯ ಯುವ ಮೋರ್ಚಾ ಜವಾಬ್ದಾರಿ ಹೊತ್ತ ಸಂದರ್ಭದಲ್ಲಿ ಯತ್ನಾಳರು ಇನ್ನೂ ಜಿಲ್ಲಾ ಘಟಕದ ಪದಾಧಿಕಾರಿಯಾಗಿದ್ದರು. ವಿಷಯ ಹೀಗಿದ್ದಾಗ ನಿರಾಣಿ ಅವರನ್ನು ಬಿಜೆಪಿಗೆ ತಾವು ಕರೆ ತಂದಿರುವುದಾಗಿ ಯತ್ನಾಳ ಸುಳ್ಳು ಹೇಳುತ್ತಿದ್ದಾರೆ. ಯತ್ನಾಳ ಅವರು ಕೇಂದ್ರದಲ್ಲಿ ಸಚಿವರಾಗಲು ಕಾರಣರಾದ ದಿ. ಅನಂತಕುಮಾರ ಅವರನ್ನೇ ಮರೆತಿದ್ದಾರೆ. ಈ ಹಿಂದೆ ರೇಣುಕಾಚಾರ್ಯ ಅವರನ್ನು ಟೀಸಿದ್ದರು. ಈಗ ಅವರ ಮನೆಗೆ ಹೋಗಿದ್ದಾರೆ ಎಂದು ಪಟ್ಟಣಶೆಟ್ಟಿ ಟೀಕಾ ಪ್ರಹಾರ ನಡೆಸಿದರು.