ವಿಜಯಪುರ: ರಾಜ್ಯ ಹಾಗೂ ದೇಶದಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಲಸಿಕಾಕರಣ ಕೈಗೊಂಡಿರುವ ಜಿಲ್ಲೆಗಳಲ್ಲಿ ವಿಜಯಪುರ ಜಿಲ್ಲೆ ಮುಂಚೂಣಿಯಲ್ಲಿದ್ದು, ಇದೇ ಬದ್ಧತೆಯನ್ನು ಬೂಸ್ಟರ್ ಡೋಸ್ ನೀಡುವಲ್ಲಿಯೂ ತೋರಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಹೇಳಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣ ಕುರಿತು ನಾನಾ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ ಅವರು ಎರಡನೇ ಡೋಸ್ ಪಡೆದು ಒಂಭತ್ತು ತಿಂಗಳು ಪೂರೈಸಿದ ಎಲ್ಲರಿಗೂ ಇದು ಅನ್ವಯವಾಗುವಂತೆ ಕ್ರಮ ಕೈಗೊಂಡು, ಈ ಕಾರ್ಯದಲ್ಲಿಯೂ ಯಶಸ್ಸು ಸಾಧಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಶೇಷವಾಗಿ ಹೆಲ್ತ್ ಕೇರ್ ಮತ್ತು ಫ್ರಂಟ್‍ಲೈನ್ ವರ್ಕರ್ಸ್ ಗಳಿಗೆ ಇದು ತಲಪುವಂತೆ ನೋಡಿಕೊಳ್ಳಬೇಕು. ಇದರಲ್ಲಿಯೂ ಬಹಳ ಬೇಗನೇ ನಿಗದಿತ ಗುರಿ ಸಾಧಿಸುವಂತಾಗಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಾನಾ ಇಲಾಖೆಗಳ ಮೇಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಗುರುತಿಸಿ, ಆದಷ್ಟು ಬೇಗನೇ ತಪ್ಪದೇ ಅವರೆಲ್ಲರಿಗೂ ಲಸಿಕೆ ನೀಡುವಂತಾಗಬೇಕು. ಇದಕ್ಕಾಗಿ ನಾನಾ ಇಲಾಖೆಗಳ ಅಧಿಕಾರಿಗಳು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ, ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕಾಕರಣ ಕಾರ್ಯದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಿ, ಆದಷ್ಟು ಬೇಗನೇ ನಿರೀಕ್ಷಿತ ಗುರಿ ಸಾಧಿಸುವಂತಾಗಬೇಕು. ಶಾಲೆಯಿಂದ ಹೊರಗುಳಿದ, ಅನುತ್ತೀರ್ಣರಾದ ಮಕ್ಕಳನ್ನು ಗುರುತಿಸಿ, ಮನೆಮನೆಗೂ ಹೋಗಿ ಲಸಿಕೆ ನೀಡಬೇಕು. ಇದಕ್ಕಾಗಿ ಆಶಾ ಕಾರ್ಯಕರ್ತರನ್ನು ಬಳಸಿಕೊಂಡು ನಿರೀಕ್ಷಿತ ಗುರಿಯನ್ನು ಸಾಧಿಸುವಂತಾಗಬೇಕು ಎಂದು ಪಿ. ಸುನೀಲ ಕುಮಾರ ಸೂಚನೆ ನೀಡಿದರು.
ವಿಜಯಪುರ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, 15 ರಿಂದ 18 ವರ್ಷದೊಳಗಿನ ಮಕ್ಕಳ ಲಸಿಕಾಕರಣ ಕಾರ್ಯದಲ್ಲಿ ಶಾಲಾ ಕಾಲೇಜುಗಳಲ್ಲಿನ ವಸತಿ ನಿಲಯಗಳ ವಿದ್ಯಾರ್ಥಿಗಳು ಲಸಿಕೆ ಪಡೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ, ಅಂಥವರನ್ನು ಗುರುತಿಸಿ, ಮನೆಮನೆಗೆ ಹೋಗಿ ಅವರಿಗೆ ಲಸಿಕೆ ನೀಡಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ ಸೇರಿದಂತೆ ನಾನಾ ಇಲಾಖೆಗಳ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.