ಭಾರತೀಯ ಕಿರಿಯರ ತಂಡಕ್ಕೆ U19 ಕ್ರಿಕೆಟ್ ವಿಶ್ವಕಪ್ ಕಿರೀಟ- ಆಟಗಾರರು, ತಂಡದ ಸಿಬ್ಬಂದಿಗೆ ಬಿಸಿಸಿಐ ಬಹುಮಾನ ಘೋಷಣೆ

ವಿಜಯಪುರ: ವೆಸ್ಟ್ ಇಂಡೀಸ್ ನಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಜಯಿಸುವ ಮೂಲಕ ಭಾರತಿಯ ಕ್ರಿಕೆಟ್ ತಂಡ 5ನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಕಿರಿಯರ ತಂಡ ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಗಳ ಜಯಭೇರಿ ಬಾರಿಸುವ ಮೂಲಕ ಮತ್ತೆ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದೆ.  ಇದಕ್ಕೂ ಮುಂಚೆ ಭಾರತೀಯ ಕಿರಿಯರ ತಂಡ 2000, 2008, 2012 ಮತ್ತು 2016ರಲ್ಲಿಯೂ ವಿಶ್ವಕಪ್ ಗೆದ್ದಿತ್ತು.  ಈಗ 5ನೇ ಬಾರಿಗೆ ಗೆಲ್ಲುವ ಮೂಲಕ ಕಿರಿಯರ ವಿಭಾಗದಲ್ಲಿಯೂ ಕ್ರಿಕೆಟ್ ನಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ.

 

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಂಡು 44.5 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತು.  ಒಂದು ಹಂತದಲ್ಲಿ 24.3 ಓವರ್ ಗಳಲ್ಲಿ 91 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ನಂತರ ಚೇತರಿಸಿಕೊಂಡು 189ರನ್ ಗುರಿ ನೀಡಿತು.  ಈ ಸಂದರ್ಭದಲ್ಲಿ ಭಾರತದ ಇಬ್ಬರು ಯುವ ವೇಗಿಗಳು 9 ವಿಕೆಟ್ ಪಡೆಯುವ ಮೂಲಕ ಪಾರಮ್ಯ ಸಾಧಿಸಿದರು.  ರಾಜ ಅಂಗದ ಬಾವಾ 31 ರನ್ ನೀಡಿ 5 ವಿಕೆಟ್ ಪಡೆದರೆ, ಎಡಗೈ ವೇಗಿ ರವಿಕುಮಾರ 34 ರನ್ ನೀಡಿ 4 ವಿಕೆಟ್ ಪಡೆದರು.

ನಂತರ 189 ಸುಲಭ ರನ್ ಗುರಿ ಬೆನ್ನತ್ತಿದ ಭಾರತಕ್ಕೆ ಹರ್ನೂರಸಿಂಗ್ 21, ಶೇಖ್ ರಸೀದ್ 50, ನಾಯಕ ಯಶ್ ಧುಲ್ 17, ನಿಶಾಂತ ಸಿಂಧೂ ಅಜೆಯ 50, ರಾಜ ಬಾವಾ 35, ದಿನೇಶ ಬಾಣಾ ಅಜೆಯ 13 ರನ್ ಗಳಿಸಿ 47.4 ಓವರ್ ಗಳಲ್ಲಿ ಭಾರತ ಗೆಲ್ಲಲು ಕಾರಣರಾದರು.  ಇಂಗ್ಲೆಂಡ್ ಪರ ಜೋಶುವಾ ಬೈಡೆನ್ 24 ರನ್ ನೀಡಿ 2 ವಿಕೆಟ್ ಪಡೆದರೆ, ಜೇಮ್ಸ್ ಸೇಲ್ 51ಕ್ಕೆ 2 ಮತ್ತು ಥಾಮಸ್ ಆಸ್ಟಿನವಾಲ್ 42ಕ್ಕೆ 2 ವಿಕೇಟ್ ಪಡೆದರು.

ಆಲರೌಂಡ್ ಆಟ ಪ್ರದರ್ಶಿಸಿದ ಭಾರತದ ರಾಜ ಬಾವಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಬಹುಮಾನ ಘೋಷಿಸಿದ ಬಿಸಿಸಿಐ

5ನೇ ಬಾರಿಗೆ ವಿಶ್ವಕಪ್ ಗೆದ್ದು ಭಾರತಕ್ಕೆ ಹೆಮ್ಮೆ ತಂದ ಕಿರಿಯರ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಬಹುಮಾನ ಘೋಷಿಸಿದೆ.  ತಂಡದ ಪ್ರತಿಯೊಬ್ಬ ಆಟಗಾರರಿಗೆ ತಲಾ ರೂ. 40 ಲಕ್ಷ ಮತ್ತು ಇತರ ಸಿಬ್ಬಂದಿಗೆ ರೂ. 25 ಲಕ್ಷ ಬಹುಮಾನ ಘೋಷಿಸಿದೆ.

ಈ ಕುರಿತು ಬಿಸಿಸಿಐ ಗೌರವ ಕಾರ್ಯದರ್ಶಿ ಜಯ ಶಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ವಿಶ್ವಕಪ್ ಗೆದ್ದ ಭಾರತೀಯ ಕಿರಿಯರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌